

ಮಂಜುನಾಥ ಎಸ್. ಅಂಗಡಿ ಧಾರವಾಡ
ಇಲ್ಲಿನ ಕರ್ನಾಟಕ ವಿಶ್ವವಿದ್ಯಾಲಯದ ನೌಕರರಾಗಿ ನಿವೃತ್ತರಾದವರಿಗೆ ವಿಶೇಷ ಗೌರವ- ಘನತೆ ಇರುತ್ತದೆ. ಆದರೆ, 30-35 ವರ್ಷ ಕಾರ್ಯನಿರ್ವಹಿಸಿ ನಿವೃತ್ತರಾದವರಿಗೆ ಪಿಂಚಣಿ ಮತ್ತು ಇತರ ಸೌಲಭ್ಯ ನೀಡಲು ವಿಶ್ವವಿದ್ಯಾಲಯದಲ್ಲಿ ಹಣವಿಲ್ಲ. ರಾಜ್ಯದ ಪ್ರತಿಷ್ಠಿತ ವಿಶ್ವವಿದ್ಯಾಲಯ ಸರ್ಕಾರದ ಅನಾದರದಿಂದ ಅನುದಾನ ಕೊರತೆಯಿಂದ ನರಳುತ್ತಿದೆ.
ವಿಶ್ವವಿದ್ಯಾಲಯದಲ್ಲಿ ಸದ್ಯ ಬೋಧಕ- ಬೋಧಕೇತರರು ಸೇರಿ 1,768 ನಿವೃತ್ತರಿದ್ದಾರೆ. ಇವರ ಮಾಸಿಕ ಪಿಂಚಣಿ ಮೊತ್ತ 8.50 ಕೋಟಿ ರೂಪಾಯಿ ಆಗುತ್ತದೆ. 2024-25ರ ಆರ್ಥಿಕ ವರ್ಷದ ಅಂತ್ಯದವರೆಗೆ ಪಿಂಚಣಿ ಹಣ ಪಾವತಿಸಲಾಗಿದೆ. ಆದರೆ, ಪಿಂಚಣಿಯ ಇತರ ಸೌಲಭ್ಯಗಳಿಗೆ ಪಾವತಿಸಬೇಕಾದ ಸುಮಾರು 5- 6 ಕೋಟಿ ರೂಪಾಯಿ ಬಾಕಿ ಇದೆ.
ಪಿಂಚಣಿ ಪಾವತಿಗಾಗಿ ನಿವೃತ್ತರು ವಿಶ್ವವಿದ್ಯಾಲಯಕ್ಕೆ ಹತ್ತಾರು ಬಾರಿ ಅಲೆದಾಡಿದ್ದಾರೆ. ಹೋರಾಟದ ಎಚ್ಚರಿಕೆಯನ್ನೂ ನೀಡಿದ್ದಾರೆ. ಹೀಗಾಗಿ ವಿಶ್ವವಿದ್ಯಾಲಯದ ಆಡಳಿತಾಧಿಕಾರಿಗಳು ನಿವೃತ್ತ ನೌಕರರ ಪಿಂಚಣಿ ಮತ್ತು ಇತರ ಸೌಲಭ್ಯಗಳನ್ನು ಪಾವತಿಸಲು ಸರ್ಕಾರದಿಂದ 126 ಕೋಟಿ ರೂಪಾಯಿ ಅನುದಾನಕ್ಕೆ ಪ್ರಸ್ತಾವನೆ ಸಲ್ಲಿಸಿದ್ದಾರೆ. ಆದರೆ, ಸರ್ಕಾರದಿಂದ ಪ್ರಸಕ್ತ ವರ್ಷದ ವಾರ್ಷಿಕ ಅನುದಾನ 55 ಕೋಟಿ ರೂ. ಮಂಜೂರಾಗಿದೆ. ಈ ಪೈಕಿ 1 ಕಂತಿನ ಹಣ ಮಾತ್ರ ಬಿಡುಗಡೆಯಾಗಿದೆ.
