

ಮೈಸೂರು: ಹಲವು ವರ್ಷಗಳಿಂದ ಮುಚ್ಚಲ್ಪಟ್ಟಿರುವ ಕ್ಯಾತಮಾರನಹಳ್ಳಿ ಮಸೀದಿಯ ಬೀಗ ತೆರೆಯುವ ವಿಚಾರವಾಗಿ ಜಿಲ್ಲಾಧಿಕಾರಿ ಜಿ. ಲಕ್ಷ್ಮೀಕಾಂತ್ ರೆಡ್ಡಿ ಅಧ್ಯಕ್ಷತೆಯಲ್ಲಿ ಮಂಗಳವಾರ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಹಿಂದು-ಮುಸ್ಲಿ ಸಮುದಾಯದ ಮುಖಂಡರ ಸಭೆ ನಡೆಯಿತು.
ಸಮಸ್ಯೆಯನ್ನು ಕೂಡಲೇ ಬಗೆಹರಿಸಲು ಹೈಕೋರ್ಟ್ ನೀಡಿದ ನಿರ್ದೇಶನ ಪ್ರಕಾರ ಜಿಲ್ಲಾಧಿಕಾರಿ ಜಿ.ಲಕ್ಷ್ಮೀಕಾಂತ್ ರೆಡ್ಡಿ 2ನೇ ಬಾರಿ ಹಿಂದು-ಮುಸ್ಲಿಂ ಸಮುದಾಯದ ಮುಖಂಡರ ಮನವಿಯನ್ನು ಆಲಿಸಿದರು. ಮೊದಲ ಸಭೆಯಲ್ಲಿ ನ್ಯಾಯಾಲಯದ ನಿರ್ದೇಶನ ಪ್ರಕಾರ ಉಭಯ ಮುಖಂಡರ ಸಭೆ ನಡೆಸಿ ಅಭಿಪ್ರಾಯವನ್ನು ನ್ಯಾಯಾಲಯಕ್ಕೆ ತಿಳಿಸಲಾಗಿತ್ತು. ಸಮಸ್ಯೆ ಇತ್ಯರ್ಥಕ್ಕೆ ನಿರ್ಧಾರ ಕೈಗೊಳ್ಳುವುದಕ್ಕಾಗಿ ಮತ್ತೊಮ್ಮೆ ಸಭೆ ಕರೆದು ಅಭಿಪ್ರಾಯ ಸಂಗ್ರಹಿಸಿ ವರದಿ ನೀಡುವಂತೆ ನ್ಯಾಯಾಲಯ ಸೂಚನೆ ನೀಡಿತ್ತು. ಈ ಹಿನ್ನೆಲೆಯಲ್ಲಿ ಜಿಲ್ಲಾಧಿಕಾರಿ ಅಭಿಪ್ರಾಯ ಆಲಿಸಿದರು. ಉಭಯ ಸಮುದಾಯಗಳ ಮುಖಂಡರಿಂದ ಮೌಖಿಕ ಹಾಗೂ ಲಿಖಿತವಾಗಿ ಅಭಿಪ್ರಾಯವನ್ನು ಪಡೆಯಲಾಯಿತು. ಸಭೆಯಲ್ಲಿ ಸಂಗ್ರಹವಾದ ಅಭಿಪ್ರಾಯವನ್ನು ಕ್ರೋಢೀಕರಿಸಿ ಗುರುವಾರ ನ್ಯಾಯಾಲಯಕ್ಕೆ ಸಲ್ಲಿಸಲಾಗುತ್ತದೆ.
