25, 26ರಂದು ಕೆವಿಜಿ ಸುಳ್ಯ ಹಬ್ಬ: ಸಮಿತಿ ಅಧ್ಯಕ್ಷ ಡಾ.ಎನ್.ಎ.ಜ್ಞಾನೇಶ್ ಮಾಹಿತಿ

Published on

ಸುಳ್ಯ: ಕೆವಿಜಿ ಸುಳ್ಯ ಹಬ್ಬ ಸಮಾಜ ಸೇವಾ ಸಂಘದ ವತಿಯಿಂದ ಡಿ.25, 26ರಂದು ಕೆವಿಜಿ ಸುಳ್ಯ ಹಬ್ಬ ನಡೆಯಲಿದೆ. ಸುಳ್ಯ ಹಬ್ಬ ಸಮಿತಿ ಅಧ್ಯಕ್ಷ ಡಾ.ಎನ್.ಎ.ಜ್ಞಾನೇಶ್ ಸುದ್ದಿಗೋಷ್ಠಿಯಲ್ಲಿ ಮಾಹಿತಿ ನೀಡಿ, ಈ ವರ್ಷ ದಿ.ಡಾ.ಕುರುಂಜಿ ವೆಂಕಟ್ರಮಣ ಗೌಡರ 96ನೇ ಜಯಂತಿ ವರ್ಷವಾಗಿದ್ದು, ಕೆವಿಜಿ ಕಾನೂನು ಕಾಲೇಜಿನ ಆವರಣದಲ್ಲಿ ಕಾರ್ಯಕ್ರಮ ನಡೆಯಲಿದೆ ಎಂದು ತಿಳಿಸಿದರು.

25ರಂದು ವಿದ್ಯಾರ್ಥಿಗಳಿಗೆ, ಸಾರ್ವಜನಿಕರಿಗೆ ಮತ್ತು ಕೆವಿಜಿ ಸುಳ್ಯ ಹಬ್ಬ ಸಮಿತಿ ಸದಸ್ಯರಿಗೆ ಕ್ರೀಡೆ ಮತ್ತು ಸಾಂಸ್ಕೃತಿಕ ಸ್ಪರ್ಧೆ ನಡೆಯಲಿದೆ. ಶ್ರೀ ಚೆನ್ನಕೇಶವ ದೇವಸ್ಥಾನ ಆನುವಂಶಿಕ ಆಡಳಿತ ಮೊಕ್ತೇಸರ ಡಾ.ಹರಪ್ರಸಾದ್ ತುದಿಯಡ್ಕ ಉದ್ಘಾಟಿಸುವರು. ವೇಗ ನಡಿಗೆಯ ರಾಷ್ಟ್ರೀಯ ಕ್ರೀಡಾಪಟು ಸುಬ್ರಹ್ಮಣ್ಯ ಕೆ.ಕ್ರೀಡಾಕೂಟಕ್ಕೆ ಚಾಲನೆ ನೀಡುವರು. ಸಮಿತಿ ಅಧ್ಯಕ್ಷ ಡಾ.ಎನ್.ಎ.ಜ್ಞಾನೇಶ್ ಅಧ್ಯಕ್ಷತೆ ವಹಿಸುವರು. ಗೌರವಾಧ್ಯಕ್ಷ ಡಾ.ಕೆ.ವಿ.ಚಿದಾನಂದರು ಉಪಸ್ಥಿತರಿರುವರು.

26ರಂದು ಬೆಳಗ್ಗೆ 9.30ಕ್ಕೆ ಕೆವಿಜಿ ಸುಳ್ಯ ಹಬ್ಬ ಸಮಾಜ ಸೇವಾ ಸಂಘದ ಕಚೇರಿಯಲ್ಲಿ ಕೆವಿಜಿ ಭಾವಚಿತ್ರಕ್ಕೆ ಪುಷ್ಪ ನಮನ ನಡೆಯುವುದು. ರವಿಪ್ರಸಾದ್ ಕೇರ್ಪಳ ಮತ್ತು ಯತೀಶ್ ಪಂಜಿಗುಂಡಿ ಅವರಿಗೆ ಸುಳ್ಯ ಹಬ್ಬ ಸಮಿತಿ ವತಿಯಿಂದ ತಲಾ ರೂ. 25 ಸಾವಿರ ವಿತರಿಸಲಾಗುವುದು. ಸಂಜೆ 5.30ರಿಂದ ಕೆವಿಜಿ ಸಂಸ್ಮರಣೆ, ಕೆವಿಜಿ ಸಾಧನಾ ಶ್ರೀ ಪ್ರಶಸ್ತಿ ಹಾಗೂ ಯುವ ಸಾಧಕರಿಗೆ ಪ್ರಶಸ್ತಿ ಪ್ರದಾನ ಸಮಾರಂಭ ಆರಂಭಗೊಳ್ಳಲಿದೆ.

ರಾಷ್ಟ್ರಪ್ರಶಸ್ತಿ ಪುರಸ್ಕೃತ ಶಿಕ್ಷಕ ಕೆ.ಆರ್.ಗಂಗಾಧರ್ ಹಾಗೂ ಸುಳ್ಯದ ಹಿರಿಯ ವೈದ್ಯ ಡಾ.ಎಂ.ವಿ.ಶಂಕರ ಭಟ್‌ರಿಗೆ ಕೆವಿಜಿ ಸಾಧನಾಶ್ರೀ ಪ್ರಶಸ್ತಿ ನೀಡಿ ಗೌರವಿಸಲಾಗುವುದು. ಕೆವಿಜಿ ಯುವ ಪ್ರಶಸ್ತಿ ಡಾ.ರವಿಕಾಂತ್ ಜಿ.ಒ.(ವೈದ್ಯಕೀಯ), ಕಸ್ತೂರಿ ಶಂಕರ್ (ಸ್ವ ಉದ್ಯೋಗ), ಅಶ್ರಫ್ ಕಮ್ಮಾಡಿ (ಉದ್ಯಮ), ಆದರ್ಶ್ ಎಸ್.ಪಿ.(ಕ್ರೀಡೆ) ಹಾಗೂ ಪ್ರಕಾಶ್ ಕುಮಾರ್ ಮುಳ್ಯ (ಕೃಷಿ ಹೈನುಗಾರಿಕೆ) ಅವರಿಗೆ ನೀಡಲಾಗುವುದು ಎಂದರು.

ಕೆವಿಜಿ ಸುಳ್ಯ ಹಬ್ಬ ಸಮಿತಿ ಪ್ರಧಾನ ಕಾರ್ಯದರ್ಶಿ ರಾಜು ಪಂಡಿತ್, ಕೋಶಾಧಿಕಾರಿ ಶ್ರೀಕೃಷ್ಣ ಎಂ.ಎನ್., ನಿಕಟಪೂರ್ವಾಧ್ಯಕ್ಷ ಚಂದ್ರಶೇಖರ ಪೇರಾಲು ಹಾಗೂ ಸದಸ್ಯತ್ವ ಅಭಿಯಾನ ಸಮಿತಿ ಸಂಚಾಲಕ ಹರೀಶ್ ಬಂಟ್ವಾಳ್ ಗೋಷ್ಠಿಯಲ್ಲಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net