ಕೆ.ವಿ.ಶಂಕರಗೌಡರ ಬದುಕು ಅದ್ಭುತ: ನಿವೃತ್ತ ಪ್ರಾಧ್ಯಾಪಕ ರಾಜಪ್ಪ ದಳವಾಯಿ ಬಣ್ಣನೆ

KVS award ceremony Mandya
Published on

ಮಂಡ್ಯ: ನಿತ್ಯಸಚಿವ ಕೆ.ವಿ.ಶಂಕರಗೌಡ ಅವರ ನಾಟಕವನ್ನು ಬರೆಯಲು ಹೋದಾಗ ಹತ್ತು ನಾಟಕಗಳನ್ನು ಬರೆಯುವಷ್ಟು ಮಾಹಿತಿ ಸಿಕ್ಕಿತು. ಆದರೆ ಒಂದು ನಾಟಕಕ್ಕೆ ಹೇಗೆ ಬರೆಯುವುದು ಎಂಬ ಸ್ಥಿತಿ ನನಗೆ ಒದಗಿತು. ನನ್ನ ಮೇಲೆ ನಂಬಿಕೆ ಇಟ್ಟಿದ್ದ ಕರ್ನಾಟಕ ಸಂಘದ ಅಧ್ಯಕ್ಷ ಪ್ರೊ.ಬಿ.ಜಯಪ್ರಕಾಶಗೌಡ ಅವರು ಹೇಳಿದ ಮಾತು ಉಳಿಸಿಕೊಳ್ಳುತ್ತೇನೋ ಎಂಬ ಭಯ ಆವರಿಸುತ್ತು ಎಂದು ಬೆಂಗಳೂರು ವಿಶ್ವವಿದ್ಯಾನಿಲಯದ ನಿವೃತ್ತ ಪ್ರಾಧ್ಯಾಪಕ ರಾಜಪ್ಪ ದಳವಾಯಿ ನೆನಪಿಸಿಕೊಂಡರು.

ನಗರದ ಪಿಇಎಸ್ ಇಂಜಿನಿಯರಿಂಗ್ ಕಾಲೇಜಿನ ನಿತ್ಯಸಚಿವ ಕೆ.ವಿ.ಶಂಕರಗೌಡ ತರಬೇತಿ ಮತ್ತು ಉದ್ಯೋಗ ಕೇಂದ್ರ ಸಭಾಂಗಣದಲ್ಲಿ ಜನತಾ ಶಿಕ್ಷಣ ಟ್ರಸ್ಟ್ ವತಿಯಿಂದ ನಿತ್ಯಸಚಿವ ಕೆ.ವಿ.ಶಂಕರಗೌಡರ 109ನೇ ಜನ್ಮದಿನಾಚರಣೆ ಅಂಗವಾಗಿ ಆಯೋಜಿಸಿದ್ದ 2024ನೇ ಸಾಲಿನ ರಾಜ್ಯಮಟ್ಟದ ಕೆ.ವಿ.ಶಂಕರಗೌಡ ಮತ್ತು ಕೆ.ಎಸ್.ಸಚ್ಚಿದಾನಂದ ರಂಗಭೂಮಿ ಪ್ರಶಸ್ತಿ ಸ್ವೀಕರಿಸಿ ಮಾತನಾಡಿದ ಅವರು, ಕೆವಿಎಸ್ ಅವರ ಹೆಸರಿನಲ್ಲಿ ಪ್ರಶಸ್ತಿ ಸ್ವೀಕರಿಸುತ್ತಿರುವುದು ನನಗೆ ಸಂತೋಷವಾಗಿದೆ ಎಂದು ಹೇಳಿದರು.