ನಗರಪಾಲಿಕೆ ಮಾಜಿ ಸದಸ್ಯ ಸೌಕತ್ ಪಾಷ ಮಾತನಾಡಿ, ಹಲವಾರು ವರ್ಷಗಳಿಂದ ಮಸೀದಿಗೆ ಬೀಗ ಹಾಕಲಾಗಿದೆ. ಮಸೀದಿ ವಿಚಾರವಾಗಿ ವಿವಾದ ಇರುವ ಹಿನ್ನೆಲೆಯಲ್ಲಿ ನಾವು ಮಸೀದಿ ತೆರೆಯಲು ಅವಕಾಶ ನೀಡಿ ಎಂದು ಕೇಳುವುದಿಲ್ಲ. ಆದರೆ, ಆ ಕಟ್ಟಡದಲ್ಲಿ ಮದರಸಾ ಆರಂಭಿಸಿ ಅಲ್ಪಸಂಖ್ಯಾತರ ಮಕ್ಕಳಿಗೆ ಅರೇಬಿಕ್ ಶಿಕ್ಷಣ ನೀಡಲು ಅವಕಾಶ ಮಾಡಿಕೊಡಬೇಕು. ಹಾಗಾಗಿ ಮದರಸಾ ನಡೆಸುವ ಸಲುವಾಗಿ ಬೀಗ ತೆರೆವುಗೊಳಿಸಿ ಟ್ರಸ್ಟ್ ಸುಪರ್ದಿಗೆ ನೀಡಬೇಕು ಎಂದು ಕೋರಿಕೊಂಡರು.
ಸಂವಿಧಾನ ಪ್ರಕಾರ ಶಿಕ್ಷಣ ಪಡೆಯುವುದು ಪ್ರತಿಯೊಂದು ಮಗುವಿನ ಹಕ್ಕಾಗಿದೆ. ಮಕ್ಕಳ ಹಿತದೃಷ್ಟಿಯಿಂದ ವಿವಾದಕ್ಕೆ ತೆರೆ ಎಳೆದು ಮದರಸಾ ಆರಂಭಿಸಲು ಅನುವು ಮಾಡಿಕೊಡಬೇಕು. ಮಕ್ಕಳಿಗೆ ಶಿಕ್ಷಣ ಕೊಡುವುದು ನಮ್ಮ ಉದ್ದೇಶವಾಗಿದೆ. ಇದಕ್ಕೆ ಎಲ್ಲರು ಅವಕಾಶ ಮಾಡಿಕೊಡಬೇಕು ಎಂದು ಮನವಿ ಮಾಡಿದರು.
ಜಾಗದ ವಿವಾದ ಒಂದು ವಿವಾದವೇ ಅಲ್ಲ, ಗೊಂದಲದಿಂದ ಸಮಸ್ಯೆ ಸೃಷ್ಟಿಯಾಗಿದೆ ಅಷ್ಟೆ. ಯಾವುದೋ ಒಂದು ಅಹಿತಕರ ಘಟನೆಯಿಂದ ಮಸೀದಿಯನ್ನು ಬಂದ್ ಮಾಡಲಾಯಿತು. ಹಾಗಾಗಿ ಅರೆಬಿಕ್ ಮದರಸ ಆರಂಭಿಸಲು ಹಿಂದು ಸಮುದಾಯದ ಮುಖಂಡರು ಸಹಕಾರ ನೀಡಬೇಕು ಎಂದು ಮನವಿ ಮಾಡಿದರು.
ಮದರಸಾ ಪ್ರಾರಂಭಕ್ಕೆ ಕ್ಯಾತಮಾರನಹಳ್ಳಿಯ ಹುಲಿಯಮ್ಮ ದೇವಸ್ಥಾನ ಟ್ರಸ್ಟ್ ಪದಾಧಿಕಾರಿಗಳು ಆಕ್ಷೇಪ ವ್ಯಕ್ತಪಡಿಸಿದರು. ಹುಲಿಯಮ್ಮ ದೇವಸ್ಥಾನ ಟ್ರಸ್ಟ್‌ನ ಅಧ್ಯಕ್ಷ ಲೋಕೇಶ್ ಮಾತನಾಡಿ, ವಿವಾದಿತ ಜಾಗದಲ್ಲಿ ಮಸೀದಿ ಅಥವಾ ಮದರಸಾ ಪ್ರಾರಂಭಿಸುವುದು ಸರಿಯಲ್ಲ. ವಿವಾದಿತ ಜಾಗದ ಪಕ್ಕದಲ್ಲಿಯೇ ಮಸೀದಿ ಇದ್ದು, ಅಲ್ಲಿ ಮುಸ್ಲಿ ಸಮುದಾಯದವರು ಪ್ರಾರ್ಥನೆ ಸಲ್ಲಿಸಲಿ. ಆ ಜಾಗದಲ್ಲಿ ಯಾವುದೇ ಕಾರಣಕ್ಕೂ ಮದರಸಾ ಅಥವಾ ಮಸೀದಿ ಸೇರಿದಂತೆ ಯಾವುದೇ ಧಾರ್ಮಿಕ ಚಟುವಟಿಕೆಗಳನ್ನು ನಡೆಸಬಾರದು ಎಂದು ಆಗ್ರಹಿಸಿದರು.
