ನಾಲ್ಕುನಾಡಿನಲ್ಲಿ ಕೈಲ್ ಮುಹೂರ್ತ

25.npk-1
ಕೊಡಗಿನ ಕೈಲ್ ಮುಹೂರ್ತ ಹಬ್ಬದಂದು ಆಯುಧಗಳಾದ ಕೋವಿ, ಕತ್ತಿ, ಭರ್ಜಿಯನ್ನು ನೆಲ್ಲಕ್ಕಿ ನಡುಬಾಡೆಯಲ್ಲಿಟ್ಟು ಆಯುಧ ಪೂಜೆ ಮಾಡಿರುವುದು.
Published on

ನಾಪೋಕ್ಲು: ಕೊಡಗಿನ ಹಬ್ಬಗಳಲ್ಲಿ ಹುತ್ತರಿ ಹಬ್ಬಕ್ಕೆ ಮೊದಲ ಸ್ಥಾನ ಇದ್ದರೆ ನಂತರದ ಸ್ಥಾನ ಕೈಲ್ ಮುಹೂರ್ತ(ಕೈಲ್ ಪೊಳ್ದ್ ) ಹಬ್ಬಕ್ಕಿದೆ. ಕೈಲ್ ಪೊಳ್ದ್ ಎಂದರೆ ಆಯುಧ ಪೂಜೆ.


ನಾಲ್ಕುನಾಡು ವ್ಯಾಪ್ತಿಯಲ್ಲಿ ಬಹುತೇಕ ಗ್ರಾಮಗಳಲ್ಲಿ ಆ.27ರಂದು ಹಾಗೂ ಇನ್ನಿತರ ಕಡೆಗಳಲ್ಲಿ ಸೆಪ್ಟೆಂಬರ್ 3ರಂದು ಕೈಲ್ ಮುಹೂರ್ತ ಹಬ್ಬವನ್ನು ಆಚರಿಸಲಾಗುತ್ತದೆ.


ಕೊಡಗಿನಲ್ಲಿ ಮಳೆಗಾಲ ಪ್ರಾರಂಭದಲ್ಲಿ ರೈತರು ತನಗೆ ಸೇರಿದ ಗದ್ದೆಯನ್ನು ಉತ್ತು ಬಿತ್ತಿ ಗದ್ದೆಯನ್ನು ನಾಟಿ ಮಾಡಿ ದಣಿದ ಸಂದರ್ಭದಲ್ಲಿ ತಾನು ಸಂತೋಷದಿಂದ ಈ ಹಬ್ಬವನ್ನು ವಿಜೃಂಭಣೆಯಿಂದ ಆಚರಿಸುತ್ತಾರೆ. ಈ ಸಂದರ್ಭ ಗದ್ದೆ ಕೆಲಸದಲ್ಲಿ ದಣಿದ ಎತ್ತುಗಳನ್ನು ಸ್ಥಾನ ಮಾಡಿಸಿ ನಂತರ ಉಳುವುದಕ್ಕೆ ಉಪಯೋಗಿಸಿದ ಆಯುಧಗಳಾದ ನೇಗಿಲು, ನೋಗಕ್ಕೆ ಪೂಜೆ ಸಲ್ಲಿಸಿ ಎತ್ತುಗಳಿಗೆ ಪಣಿ ಪುಟ್ಟು ತಿನಿಸುತ್ತಾರೆ. ನಂತರ ಮನೆಯಲ್ಲಿರುವ ಆಯುಧಗಳಾದ ಕೋವಿ, ಗೆಜ್ಜೆ ತಂಡ, ಕತ್ತಿಯನ್ನು ನೆಲ್ಲಕ್ಕಿ ನಡುಬಾಡೆಯಲ್ಲಿಟ್ಟು ಪೂಜೆ ಸಲ್ಲಿಸಿ ಹಬ್ಬದಲ್ಲಿ ಮಾಡಿದ ಖಾದ್ಯವಾದ ಕಡಂಬಿಟ್ಟು, ಮಾಂಸ ಸಾರು, ಮದ್ಯ ಮುಂತಾದವುಗಳನ್ನು ಮೀದಿ ಇಟ್ಟು ತಾನು ಕುಡಿದು ತಿಂದು ಸಂಭ್ರಮಿಸುತ್ತಾರೆ.


ಕೈಲ್ ಪೋಳ್ದ್ ಹಬ್ಬದ ಕ್ರೀಡಾಕೂಟ: ನಾಪೋಕ್ಲು ಭಗವತಿ ಯುವಕ ಸಂಘದ ಆಶ್ರಯದಲ್ಲಿ ಆ.27ರಂದು ನಾಪೋಕ್ಲು ಸರ್ಕಾರಿ ಮಾದರಿ ಪ್ರಾಥಮಿಕ ಶಾಲೆಯ ಆಟದ ಮೈದಾನದಲ್ಲಿ ಹಾಗೂ ಬೇತು ಗ್ರಾಮದ ಶ್ರೀ ಮಕ್ಕಿ ಶಾಸ್ತಾವು ಯುವಕ ಸಂಘದ ವತಿಯಿಂದ ಬೇತು ಸರ್ಕಾರಿ ಮಾದರಿ ಪ್ರಾಥಮಿಕ ಶಾಲೆಯ ಆಟದ ಮೈದಾನದಲ್ಲಿ, ಬಲ್ಲಮಾವಟ್ಟಿ ಗ್ರಾಮದ ಅಪೋಲೋ ಯುವಕ ಸಂಘ ಮತ್ತು ಕಾವೇರಿ ಮಹಿಳಾ ಸಮಾಜದ ಸಂಯುಕ್ತಾಶ್ರಯದಲ್ಲಿ ಬಲ್ಲಮಾವಟ್ಟಿ ನೇತಾಜಿ ಪ್ರೌಢಶಾಲೆ ಆಟದ ಮೈದಾನದಲ್ಲಿ ನಾಡಹಬ್ಬ ಕೈ ಮುಹೂರ್ತ ಪ್ರಯುಕ್ತ ವಿವಿಧ ಕ್ರೀಡಾಕೂಟವನ್ನು ಆಯೋಜಿಸಲಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net