ಹಿಂದೆ ಬಿಜೆಪಿ ಸರ್ಕಾರ ಇದ್ದಾಗಲೂ ಅನುದಾನ ಬಾಕಿ ಇತ್ತು. ಅದು ಕಾಂಗ್ರೆಸ್ ಸರ್ಕಾರದ ಅವಧಿಯಲ್ಲೂ ಮುಂದುವರಿದಿದೆ. ವಿಶ್ವವಿದ್ಯಾಲಯಕ್ಕೆ ಹೇಳಿಕೊಳ್ಳುವಂಥ ಆಂತರಿಕ ಸಂಪನ್ಮೂಲಗಳಿಲ್ಲ. ವಿದ್ಯಾರ್ಥಿಗಳ ಪ್ರವೇಶಾತಿ ಶುಲ್ಕ, ಪರೀಕ್ಷಾ ಶುಲ್ಕದಿಂದ ಒಂದಿಷ್ಟು ಹಣ ಬರುತ್ತದೆ. ಅದನ್ನು ಪರೀಕ್ಷೆಗಳ ನಿರ್ವಹಣೆ ಸೇರಿ ಇತರ ಖರ್ಚುಗಳಿಗೆ ಹೊಂದಾಣಿಕೆ ಮಾಡಲಾಗುತ್ತದೆ. ಸದ್ಯಕ್ಕೆ ಪ್ರವೇಶಾತಿ ಇಲ್ಲದೆ, ಆಂತರಿಕ ಸಂಪನ್ಮೂಲಗಳಿಲ್ಲದೆ ವಿಶ್ವವಿದ್ಯಾಲಯ ಪರದಾಡುತ್ತಿದೆ.
ಸುಮಾರು 30-35 ವರ್ಷಗಳ ಹಿಂದೆ ಬಹುತೇಕ ನೌಕರರು ಜೂನ್ 1ರಂದು ಕರ್ತವ್ಯಕ್ಕೆ ಹಾಜರಾದವರಿದ್ದಾರೆ. ಅವರೆಲ್ಲರೂ ಮೇ 31ಕ್ಕೆ ನಿವೃತ್ತರಾಗಲಿದ್ದಾರೆ. ಈ ತಿಂಗಳ ಅಂತ್ಯಕ್ಕೆ ನಿವೃತ್ತರ ಸಂಖ್ಯೆ ಮತ್ತಷ್ಟು ಏರಿಕೆಯಾಗಲಿದೆ. ಹೀಗಾಗಿ ನಿವೃತ್ತರಿಗೆ ಮಾಸಿಕ ಪಿಂಚಣಿ ಹಣ ಮತ್ತು ಇತರ ಸೌಲಭ್ಯ ಕಲ್ಪಿಸಲು ವಿಶ್ವವಿದ್ಯಾಲಯದ ಖಜಾನೆ ಸಂಪೂರ್ಣ ಖಾಲಿಯಾದಂತಾಗಿದೆ.
ಕರ್ನಾಟಕ ವಿಶ್ವವಿದ್ಯಾಲಯದ ನಿವೃತ್ತ ನೌಕರರ ಪಿಂಚಣಿ ಮತ್ತು ಇತರ ಸೌಲಭ್ಯಗಳನ್ನು ಪಾವತಿಸಲು ಸರ್ಕಾರದಿಂದ 126 ಕೋಟಿ ರೂಪಾಯಿ ಕೇಳಲಾಗಿತ್ತು. ಪ್ರಸಕ್ತ ವರ್ಷದ ವಾರ್ಷಿಕ ಅನುದಾನ 55 ಕೋಟಿ ರೂ. ಮಂಜೂರಾಗಿದೆ. ಅದು 4 ಕಂತುಗಳಲ್ಲಿ ಬಿಡುಗಡೆ ಆಗಲಿದ್ದು, ಸದ್ಯ 1 ಕಂತು ಬಂದಿದೆ. ವಿಶ್ವವಿದ್ಯಾಲಯಕ್ಕೆ ಆಂತರಿಕ ಆದಾಯದ ಮೂಲವಿಲ್ಲ. ಅನುದಾನ ಕೊರತೆಯನ್ನು ಉನ್ನತ ಶಿಕ್ಷಣ, ಜಿಲ್ಲಾ ಉಸ್ತುವಾರಿ ಸಚಿವರ ಗಮನಕ್ಕೆ ತರಲಾಗಿದೆ. ಡಾ. ಸಿ. ಕೃಷ್ಣಮೂರ್ತಿ, ಕವಿವಿ ಹಣಕಾಸು ಅಧಿಕಾರಿ