ಮಸೀದಿ ಬಂದ್ ಆದ ನಂತರ ಸ್ಥಳೀಯವಾಗಿ ಯಾವುದೇ ರೀತಿಯ ಸಮಸ್ಯೆಗಳು ಕಂಡು ಬಂದಿಲ್ಲ. ಒಂದುವೇಳೆ ಮಸೀದಿ ಅಥವಾ ಮದರಸಾ ಪ್ರಾರಂಭವಾದರೆ ಮತ್ತೆ ಗಲಾಟೆಗಳು ನಡೆಯುವ ಸಾಧ್ಯತೆ ಹೆಚ್ಚು ಇದೆ. ಹಾಗಾಗಿ ಈಗ ಯಥಾಸ್ಥಿತಿ ಕಾಯ್ದುಕೊಂಡು ಹೋಗುವುದು ಉತ್ತಮ. ಬೇಕಿದಲ್ಲಿ ಅವರಿಗೆ ಬೇರೆ ಜಾಗವನ್ನು ಜಿಲ್ಲಾಡಳಿತ ಮಂಜೂರು ಮಾಡಿಕೊಡಲಿ. ಯಥಾಸ್ಥಿತಿ ಮುಂದುವರೆಸಿಕೊಂಡು ಹೋದರೆ ಎರಡೂ ಸಮುದಾಯದವರು ನೆಮ್ಮದಿಯಿಂದ ಇರುತ್ತಾರೆ. ಅವರಿಗೆ ಮದರಸಾ ಮಾಡುವ ಉದ್ದೇಶ ಇದ್ದರೆ ಬೇರೆ ಕಡೆ ಸಿಎ ನಿವೇಶನ ಪಡೆದುಕೊಳ್ಳಲಿ ಎಂದರು.
ಸಭೆಯಲ್ಲಿ ನಿರ್ದಿಷ್ಟ ವಿಷಯದ ಕುರಿತು ಮಾತ್ರ ಅಭಿಪ್ರಾಯ ದಾಖಲಿಸಲು ಅವಕಾಶ ನೀಡಲಾಯಿತು. ಯಾವುದೇ ಅಹಿತಕರ ಘಟನೆ ನಡೆಯದಂತೆ ಸಭೆಗೆ ಬಿಗಿ ಪೊಲೀಸ್ ಬಂದೋಬಸ್ತ್ ಏರ್ಪಡಿಸಲಾಗಿತ್ತು.
ಸಭೆಯಲ್ಲಿ ನಗರ ಪೊಲೀಸ್ ಆಯುಕ್ತೆ ಸೀಮಾ ಲಾಟ್ಕರ್, ಡಿಸಿಪಿ ಎಂ.ಮುತ್ತುರಾಜ್, ನಗರಪಾಲಿಕೆ ಆಯುಕ್ತ ಶೇಖ್ ತನ್ವೀರ್ ಆಸಿಫ್, ಹುಲಿಯಮ್ಮ ದೇವಸ್ಥಾನ ಟ್ರಸ್ಟ್‌ನ ಅಧ್ಯಕ್ಷ ಪ್ರಧಾನ ಕಾರ್ಯದರ್ಶಿ ಶಿವಕುಮಾರ್, ಖಜಾಂಚಿ ಕುಮಾರ್, ಟ್ರಸ್ಟಿಗಳಾದ ನಾರಾಯಣಪ್ಪ ಲೋಲಪ್ಪ, ನಾಗರಾಜು, ಮಹದೇವು, ಕೃಷ್ಣಪ್ಪ, ಮುಸ್ಲಿಂ ಸಮುದಾಯದ ಮುಖಂಡರಾದ ಮೌಲನಾ ಅಕ್ಬರ್ ಷರೀಫ್, ಮೌಲನಾ ಅನ್ಸಾರಿ, ಅಕ್ಬರ್ ಸಾಬ್, ಫಾರೂಕ್ ಪಾಷಾ, ಅಫ್ರೋಜ್, ರಫೀಕ್ ಪಾಷ ಹಾಗೂ ಇತರರು ಪಾಲ್ಗೊಂಡಿದ್ದರು.