ರೇಷನ್​ ಕಾರ್ಡ್​ ಕೆವೈಸಿ ಮಾಡಿಸುವ ನೆಪದಲ್ಲಿ ಜಮೀನು ಖರೀದಿಸಿ ವಂಚನೆ

Crime Logo
Published on

ಹಾವೇರಿ: ಅನಾರೋಗ್ಯದಿಂದ ಬಳಲುತ್ತಿದ್ದ ತಾಯಿ ಮಗಳನ್ನು ಆಸ್ಪತ್ರೆಗೆ ಕರೆದುಕೊಂಡು ಹೋಗುವುದಾಗಿ ಹೇಳಿ ಉಪ ನೋಂದಣಿ ಕಚೇರಿಗೆ ಕರೆತಂದು ರೇಷನ್​ ಕಾರ್ಡ್​ ಕೆವೈಸಿ ಹೆಸರಿನಲ್ಲಿ 1.20 ಎಕರೆ ಜಮೀನನ್ನು ಮೋಸದಿಂದ ಬರೆಸಿಕೊಂಡಿರುವ ಕುರಿತು ನಾಲ್ವರ ವಿರುದ್ಧ ಇಲ್ಲಿಯ ಶಹರ ಪೊಲೀಸ್​ ಠಾಣೆಯಲ್ಲಿ ಬುಧವಾರ ಪ್ರಕರಣ ದಾಖಲಾಗಿದೆ.

ಧಾರವಾಡ ಜಿಲ್ಲೆ ಹುಬ್ಬಳ್ಳಿ ತಾಲೂಕಿನ ಶೇರೆವಾಡ ಗ್ರಾಮದ ವೀರೇಶ ಬೆಳಗಲಿ, ಸವಣೂರ ತಾಲೂಕಿನ ಜಲ್ಲಾಪುರ ಗ್ರಾಮದ ಶಿವನಗೌಡ ನಿಂಗನಗೌಡ ಶಿವನಗೌಡ್ರ, ಫಕ್ಕೀರೇಶ ದುಂಡಪ್ಪ ಗೌಳಿ, ಹಾವೇರಿ ತಾಲೂಕಿನ ಕೋಳೂರ ಗ್ರಾಮದ ಪುಟ್ಟಪ್ಪ ರಾಯಪ್ಪ ಕಿತ್ತೂರ ಎಂಬುವರ ವಿರುದ್ಧ ಪ್ರಕರಣ ದಾಖಲಾಗಿದೆ.

ಇವರ ವಿರುದ್ಧ ಜಯಶೀಲವ್ವ ಪರಸಪ್ಪ ಗೌಳಿ (63) ಎಂಬುವರು ದೂರು ನೀಡಿದ್ದಾರೆ. ಆರೋಪಿತರು ಆನಾರೋಗ್ಯದಿಂದ ಬಳಲುತ್ತಿದ್ದ ನಾನು ಮತ್ತು ನನ್ನ ಮಗಳನ್ನು ದಾವಣಗೆರೆ ಆಸ್ಪತ್ರೆಗೆ ತೋರಿಸುತ್ತೇವೆ ಎಂದು ಕಾರಿನಲ್ಲಿ ಕರೆದುಕೊಂಡು ಹಾವೇರಿ ಉಪ ನೋಂದಣಾಧಿಕಾರಿ ಕಚೇರೆಗೆ ಬಂದಿದ್ದಾರೆ. ಅಲ್ಲಿ ರೇಷನ್​ ಕಾರ್ಡ್​ ಕೆವೈಸಿ ಮಾಡಿಸಬೇಕು. ಇಲ್ಲವಾದರೆ ಸರ್ಕಾರದ ಯಾವುದೆ ಸೌಲಭ್ಯ ದೊರೆಯುವುದಿಲ್ಲ ಎಂದು ಹೇಳಿ ಸಹಿ ಪಡೆದುಕೊಂಡು ನಮ್ಮ ಜಮೀನು ಖರೀದಿ ಮಾಡಿಕೊಂಡಿದ್ದಾರೆ ಎಂದು ದೂರಿನಲ್ಲಿ ಆರೋಪಿಸಲಾಗಿದೆ. ಪ್ರಕರಣ ದಾಖಲಿಸಿಕೊಂಡ ಪೊಲೀಸರು ತನಿಖೆ ಕೈಗೊಂಡಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net