

ವಿರಾಜಪೇಟೆ: ಕಡಂಗದ ಅರಫಾ ಕ್ರಿಕೆಟರ್ಸ್ ಕ್ರೀಡಾ ಸಂಘದ 25ನೇ ವರ್ಷದ ಬೆಳ್ಳಿ ಮಹೋತ್ಸವದ ಪ್ರಯುಕ್ತ ಆಯೋಜಿಸಿದ್ದ ಸೂಪರ್ ಸೆವೆನ್ ನ್ಯಾನೋ ಹೊನಲು ಬೆಳಕಿನ ಕ್ರಿಕೆಟ್ ಪಂದ್ಯಾವಳಿಯಲ್ಲಿ ಕೆವೈಸಿಸಿ ಕಡಂಗ ತಂಡವು ಡ್ರೀಮ್ಸ್ ಇಲೆವೆನ್ ನೆಲ್ಯಾಹುದಿಕೇರಿ ತಂಡವನ್ನು ಮಣಿಸಿ ಚಾಂಪಿಯನ್ ಪಟ್ಟ ಅಲಂಕರಿಸಿದರೆ, ಡ್ರೀಮ್ಸ್ ಇಲೆವೆನ್ ನೆಲ್ಯಾಹುದಿಕೇರಿ ತಂಡವು ರನ್ನರ್ಸ್‌ಗೆ ತೃಪ್ತಿ ಪಟ್ಟುಕೊಂಡಿತು.
ಕಡಂಗದ ವಿಜಯ ಪ್ರೌಢಶಾಲೆ ಮೈದಾನದಲ್ಲಿ ಸೋಮವಾರ ಆಯೋಜಿಸಿದ್ದ ಪಂದ್ಯಾವಳಿ ಉದ್ಘಾಟನಾ ಸಮಾರಂಭದಲ್ಲಿ ವಿಜಯ ಪ್ರೌಢಶಾಲೆ ನಿವೃತ್ತ ಮುಖ್ಯ ಶಿಕ್ಷಕಿ ಐ.ಎಂ.ರಾಣಿ ಪಾರ್ವತಿ ಮಾತನಾಡಿ, ಹಿಂದಿನ ಕಾಲದಿಂದಲೂ ಎಲ್ಲರನ್ನೂ ಒಗ್ಗೂಡಿಸಲು ಇಲ್ಲಿ ನಡೆಸಿಕೊಂಡು ಬರುತ್ತಿರುವ ಕ್ರೀಡಾಕೂಟವನ್ನು ಮುನ್ನಡೆಸುತ್ತಿರುವುದು ಶ್ಲಾಘನೀಯ. ಕ್ರೀಡೆಗಳನ್ನು ಆಯೋಜಿಸುವುದರಿಂದ ಪರಸ್ಪರ ಕ್ರೀಡಾ ಮನೋಭಾವದ ಜತೆಗೆ ಪರಸ್ಪರ ಸೌಹಾರ್ದ, ಸಾಮರಸ್ಯಕ್ಕೆ ವೇದಿಕೆಯಾಗಲಿದೆ ಎಂದರು.
ಮುಖ್ಯ ಅತಿಥಿಯಾಗಿದ್ದ ಅರಮೇರಿ ಎಸ್‌ಎಂಎಸ್ ಶಾಲೆ ಪ್ರಿನ್ಸಿಪಾಲ್ ಬಲ್ಲಚಂಡ ಕುಸುಮ್ ಟಿಟ್ಟು ಮಾತನಾಡಿ. ಕಡಂಗವು ಹಲವು ರೀತಿಯ ಕ್ರೀಡೆಗಳನ್ನು ಆಯೋಜಿಸುವ ಮೂಲಕ ಗಮನ ಸೆಳೆದಿದೆ. ಇಲ್ಲಿ ಪ್ರತಿ ವರ್ಷ ಹಲವು ಕ್ರೀಡಾಕೂಟಗಳನ್ನು ಆಯೋಜಿಸುವ ಮೂಲಕ ಸಾಮರಸ್ಯ ಮೂಡಲು ವೇದಿಕೆ ಒದಗಿಸುತ್ತಿದೆ ಎಂದರು. ಅಧ್ಯಕ್ಷತೆ ವಹಿಸಿದ್ದ ಅರಫಾ ಕ್ರಿಕೆಟರ್ಸ್ ಅಧ್ಯಕ್ಷ ಅಬ್ದುಲ್ ರೆಹಮಾನ್ ಅರಫಾ ಮಾತನಾಡಿದರು.