ಒಬ್ಬ ಕವಿ ಬರೆದಿರುವ ಹಾಗೆ ಮೂರು ಗಜದ ಟೇಪಿನಲ್ಲಿ ಅಳೆಯ ಬಹುದೇ ಆಕಾಶವ ಎನ್ನುವಂತಹ ಮಾತಿನಷ್ಟೇ ಅದ್ಭುತವಾದ ಜೀವನವನ್ನು ಶಂಕರಗೌಡರು ನಡೆಸಿದರು. ಈ ಇಂಜಿನಿಯರ್ ಕಾಲೇಜನ್ನು ಕಟ್ಟಲು ಎಷ್ಟು ಕಷ್ಟ ಪಟ್ಟಿದ್ದಾರೆ ಎನ್ನುವುದು ಸಹ ಕಾಣುತ್ತದೆ. ಬಿ.ಎ, ಬಿಎಸ್ಸಿ, ಬಿಇಡಿ ಸೇರಿದಂತೆ ಶಿಕ್ಷಣದಲ್ಲಿ ಯಾವ ಕೋರ್ಸ್‌ನ್ನು ತೆರೆದರೆ ವಿದ್ಯಾರ್ಥಿಗಳಿಗೆ ಅನುಕೂಲವಾಗುತ್ತದೆ ಎಂಬುದನ್ನು ನೋಡಿಕೊಂಡೇ ಸಂಸ್ಥೆ ಕಟ್ಟಿರುವ ಸಂಗತಿ ಮರೆಯುವಂತಿಲ್ಲ. ಅಂತಹ ಮಹನೀಯರ ಹೆಸರಿನಲ್ಲಿ ಪ್ರಶಸ್ತಿ ತೆಗೆದುಕೊಂಡಿರುವ ನಾನು ಭಾಗ್ಯಶಾಲಿ ಎಂದು ಸ್ಮರಿಸಿದರು.

ಕನ್ನಡ ಎಷ್ಟು ಶಕ್ತಿಯುತವಾಗಿದೆ ಎನ್ನುವುದನ್ನು ನಾವು ತಿಳಿದಿಲ್ಲ. ಅದಕ್ಕೆ ಸಾವಿರಾರು ವರ್ಷದ ದೊಡ್ಡಪರಂಪರೆ ಇದೆ. ಜೈನರು, ವೀರ ಶೈವ ಸಾಹಿತ್ಯ, ಶರಣರ ಸಾಹಿತ್ಯ, ದಾಸ ಸಾಹಿತ್ಯ, ಆಧುನಿಕ ಸಂದರ್ಭದಲ್ಲಿ ರಾಜಾಶ್ರಿತರು ಹೀಗೆ ಹಲವು ಆಯಾಮಾಗಳಲ್ಲಿ ಕನ್ನಡ ಎನ್ನುವುದು ತೆರೆದುಕೊಳ್ಳುತ್ತದೆ ಎಂದು ವಿವರಿಸಿದರು.

ಸಮಾಜ ಸೇವಾ ಪ್ರಶಸ್ತಿ ಸ್ವೀಕರಿಸಿದ ಮಾತನಾಡಿದ ನಾಗಮಂಗಲ ತಾಲೂಕು ಹೊನ್ನಾವರ ಪ್ರಾಥಮಿಕ ಆರೋಗ್ಯ ಕೇಂದ್ರದ ವೈದ್ಯಾಧಿಕಾರಿ ಡಾ.ಟಿಪ್ಪು ಸುಲ್ತಾನ್, ಪ್ರಶಸ್ತಿ ಸಿಕ್ಕಿರುವುದಕ್ಕೆ ಕನ್ನಡವೇ ಮೂಲ ಕಾರಣ. ಏಕೆಂದರೆ ನನಗೆ ಎಂಬಿಬಿಎಸ್ ಪ್ರವೇಶ ಸಿಕ್ಕಿರುವುದು. ಸರ್ಕಾರಿ ಕೆಲಸ ಸಿಕ್ಕಿರುವುದು ಕೂಡ ಕನ್ನಡ ಮಾಧ್ಯಮದಲ್ಲಿ ಓದಿರುವುದರಿಂದ. ಸರ್ಕಾರಿ ಆಸ್ಪತ್ರೆಗೆ ದೂರದ ಊರಿನಿಂದ ಬಡವರು ಬರುತ್ತಾರೆ. ಅಲ್ಲಿ ಕೆಲಸ ಮಾಡುತ್ತಿರುವಾಗ ಒಂದು ಅನುಭವ ಆಗಿದೆ. ಸರ್ಕಾರಿ ಕೆಲಸ ಸಿಕ್ಕಿದರೆ ಪ್ರಾಥಮಿಕ ಆರೋಗ್ಯ ಕೇಂದ್ರವನ್ನು ಉನ್ನತೀಕರಿಸುವ ಆಲೋಚನೆ ಬಂತು ಎಂದರು.

