ನಿತ್ಯಸಚಿವ ಕೆ.ವಿ.ಶಂಕರಗೌಡರ ಜನ್ಮದಿನದ ಅಂಗವಾಗಿ ಸಾಧಕರಿಗೆ ರಾಜ್ಯಮಟ್ಟದ ಪ್ರಶಸ್ತಿ ಪ್ರದಾನ

2
Published on

ಮಂಡ್ಯ: ನಿತ್ಯಸಚಿವ ಕೆ.ವಿ.ಶಂಕರಗೌಡರ 108ನೇ ಜನ್ಮದಿನಾಚರಣೆ ಅಂಗವಾಗಿ ನಗರದಲ್ಲಿ ರಾಜ್ಯಮಟ್ಟದ ಪ್ರಶಸ್ತಿ ಪ್ರದಾನ ಮಾಡಲಾಯಿತು.

ನಗರದ ಪಿಇಎಸ್ ಇಂಜಿನಿಯರಿಂಗ್ ಕಾಲೇಜಿನ ಕೆ.ವಿ.ಶಂಕರಗೌಡ ತರಬೇತಿ ಮತ್ತು ಉದ್ಯೋಗ ಕೇಂದ್ರ ಸಭಾಂಗಣದಲ್ಲಿ ಜನತಾ ಶಿಕ್ಷಣ ಟ್ರಸ್ಟ್‌ನಿಂದ ಶನಿವಾರ ಆಯೋಜಿಸಿದ್ದ ಸಮಾರಂಭದಲ್ಲಿ ಕೆ.ವಿ.ಶಂಕರಗೌಡ ಮತ್ತು ಕೆ.ಎಸ್.ಸಚ್ಚಿದಾನಂದ ರಂಗಭೂಮಿ ಪ್ರಶಸ್ತಿಯನ್ನು ಶಿವಮೊಗ್ಗ ಜಿಲ್ಲೆ ಸಾಗರ ತಾಲೂಕು ಶ್ರಮಜೀವಿ ಆಶ್ರಮಯದ ಖ್ಯಾತರಂಗಕರ್ಮಿ ಪ್ರಸನ್ನ ಹಾಗೂ ಸಮಾಜಸೇವಾ ಪ್ರಶಸ್ತಿಯನ್ನು ಬೆಂಗಳೂರು ಬನ್ನೇರುಘಟ್ಟ ಜೈವಿಕ ಉದ್ಯಾನವನದ ಮೃಗಾಲಯದ ಆಸ್ಪತ್ರೆಯ ಪ್ರಾಣಿ ಪಕ್ಷಿಗಳ ಆರೋಗ್ಯ ಮತ್ತು ಕಲ್ಯಾಣ ವಿಭಾಗಕ್ಕೆ ಪ್ರದಾನ ಮಾಡಲಾಯಿತು. ಆಸ್ಪತ್ರೆಯ ವೈದ್ಯಾಧಿಕಾರಿ ಡಾ.ಉಮಾಶಂಕರ್ ಪ್ರಶಸ್ತಿ ಸ್ವೀಕರಿಸಿದರು. ಅಂತೆಯೇ 25 ಸಿಬ್ಬಂದಿಯನ್ನು ಸನ್ಮಾನಿಸಲಾಯಿತು. ಪ್ರಶಸ್ತಿಗೆ ಸಂಬಂಧಿಸಿದಂತೆ ಎರಡು ವಿಭಾಗದಲ್ಲಿಯೂ ತಲಾ 25 ಸಾವಿರ ರೂ ನಗದು ವಿತರಿಸಲಾಯಿತು.

ಪ್ರಶಸ್ತಿ ಪ್ರದಾನ ಮಾಡಿ ಮಾತನಾಡಿದ ವಿಶ್ರಾಂತ ಅಡ್ವೋಕೇಟ್ ಜನರಲ್ ಆಫ್ ಕರ್ನಾಟಕ ಸೀನಿಯರ್ ಅಡ್ವೋಕೇಟ್ ಅಶೋಕ್ ಹಾರನಹಳ್ಳಿ, ಸ್ವಾಭಿಮಾನ ಪೂರ್ವಕವಾಗಿ ಹೋರಾಟ ನಡೆಸಿ ಪಡೆಯುವುದು ಶ್ರೇಷ್ಟ. ಉಚಿತವಾಗಿ ಸಿಗುತ್ತದೆ ಎಂದು ಅದಕ್ಕೆ ಮಾರು ಹೋಗುವುದು ಸರಿಯಲ್ಲ. ಯಾರಿಗೆ ಅಗತ್ಯವಿದೆಯೇ ಅಂತಹವರಿಗೆ ಸರ್ಕಾರಗಳು ಉಚಿತವಾಗಿ ನೀಡುವುದು ಸರಿ. ಎಲ್ಲರಿಗೂ ಉಚಿತವಾಗಿ ನೀಡುವಂತಹ ಆಲೋಚನೆ ಸರಿಯಲ್ಲ. ಸರ್ಕಾರವೇ ಎಲ್ಲವನ್ನೂ ಕೊಡಲು ಸಾಧ್ಯವಿಲ್ಲ. ನಮಗೆ ಬೇಕಾದುದನ್ನು ನಾವೇ ಶ್ರಮ ಸಂಸ್ಕೃತಿ ಮೂಲಕವೇ ಪಡೆದುಕೊಳ್ಳಬೇಕು ಎಂಬ ಮನೋಭಾವ ಜನರಲ್ಲಿ ಬರಬೇಕು. ಮನುಷ್ಯನ ಭೋಗ ಸಂಸ್ಕೃತಿಯಿಂದಾಗಿ ಅನೇಕ ಸಂಸ್ಕೃತಿ ನಾಶವಾಗುತ್ತಿದೆ. ಪಾಶ್ಚಿಮಾತ್ಯ ಸಂಸ್ಕೃತಿ ದೇಶಕ್ಕೆ ಕಾಲಿಟ್ಟು ಮನುಷ್ಯನಿರಲಿ, ಪ್ರಾಣಿ-ಪಕ್ಷಗಳ ಬಗ್ಗೆಯೂ ಆಲೋಚನೆ ಮಾಡದ ಸ್ಥಿತಿಯಲ್ಲಿ ನಾವಿದ್ದೇವೆ ಎಂದು ಆತಂಕ ವ್ಯಕ್ತಪಡಿಸಿದರು.

ಪಿಇಟಿ ಅಧ್ಯಕ್ಷ ಕೆ.ಎಸ್.ವಿಜಯಾನಂದ ಅಧ್ಯಕ್ಷತೆ ವಹಿಸಿದ್ದರು. ಕಾರ್ಯದರ್ಶಿ ಎಸ್.ಎಲ್.ಶಿವಪ್ರಸಾದ್, ಉಪಾಧ್ಯಕ್ಷ ಶ್ರೀಧರ್, ಜಂಟಿ ಕಾರ್ಯದರ್ಶಿ ದಯಾನಂದ್, ನಿರ್ದೇಶಕ ಡಾ.ರಾಮಲಿಂಗಯ್ಯ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net