39 ತಂಡಗಳು ಭಾಗಿ: ಪಂದ್ಯಾವಳಿಯಲ್ಲಿ ಜಿಲ್ಲೆಯ ವಿವಿಧೆಡೆಯಿಂದ 39 ತಂಡಗಳು ಪಾಲ್ಗೊಂಡಿದ್ದವು. ಚಾಂಪಿಯನ್ ಕೆವೈಸಿಸಿ ಕಡಂಗ ತಂಡಕ್ಕೆ 25 ಸಾವಿರ ರೂ. ನಗದು ಹಾಗೂ ಆಕರ್ಷಕ ಟ್ರೋಫಿ, ರನ್ನರ್ಸ್ ಡ್ರಿಮ್ಸ್ ಇಲೆವೆನ್ ತಂಡಕ್ಕೆ 12,500 ರೂ. ನಗದು ಹಾಗೂ ಆಕರ್ಷಕ ಟ್ರೋಫಿ ಲಭಿಸಿತು.
ಸರಣಿ ಶ್ರೇಷ್ಠ ಪ್ರಶಸ್ತಿಯನ್ನು ಕೆವೈಸಿಸಿ ತಂಡದ ಆಸ್ಕರ್, ಪಂದ್ಯ ಪುರುಷ ಪ್ರಶಸ್ತಿಯನ್ನು ಕೆವೈಸಿಸಿ ತಂಡದ ಯೂನಸ್, ಉತ್ತಮ ಬ್ಯಾಟ್ಸ್‌ಮನ್ ಪ್ರಶಸ್ತಿಯನ್ನು ಕೆವೈಸಿಸಿ ತಂಡದ ನೌಶಾದ್, ಉತ್ತಮ ಬೌಲರ್ ಪ್ರಶಸ್ತಿಯನ್ನು ಡ್ರಿಮ್ಸ್ ಇಲೆವೆನ್ ತಂಡದ ನಿಖಿಲ್ ಪಡೆದುಕೊಂಡರು. ತೀರ್ಪುಗಾರರಾಗಿ ಶಾನಿದ್, ನೌಶಾದ್, ಯೂನಸ್ ಆಸ್ಕರ್, ಜುನೈದ್, ಸೈಫು ಕಾರ್ಯನಿರ್ವಹಿಸಿದರೆ, ಸ್ಕೋರರ್ ಆಗಿ ಆಫ್ಸಲ್, ಅರ್ಫಾಜ್, ಅಜ್ಮಲ್, ವೀಕ್ಷಕ ವಿವರಣೆಯನ್ನು ಸಹದ್ ನಡೆಸಿಕೊಟ್ಟರು.
ಇದೇ ವೇಳೆ ಕಡಂಗ ವಿಜಯ ಪ್ರೌಢ ಶಾಲೆಯಲ್ಲಿ 36 ವರ್ಷ ಸೇವೆ ಸಲ್ಲಿಸಿ ನಿವೃತ್ತರಾದ ಐ.ಎಂ.ರಾಣಿ ಪಾರ್ವತಿ, ಅಂಗನವಾಡಿ ಶಿಕ್ಷಕಿ ಕುಲ್ಲಚಂಡ ಟೈನಿ ಈರಪ್ಪ, ಬಲ್ಲಚಂಡ ಕುಸುಮ್ ಟಿಟ್ಟು, ವಿಜಯ ಇಂಗ್ಲಿಷ್ ಮಾಧ್ಯಮ ಶಾಲೆ ಮುಖ್ಯಶಿಕ್ಷಕಿ ಗೀತಾ ಭೋಜಮ್ಮ, ಶಾರದಾ ಕಣಿಯಂಡ, ನಿವೃತ್ತ ಸೈನಿಕ ಅಬ್ದುಲ್ ಸಲಾಂ, ಪೊಲೀಸ್ ಇಲಾಖೆಯಲ್ಲಿ ಸೇವೆ ಸಲ್ಲಿಸುತ್ತಿರುವ ಸಮೀಲ್ ಇತರರನ್ನು ಸನ್ಮಾನಿಸಲಾಯಿತು. ಪಂದ್ಯಾವಳಿ ಆಯೋಜಕರಾದ ರಫೀಕ್, ರಾಜಿಕ್ ಶಫೀರ್, ಸುಹೈಲ್, ಸಿದ್ದೀಕ್, ಉಬೈದ್, ನೌಶಾದ್, ಶಬಾದ್, ಹಸೀಂ ಇತರರು ಇದ್ದರು.