ಯಾವುದೇ ವೈದ್ಯರು ಗ್ರಾಮೀಣ ಭಾಗದ ರೋಗಿಗಳನ್ನು ಮುಟ್ಟಿ ಮಾತನಾಡಿಸಿ ಚಿಕಿತ್ಸೆ ನೀಡಿದರೆ ಆ ರೋಗಿಯ ಅರ್ಧ ರೋಗ ವಾಸಿಯಾಗುತ್ತದೆ. ಆಯುಷ್ಮಾನ್ ಭಾರತ್ ಆರೋಗ್ಯ ಕರ್ನಾಟಕ ಯೋಜನೆಯಿಂದ ಅನುದಾನ ಬರುತ್ತದೆ. ಅದನ್ನು ಆಸ್ಪತ್ರೆಗೆ ಇಂತಹ ಸೌಲಭ್ಯ ಏಕೆ ಬಳಸಿಕೊಳ್ಳಬಾರದೆಂದು ಖಾಸಗಿ ಅಥವಾ ಕ್ಲಿನಿಕ್‌ಗಳಿಗಿಂತ ಹೆಚ್ಚು ಸೌಲಭ್ಯ ಸಿಗುವ ಹಾಗೆ ಮಾಡಲು ಗ್ರಾಮ ಪಂಚಾಯಿತಿ, ಅಧಿಕಾರಿ, ನಮ್ಮ ಸಿಬ್ಬಂದಿ ಹಾಗೂ ಗ್ರಾಮಸ್ಥರ ಸಹಾಯದಿಂದ ಉನ್ನತೀಕರಿಸಿರುವೆ ಎಂದರು.

ಜನತಾ ಶಿಕ್ಷಣ ಟ್ರಸ್ಟ್ ಅಧ್ಯಕ್ಷ ಕೆ.ಎಸ್.ವಿಜಯಾನಂದ ಅಧ್ಯಕ್ಷತೆ ವಹಿಸಿದ್ದರು. ಟ್ರಸ್ಟ್‌ನ ಕಾರ್ಯದರ್ಶಿ ಎಸ್.ಎಲ್.ಶಿವಪ್ರಸಾದ್, ನಿರ್ದೇಶಕ ಡಾ.ರಾಮಲಿಂಗಯ್ಯ, ಪ್ರಾಂಶುಪಾಲೆ ಡಾ.ಡಿ.ವಿ.ಸುವರ್ಣಾ, ಉಪನ್ಯಾಸಕರಾದ ವೀರೇಶ್, ನಂದೀಶ್ ಇದ್ದರು.

ಇದೇ ಸಂದರ್ಭದಲ್ಲಿ ರಾಜ್ಯಮಟ್ಟದ ಕೆ.ವಿ.ಶಂಕರಗೌಡ ಮತ್ತು ಕೆ.ಎಸ್.ಸಚ್ಚಿದಾನಂದ ರಂಗಭೂಮಿ ಪ್ರಶಸ್ತಿಯನ್ನು ನಿವೃತ್ತ ಪ್ರಾಧ್ಯಾಪಕ ರಾಜಪ್ಪ ದಳವಾಯಿ, ಸಮಾಜ ಸೇವಾ ಪ್ರಶಸ್ತಿಯನ್ನು ಡಾ.ಟಿಪ್ಪು ಸುಲ್ತಾನ್ ಅವರಿಗೆ ತಲಾ 25 ಸಾವಿರ ರೂ ಫಲಕದೊಂದಿಗೆ ಪ್ರದಾನ ಮಾಡಲಾಯಿತು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net