

ಮಂಡ್ಯ: ನಿತ್ಯಸಚಿವ ಕೆ.ವಿ.ಶಂಕರಗೌಡ ಅವರು ಶಿಕ್ಷಣ ಕ್ಷೇತ್ರದಲ್ಲಿ ಹೊಸ ಕ್ರಾಂತಿ ತಂದವರು ಎಂದು ಕರ್ನಾಟಕ ಸಂಘದ ಅಧ್ಯಕ್ಷ ಪ್ರೊ.ಬಿ.ಜಯಪ್ರಕಾಶಗೌಡ ಹೇಳಿದರು.
ನಗರದ ರೈತ ಸಭಾಂಗಣದಲ್ಲಿ ಅಸೋಷಿಯೇಷನ್ ಆಫ್ ಅಲಯನ್ಸ್ ಕ್ಲಬ್ಸ್ ಇಂಟರ್‌ನ್ಯಾಷನಲ್, ನಂಜಮ್ಮ ಮೋಟೇಗೌಡ ಚಾರಿಟಬಲ್ ಟ್ರಸ್ಟ್ ಕೊಪ್ಪ ಸಹಯೋಗದಲ್ಲಿ ಆಯೋಜಿಸಿದ್ದ ನಿತ್ಯ ಸಚಿವ ಕೆ.ವಿ.ಶಂಕರಗೌಡ ಶಿಕ್ಷಣ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಮಾತನಾಡಿದ ಅವರು, ಲೈಸನ್ಸ್ ತೆಗೆದುಕೊಳ್ಳಲು ಕಷ್ಟವಾಗುತ್ತಿದ್ದ ಕಾಲಘಟ್ಟದಲ್ಲಿ ಸರ್ಕಾರದಿಂದ ಮಾನ್ಯತೆ ಪಡೆದು ಮಂಡ್ಯದಲ್ಲಿ ಇಂಜಿನಿಯರಿಂಗ್ ಕಾಲೇಜು ತೆರೆದು ಬಡ ರೈತಾಪಿ ವರ್ಗದ ವಿದ್ಯಾರ್ಥಿಗಳಿಗೆ ಕೆ.ವಿ.ಶಂಕರಗೌಡ ನೆರವಾಗಿದ್ದರು ಎಂದರು.
ರಾಷ್ಟ್ರಕವಿ ಕೆವೆಂಪು ಅವರಿಂದ ನಿತ್ಯ ಸಚಿವ ಎಂಬ ಬಿರುದು ಪಡೆದ ಕೆ.ವಿ.ಶಂಕರಗೌಡ ಅವರ ಹೆಸರಿನಲ್ಲಿ ಪ್ರಶಸ್ತಿ ನೀಡುತ್ತಿರುವುದು ಪುಣ್ಯದ ಕೆಲಸ. ಇದು ಅವಿಸ್ಮರಣೀಯವಾದ ದಿನವನ್ನಾಗಿ ಕಾಣುತ್ತಿದ್ದೇವೆ. ಸ್ವಾತಂತ್ರ್ಯಕ್ಕಿಂತ ಮುಂಚೆ ಶಿಕ್ಷಣ ಎಂದರೆ ಏನೆಂಬುದೇ ತಿಳಿದಿರಲಿಲ್ಲ. ಶಿಕ್ಷಣದ ಮೂಲಕ ಅರಿವನ್ನು ಪಡೆಯಲು, ವಿವಿಧ ಆಯಾಯಮಗಳಲ್ಲಿ ಶಿಕ್ಷಣ ಪಡೆಯಲು ಶಿಕ್ಷಣ ಸಂಸ್ಥೆಗಳು ಹುಟ್ಟಿಕೊಂಡವು. ಕೇವಲ 70 ರಿಂದ 80 ವರ್ಷದಲ್ಲಿಯೇ ಶಿಕ್ಷಣ ಸಂಸ್ಥೆಗಳ ಆರಂಭದಿಂದ ಬದುಕು ಕಟ್ಟಿಕೊಳ್ಳಲು ನೆರವಾಗಿರುವುದಕ್ಕೆ ಸಂದೇಹವೇ ಇಲ್ಲ. ಶಿಕ್ಷಣವನ್ನು ಜನರು ಏಕೆ ಬಳಕೆ ಮಾಡಿಕೊಳ್ಳಬೇಕು ಎನ್ನುವುದನ್ನು ಅರ್ಥ ಮಾಡಿಕೊಳ್ಳಬೇಕಿದೆ ಎಂದು ಸಲಹೆ ನೀಡಿದರು.
