

ಮಂಡ್ಯ: ಜು.27ರಂದು ಕರ್ನಾಟಕ ಸಂಘದ ನಾಟಕೋತ್ಸವಕ್ಕೆ ಚಾಲನೆ, ಕೆ.ವಿ.ಶಂಕರಗೌಡ ಅಧ್ಯಯನ ಪೀಠ ಉದ್ಘಾಟನೆ, ಕೆ.ವಿ.ಶಂಕರಗೌಡ ಲಲಿತಕಲಾ ಪ್ರಶಸ್ತಿ ಪ್ರದಾನ ಮತ್ತು ಸನ್ಮಾನ ಸಮಾರಂಭ ನಡೆಯಲಿದೆ ಎಂದು ಕರ್ನಾಟಕ ಸಂಘದ ಅಧ್ಯಕ್ಷ ಪ್ರೊ.ಬಿ.ಜಯಪ್ರಕಾಶಗೌಡ ತಿಳಿಸಿದರು.
ಅಂದು ಸಂಜೆ 4ಕ್ಕೆ ಕನ್ನಡ ಮತ್ತು ಸಂಸ್ಕೃತಿ ಸಚಿವ ಶಿವರಾಜ್ ಎಸ್.ತಂಗಡಗಿ ಸಮಾರಂಭ ಉದ್ಘಾಟಿಸುವರು. ಶಾಸಕ ರವಿಕುಮಾರ ಗಣಿಗ ಅಧ್ಯಕ್ಷತೆ ವಹಿಸುವರು. ಕೆ.ವಿ.ಶಂಕರಗೌಡ ಅಧ್ಯಯನ ಪೀಠ ಮತ್ತು ಕಾರ್ಯಕ್ರಮಗಳ ಬಗ್ಗೆ ಮಾಜಿ ಎಂಎಲ್‌ಸಿ ಕೆ.ಟಿ.ಶ್ರೀಕಂಠೇಗೌಡ ಮಾತನಾಡುವರು. ಅಧ್ಯಯನ ಪೀಠದ ಸಂದರ್ಶಕ ಪ್ರಾಧ್ಯಾಪಕ ಹುದ್ದೆಯನ್ನು ವಿದ್ವಾಂಸ ಡಾ.ರಾಗೌ ಸ್ವೀಕರಿಸುವರು ಎಂದು ಸೋಮವಾರ ಸುದ್ದಿಗೋಷ್ಠಿಯಲ್ಲಿ ವಿವರಿಸಿದರು.
ಬೆಂಗಳೂರಿನ ಕೇಂದ್ರ ವಲಯದ ಐಜಿಪಿ ಬಿ.ಆರ್‌ವಿಕಾಂತೇಗೌಡ ಅವರು ಕಲಾವಿದ ಮಾರ್ಕಾಲು ದೇವರಾಜು ಅವರಿಗೆ ಕೆ.ವಿ.ಶಂಕರಗೌಡ ಲಲಿತಕಲಾ ಪ್ರಶಸ್ತಿ ಪ್ರದಾನ ಮಾಡುವರು. ಇದೇ ವೇಳೆ ಭಾಗವತರು ಮತ್ತು ರಂಗದ ಹಿಂದೆ ಕೆಲಸ ಮಾಡುವ ಕಲಾವಿದರು, ಸಹಾಯಕರನ್ನು ಗುರುತಿಸಿ ಸನ್ಮಾನಿಸಲಾಗುವುದು ಎಂದರು.