

ಹುಬ್ಬಳ್ಳಿ: ರಾಜನಗರ ಕೇಂದ್ರೀಯ ವಿದ್ಯಾಲಯ (ನಂ. 1)ದಲ್ಲಿ ಆಯೋಜಿಸಿದ್ದ ರಾಷ್ಟ್ರೀಯ ಭಾವೈಕ್ಯತೆ ಉತ್ಸವವು ಗಮನ ಸೆಳೆಯಿತು.
ಬೆಂಗಳೂರು ಪ್ರಾಂತೀಯ ವ್ಯಾಪ್ತಿಯ 9 ಕೇಂದ್ರೀಯ ವಿದ್ಯಾಲಯಗಳ 268 ವಿದ್ಯಾರ್ಥಿಗಳು ವಿವಿಧ ಸಾಂಸ್ಕೃತಿಕ ಕಾರ್ಯಕ್ರಮ, ಪ್ರದರ್ಶನಗಳನ್ನು ನೀಡಿದರು. ಉತ್ತರಾಖಂಡ ರಾಜ್ಯದ ಸಾಂಸ್ಕೃತಿಕ ಜೀವನ ಆಧರಿಸಿದ ನೃತ್ಯ, ಸಮೂಹ ಗಾಯನ, ನಾಟಕ, ಶಾಸ್ತ್ರೀಯ ನೃತ್ಯ, ಜಾನಪದ ನೃತ್ಯ-ಸಂಗೀತ ಕಾರ್ಯಕ್ರಮ ನೀಡಿದರು.
ವಿವಿಧ ಕಲಾಕೃತಿಗಳು, ಪ್ರಾಜೆಕ್ಟ್, 2ಡಿ, 3ಡಿ ಆಯಾಮದ ಮಾದರಿಗಳ ಪ್ರದರ್ಶನ ಸಹ ಏರ್ಪಡಿಸಲಾಗಿತ್ತು. ಮಾಧ್ಯಮಿಕ ಹಂತದ ವಿದ್ಯಾರ್ಥಿಗಳಲ್ಲಿ ದೇಶದ ಶ್ರೀಮಂತ ಸಾಂಸ್ಕೃತಿಕ ಪರಂಪರೆ, ವೈವಿಧ್ಯತೆಯನ್ನು ಉತ್ತೇಜಿಸುವ ಉದ್ದೇಶದಿಂದ ಕಾರ್ಯಕ್ರಮ ಆಯೋಜಿಸಲಾಗಿತ್ತು ಎಂದು ಕೇಂದ್ರೀಯ ವಿದ್ಯಾಲಯದ ಪ್ರಕಟಣೆ ತಿಳಿಸಿದೆ.