1962 ಕಾಲಘಟ್ಟದಲ್ಲಿ ಒಂದು ಇಂಜಿನಿಯರಿಂಗ್ ಕಾಲೇಜು ತೆರೆಯುವುದು ಸುಲಭದ ಮಾತಾಗಿರಲಿಲ್ಲ. ಅದು ಶಿಕ್ಷಣವೆಂಬುದೇ ಕೈಗೆಟುಕದ ಸಂದರ್ಭದಲ್ಲಿ ಸರ್ಕಾರದಿಂದ ಒಪ್ಪಿಗೆ ತೆಗೆದುಕೊಳ್ಳದ ಕಾಲದಲ್ಲಿ ಮಂಡ್ಯದಲ್ಲಿಯೇ ಪಿಇಎಸ್ ಶಿಕ್ಷಣ ಸಂಸ್ಥೆ ಸ್ಥಾಪಿಸಿ ಮೆಚ್ಚುಗೆ ಪಡೆದರು. ಕರ್ನಾಟಕದ ಮಂಡ್ಯದಲ್ಲಿ ಸ್ಥಾಪನೆಯಾದ ರೈತಾಪಿ ವರ್ಗದ ವಿದ್ಯಾರ್ಥಿಗಳಿಗೆ ಕನಕಪುರದವರೆಗೆ, ಚಿಕ್ಕಮಗಳೂರಿನವರೆಗೆ ಸೇರಿದಂತೆ ಪುತ್ತೂರು, ಚಾಮರಾಜನಗರದವರೆಗೂ ವಿದ್ಯಾರ್ಥಿಗಳು ಇಂಜಿನಿಯರ್ ಶಿಕ್ಷಣ ಪಡೆಯಲು ನೆರವಾದ ಮಹನೀಯರೆಂದರೆ ಕೆವಿಎಸ್ ಅವರು ಎಂದು ಬಣ್ಣಿಸಿದರು.
ಶಂಕರಗೌಡ ಶಿಕ್ಷಣ ಪ್ರಶಸ್ತಿ ಸ್ವೀಕರಿಸಿ ಮಾತನಾಡಿದ ಕನಕಪುರ ವಿದ್ಯಾ ಪ್ರಚಾರಕ ಸಂಸ್ಥೆಯ ಅಧ್ಯಕ್ಷ ಎಚ್.ಕೆ.ಶ್ರೀಕಂಠ, ಗ್ರಾಮೀಣ ಭಾಗದ ವಿದ್ಯಾರ್ಥಿಗಳನ್ನು ಪ್ರಾಥಮಿಕ ಶಿಕ್ಷಣ ಕೊಟ್ಟು ಒಂದು ಹಂತಕ್ಕೆ ತರುವ ಮಟ್ಟಕ್ಕೆ ನಮ್ಮ ಸಂಸ್ಥೆ ಮುಂದುವರಿದಿದೆ. ಎಂಬಿಎ ಕೋರ್ಸ್‌ಗಳನ್ನು ಸಹ ತಂದಿದ್ದೇವೆ. ಅಗ್ರಿಕಲ್ಚರಲ್ ಕಾಲೇಜು ತರಬೇಕೆಂಬ ಉದ್ದೇಶವಿದ್ದು, ಅದರ ಪ್ರಯತ್ನ ನಡೆಯುತ್ತಿದೆ. ಸನ್ಮಾನದಿಂದ ಜವಾಬ್ದಾರಿ ಹೆಚ್ಚಿಸಿದ್ದಾರೆ. ಶಂಕರಗೌಡರ ಹೆಸರಿನಲ್ಲಿ ನೀಡಿರುವ ಪ್ರಶಸ್ತಿಗೆ ಎಲ್ಲಿಯೂ ಚ್ಯುತಿ ಬರದ ರೀತಿ ನಡೆದುಕೊಂಡು ನಮ್ಮ ಕನಕಪುರದ ಕರಿಯಪ್ಪ ಅವರ ಹೆಸರನ್ನು ಉಳಿಸುವ ನಿಟ್ಟಿನಲ್ಲಿ ಸಾಗುತ್ತೇವೆ ಎಂದು ಭರವಸೆ ನೀಡಿದರು.
ಟ್ರಸ್ಟ್‌ನ ಗೌರವಾಧ್ಯಕ್ಷ ಕೆ.ಟಿ.ಶ್ರೀಕಂಠೇಗೌಡ ಅಧ್ಯಕ್ಷತೆ ವಹಿಸಿದ್ದರು. ಪಿಇಟಿ ಅಧ್ಯಕ್ಷ ಕೆ.ಎಸ್.ವಿಜಯಾನಂದ, ಹಾಪ್‌ಕಾಮ್ಸ್ ಅಧ್ಯಕ್ಷ ಯು.ಸಿ.ಶೇಖರ್, ಅಲಯನ್ಸ್ ಕ್ಲಬ್ ಅಂತಾರಾಷ್ಟ್ರೀಯ ನಿರ್ದೇಶಕ ಡಾ.ನಾಗರಾಜ್ ವಿ.ಭೈರಿ, ಜಿಲ್ಲಾ ಪ್ರಾಂತಪಾಲ ಕೆ.ಟಿ.ಹನುಮಂತು ಇತರರಿದ್ದರು.
ಇದೇ ಸಂದರ್ಭದಲ್ಲಿ ನಿತ್ಯ ಸಚಿವ ಕೆ.ವಿ.ಶಂಕರಗೌಡ ಶಿಕ್ಷಣ ಪ್ರಶಸ್ತಿಯನ್ನು ಗ್ರಾಮ ವಿದ್ಯಾ ಪ್ರಚಾರಕ ಸಂಘದ ಪರವಾಗಿ ಅಧ್ಯಕ್ಷ ಎಚ್.ಕೆ.ಶ್ರೀಕಂಠ ಅವರಿಗೆ ರಾಜ್ಯ ಮುಕ್ತ ವಿಶ್ವವಿದ್ಯಾನಿಲಯದ ಕುಲಪತಿ ಪ್ರೊ.ಶರಣಪ್ಪ ವಿ.ಅಲ್ಸೆ ಪ್ರದಾನ ಮಾಡಿದರು.