ನಿತ್ಯಸಚಿವ ಕೆವಿಎಸ್ ನಾಡಿನ ಸಾಕ್ಷಿಪ್ರಜ್ಞೆ: ಬಿಬಿಎಂಪಿ ವಿಶೇಷ ಆಯುಕ್ತ ಜಯರಾಂ ರಾಯಪುರ ಬಣ್ಣನೆ

1 (9)
Published on

ಮಂಡ್ಯ: ನಿತ್ಯಸಚಿವ ಕೆ.ವಿ.ಶಂಕರಗೌಡ ಅವರು ಬಹುಮುಖ ಪ್ರತಿಭೆ. ಮಾತ್ರವಲ್ಲದೆ ನಾಡಿಗೆ ಸಾಕ್ಷಿ ಪ್ರಜ್ಞೆ ಆಗಿದ್ದರು ಎಂದು ಬೆಂಗಳೂರು ಮಹಾನಗರ ಪಾಲಿಕೆ ವಿಶೇಷ ಆಯುಕ್ತ ಜಯರಾಂ ರಾಯಪುರ ಬಣ್ಣಿಸಿದರು.

ನಗರದ ಪಿಇಎಸ್ ಕಾಲೇಜಿನ ಸ್ವಾಮಿವಿವೇಕಾನಂದ ರಂಗಮಂದಿರದಲ್ಲಿ ಕರ್ನಾಟಕ ಸಂಘ, ಕರ್ನಾಟಕ ಮೂಡಲಪಾಯ ಯಕ್ಷಗಾನ ಪರಿಷತ್ ಹಾಗೂ ಆದಿಚುಂಚನಗಿರಿ ಮೂಡಲಪಾಯ ಯಕ್ಷಗಾನ ಕೇಂದ್ರದಿಂದ ಆಯೋಜಿಸಿರುವ ಆರು ದಿನದ ನಾಟಕೋತ್ಸವ ಹಾಗೂ ಪ್ರಶಸ್ತಿ ಪ್ರದಾನ ಸಮಾರಂಭವನ್ನು ಗುರುವಾರ ಸಂಜೆ ಉದ್ಘಾಟಿಸಿ ಮಾತನಾಡಿದ ಅವರು, ಕೆವಿಎಸ್ ಹಲವಾರು ನಾಯಕರನ್ನು ಹುಟ್ಟು ಹಾಕಿದವರು. ಬಹುಮುಖ್ಯ ಪ್ರತಿಭೆಗಳಲ್ಲಿ ಬಸವಣ್ಣನವರು ಗಂಗರಸರ ಕಾಲದಲ್ಲಿ ದಂಡನಾಯಕನಾಗಿದ್ದ ಚಾವುಂಡರಾಯರಲ್ಲಿ ಬಹುಮುಖ ವ್ಯಕ್ತಿತ್ವವಿತ್ತು. ಮೂರನೇ ಬಹುಮುಖ ವ್ಯಕ್ತಿತ್ವ ಕಂಡಿದ್ದು ಕೆ.ವಿ ಶಂಕರಗೌಡರು. ಒಬ್ಬ ವ್ಯಕ್ತಿಯಲ್ಲಿ ಹಲವಾರು ಆಯಾಮ ಕಾಣುವುದು ಅಪರೂಪ. ಅಂತಹ ಬಹುಮುಖ ವ್ಯಕ್ತಿತ್ವದವರು ಕೆವಿಎಸ್ ಎಂದು ಹೇಳಿದರು.

ದೂರದರ್ಶಿತ್ವದ ವ್ಯಕ್ತಿಯಾಗಿದ್ದ ಅವರು ಹಲವಾರು ಕ್ಷೇತ್ರಗಳಲ್ಲಿ ತೊಡಗಿಸಿಕೊಂಡಿದ್ದರು. ಮರುಭೂಮಿಯಲ್ಲಿ ಪ್ರತಿಭೆ ಹುಡುಕುವುದು ಅವರ ಕೆಲಸವಾಗಿತ್ತು. ಸಾಂಸ್ಕೃತಿಕ ಪ್ರಜ್ಞೆ ಮೂಡಿಸಲು ನಾಟಕ ಸಂಸ್ಥೆ ಕಟ್ಟಿದ್ದರು. ಯುವಕರು ಯುವತಿಯರಿಗೆ ಉನ್ನತ ಶಿಕ್ಷಣ ನೀಡಲು ಜನತಾ ಶಿಕ್ಷಣ ಟ್ರಸ್ಟ್ ಸ್ಥಾಪಿಸಿದರು. ಹಲವಾರು ನಾಯಕರನ್ನು ರಾಜಕಾರಣಿಯನ್ನಾಗಿ ಬೆಳೆಸಿದ್ದಾರೆ. ಸಾಹಿತಿ ನಾಟಕಕಾರರನ್ನು ಗುರುತಿಸಿ ಸನ್ಮಾನ ಮಾಡಿಸಿ ಹೆಚ್ಚಿನ ಕೆಲಸ ಮಾಡಲು ಉತ್ತೇಜನ ನೀಡಿದರು ಎಂದು ಬಣ್ಣಿಸಿದರು.

