

ವಿಜಯವಾಣಿ ಸುದ್ದಿಜಾಲ ಧಾರವಾಡ
ಆರ್ಥಿಕ ವ್ಯವಸ್ಥೆ ಕುಂಠಿತಗೊಂಡಿದ್ದ ಸಂದರ್ಭದಲ್ಲೂ ಕರ್ನಾಟಕ ವಿಕಾಸ ಗ್ರಾಮೀಣ ಬ್ಯಾಂಕ್ 2022-23ನೇ ಆರ್ಥಿಕ ವರ್ಷದಲ್ಲಿ ಶೇ. 7.82 ಪ್ರಗತಿ ದರದಲ್ಲಿ 33150 ಕೋಟಿ ರೂ. ವಹಿವಾಟು ದಾಖಲಿಸಿದೆ. 40.25 ಕೋಟಿ ರೂ. ನಿಕ್ಕಿ ಲಾಭ ಗಳಿಸಿದ್ದು, ನಿವ್ವಳ ಸಂಪತ್ತನ್ನು 1264.56 ಕೋಟಿ ರೂ.ಗೆ ವೃದ್ಧಿಸಿದೆ ಎಂದು ಬ್ಯಾಂಕ್ ಅಧ್ಯಕ್ಷ ಶ್ರೀಕಾಂತ ಭಂಡಿವಾಡ ತಿಳಿಸಿದರು.
ನಗರದಲ್ಲಿ ಶನಿವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಠೇವಣಿ ಸಂಗ್ರಹಣೆಯಲ್ಲಿ ಶೇ.6.03ರ ಪ್ರಗತಿ ದರದಲ್ಲಿ 18710 ಕೋಟಿ ರೂ. ತಲುಪಿರುವ ಬ್ಯಾಂಕ್, ಗ್ರಾಹಕರ ಸಂಖ್ಯೆ 88 ಲಕ್ಷಕ್ಕೂ ಹೆಚ್ಚಿದೆ. ಪ್ರತಿ ಉದ್ಯೋಗಿಯ ಸರಾಸರಿ ವಹಿವಾಟು 9.34 ಕೋಟಿ ರೂ. ಗಳಿಂದ 10.08 ಕೋಟಿ ರೂ.ಗೆ ಏರಿದೆ ಎಂದರು.
ಪ್ರಸಕ್ತ ಆರ್ಥಿ ವರ್ಷ (2023-24ನೇ ಸಾಲು)ದಲ್ಲಿ ಬ್ಯಾಂಕ್ 20400 ಕೋಟಿ ರೂ. ಠೇವಣಿ ಮತ್ತು 15300 ಕೋಟಿ ರೂ. ಮುಂಗಡ ಮಟ್ಟ ತಲುಪುವ ಮೂಲಕ 35000 ಕೋಟಿ ರೂ. ವಹಿವಾಟು ಸಾಧಿಸಿ 150 ಕೋಟಿ ರೂ. ನಿಕ್ಕಿ ಲಾಭ ಗಳಿಸುವ ಗುರಿ ಹೊಂದಲಾಗಿದೆ. ಸಾಲದ ಬಡ್ಡಿ ತಗ್ಗಿಸಿದ್ದು, ಹೊಸ ಆರ್ಥಿಕ ವರ್ಷದಲ್ಲೂ ಕೃಷಿ, ಉದ್ಯಮ ಮತ್ತು ಗೃಹಸಾಲ ಒಳಗೊಂಡ ರಿಟೇಲ್ ಸಾಲಗಳಿಗೆ ಆದ್ಯತೆ ನೀಡಲಾಗುವುದು ಎಂದರು.
ರಾಜ್ಯದ 9 ಜಿಲ್ಲೆಗಳಲ್ಲಿ 629 ಶಾಖೆಗಳನ್ನು ಹೊಂದಿರುವ ಬ್ಯಾಂಕ್ 2022-23ನೇ ಸಾಲಿನಲ್ಲಿ ವಿವಿಧ ರಂಗಗಳಿಗೆ ಸಂಬಂಧಿಸಿ 10383 ಕೋಟಿ ರೂ. ಸಾಲ ವಿತರಿಸಿದೆ. ಬ್ಯಾಂಕಿನ ಸಾಲ ಹಾಗೂ ಮುಂಗಡಗಳು ಶೇ.10.22 ಪ್ರಗತಿ ದರದಲ್ಲಿ 14440 ಕೋಟಿ ರೂ. ತಲುಪಿದೆ. ಕೃಷಿ ಸಾಲದ ಪ್ರಮಾಣ 10276 ಕೋಟಿ ರೂ.ಗಳಾಗಿದೆ. ಕಳೆದ ಸಾಲಿನಲ್ಲಿ ಕಿಸಾನ ಕ್ರೆಡಿಟ್ ಕಾರ್ಡ್ ಯೋಜನೆ ಅಡಿ 354314 ರೈತರಿಗೆ 7814 ಕೋಟಿ ರೂ. ಸಾಲ ವಿತರಿಸಿದೆ ಎಂದರು.
ಬ್ಯಾಂಕಿನ ಮಹಾ ಪ್ರಬಂಧಕರಾದ ವಿ. ಥೆನಾರಸು, ಸತೀಶ ಆರ್, ಮಾಲಾಕಿ ಪುನೀತ, ಸತ್ಯಪ್ರಸಾದ ಎನ್., ಆರ್.ಟಿ. ಕಾಂಬ್ಳೆ, ಉಲ್ಲಾಸ ಗುನಗಾ, ಇತರರು ಸುದ್ದಿಗೋಷ್ಠಿಯಲ್ಲಿದ್ದರು.