ಕೆವೈಸಿ ಅಪ್‌ಡೇಟ್ ನೆಪದಲ್ಲಿ 2.93 ಲಕ್ಷ ರೂ. ವಂಚನೆ

udp-online-banking-fraud
Published on

ಉಡುಪಿ: ಮೊಬೈಲ್‌ಗೆ ಕರೆ ಮಾಡಿದ ಅಪರಿಚಿತ ವ್ಯಕ್ತಿ ನಾನು ಬ್ಯಾಂಕ್ ಅಧಿಕಾರಿ, ಕೂಡಲೇ ನಿಮ್ಮ ಬ್ಯಾಂಕ್ ಖಾತೆಯ ಕೆ.ವೈ.ಸಿ. ಅಪ್‌ಡೇಟ್ ಮಾಡಬೇಕು. ಇಲ್ಲವಾದಲ್ಲಿ ಖಾತೆ ಬ್ಲಾಕ್ ಆಗುತ್ತದೆ ಎಂದು ಹೇಳಿ, ನಂಬಿಸಿ ಕೆವೈಸಿ ಅಪ್‌ಡೇಟ್ ಮಾಡುವ ನೆಪದಲ್ಲಿ ಇಬ್ಬರ ಬ್ಯಾಂಕ್ ಖಾತೆಗೆ ಕನ್ನ ಹಾಕಿ 2.93 ಲಕ್ಷ ರೂ. ಎಗರಿಸಿದ್ದಾನೆ.

ಗುಂಡಿಬೈಲು ನಿವಾಸಿ ಭಾಸ್ಕರ ಸೇರಿಗಾರ ಎಂಬುವವರು ಕೆನರಾ ಬ್ಯಾಂಕ್ ಮಣಿಪಾಲ ಶಾಖೆಯಲ್ಲಿ ಖಾತೆ ಹೊಂದಿದ್ದು, ಬುಧವಾರ ಕರೆ ಮಾಡಿದ ಅಪರಿಚಿತ ವ್ಯಕ್ತಿ ಬ್ಯಾಂಕ್ ಅಧಿಕಾರಿ, ಈ ಕೂಡಲೇ ನಿಮ್ಮ ಬ್ಯಾಂಕ್ ಖಾತೆಯ ಕೆ.ವೈ.ಸಿ. ಅಪ್ಡೇಟ್ ಮಾಡಬೇಕು ಇಲ್ಲವಾದಲ್ಲಿ ಖಾತೆ ಬ್ಲಾಕ್ ಆಗುತ್ತದೆ ಎಂದು ಹೇಳಿ, ನಂಬಿಸಿ, ಆಧಾರ್ ವಿವರ, ಬ್ಯಾಂಕ್ ವಿವರ, ಎ.ಟಿ.ಎಂ. ವಿವರ ಹಾಗೂ ಓ.ಟಿ.ಪಿ. ವಿವರ ಪಡೆದು ರೂ. 99,000 ಹಣವನ್ನು ಆನ್‌ಲೈನ್ ಮುಖೇನ ವರ್ಗಾವಣೆ ಮಾಡಿದ್ದಾನೆ. ಈ ಬಗ್ಗೆ ಸೆನ್ ಅಪರಾಧ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿದೆ.

ಇನ್ನೊಂದು ಪ್ರಕರಣದಲ್ಲಿ ಕುತ್ಪಾಡಿ ಗ್ರಾಮದ ರೊನಾಲ್ಡ್ ಜೆ. ಸುಚಿತ್ತ ಅವರು ಕೆನರಾ ಬ್ಯಾಂಕ್ ಉದ್ಯಾವರ ಶಾಖೆಯಲ್ಲಿ ಖಾತೆ ಹೊಂದಿದ್ದು, ಮಂಗಳವಾರ ಕರೆ ಮಾಡಿದ ಅಪರಿಚಿತ ವ್ಯಕ್ತಿ ಬ್ಯಾಂಕ್ ವಿವರ, ಎ.ಟಿ.ಎಂ. ವಿವರ ಹಾಗೂ ಓ.ಟಿ.ಪಿ. ವಿವರ ಪಡೆದು, ಖಾತೆಯಿಂದ ಕ್ರಮವಾಗಿ ರೂ. 94,000 ಮತ್ತು ರೂ. 1,00,000 ಸೇರಿ ಒಟ್ಟು 1,94,000 ರೂ. ಆನ್‌ಲೈನ್ ಮುಖೇನ ವರ್ಗಾವಣೆ ಮಾಡಿಕೊಂಡಿದ್ದಾನೆ. ಈ ಬಗ್ಗೆ ಸೆನ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net