ವಿಧಾನ ಪರಿಷತ್ ಮಾಜಿ ಸದಸ್ಯ ಕೆ.ಟಿ.ಶ್ರೀಕಂಠೇಗೌಡ ಮಾತನಾಡಿ, ಕೆ.ವಿ.ಶಂಕರಗೌಡರು ಕೈಹಾಕದ ಕ್ಷೇತ್ರಗಳೇ ಇಲ್ಲ. ಶಿಕ್ಷಣ, ಸಹಕಾರ, ಸಾಹಿತ್ಯ, ರಂಗಭೂಮಿ, ಸಾಮಾಜಿಕ ಕ್ಷೇತ್ರಗಳಲ್ಲಿ ಅದ್ವಿತೀಯ ಸಾಧನೆ ಮಾಡಿದ್ದಾರೆ. ಶಂಕರಗೌಡ ಅವರು ಮಂಡ್ಯ ಜಿಲ್ಲೆ ಕಟ್ಟುವಲ್ಲಿ ಪ್ರಮುಖ ಪಾತ್ರ ವಹಿಸಿದ್ದಾರೆ ಎಂದರು.

ಶಂಕರಗೌಡರು ಇಲ್ಲದಿದ್ದರೆ ಮಂಡ್ಯ ಎಂದರೆ ಇಂಡಿಯಾ ಎಂಬ ಜವಾಬ್ದಾರಿ ಸಿಗುತ್ತಿರಲಿಲ್ಲ. ಶಂಕರಗೌಡರು ವಿಶಾಲ ಮನೋಭಾವ ಹೊಂದಿದ್ದರು. ಸಂಘಟನಾತ್ಮಕ ನಾಯಕತ್ವ ಮಂಡ್ಯದಲ್ಲಿ ಕಟ್ಟಿದ್ದರು. ವಿಧಾನಸೌಧ ಅಲುಗಾಡಿಸುವ ಶಕ್ತಿ ಇತ್ತು. ಆದರೆ ಇಂದು ಆ ಪರಿಸ್ಥಿತಿ ಕಂಡು ಬರಲೇ ಇಲ್ಲ ಎಂದರು.

ಪಿಇಟಿ ಅಧ್ಯಕ್ಷ ಕೆ.ಎಸ್.ವಿಜಯಾನಂದ, ಕರ್ನಾಟಕ ಸಂಘದ ಅಧ್ಯಕ್ಷ ಪ್ರೊ.ಬಿ.ಜಯಪ್ರಕಾಶಗೌಡ, ಪ್ರೊ.ರಾಜಪ್ಪ ದಳವಾಯಿ, ಡಾ. ಕಬ್ಬಿನಾಲೆ ವಸಂತ ಭಾರದ್ವಾಜ್, ಪ್ರಮೋದ್ ಶಿಗ್ಗಾವ್, ಅಜಯ್ ನೀನಾಸಂ ಇತರರಿದ್ದರು. ಇದೇ ವೇಳೆ ವಿದ್ವಾಂಸ ಡಾ.ರಾಗೌ ಅವರು ಕೆ.ವಿ.ಶಂಕರಗೌಡ ಅಧ್ಯಯನ ಪೀಠದ ಸಂದರ್ಶಕ ಪ್ರಾಧ್ಯಾಪಕ ಹುದ್ದೆ ಸ್ವೀಕಾರ ಮಾಡಿದರು. ಅಂತೆಯೇ ಕಲಾವಿದ ಮೂರ್ಕಾಲು ದೇವರಾಜು ಅವರಿಗೆ ಕೆ.ವಿ ಶಂಕರಗೌಡ ಲಲಿತಕಲಾ ಪ್ರಶಸ್ತಿ ಪ್ರದಾನ ಮಾಡಲಾಯಿತು. ಬಳಿಕ ಕೆ.ವಿ.ಶಂಕರಗೌಡ ಜೀವನಾಧಾರಿತ ’ನಿತ್ಯಸಚಿವ’ ನಾಟಕ ಪ್ರದರ್ಶನ ನಡೆಯಿತು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net