ಭಾರತೀಯ ವಲಸಿಗರಿಗೆ ಕುವೈತ್ ನಿರ್ಬಂಧ

kuwaith new
Published on

ಮಂಗಳೂರು: ಕೋವಿಡ್ -19 ಆತಂಕದಿಂದ ಪಾರಾಗಲು ಇದ್ದ ದುಡ್ಡು ಒಟ್ಟುಗೂಡಿಸಿ, ಸಾಲ ತೆಗೆದು ಕಷ್ಟಪಟ್ಟು ಕುವೈತ್‌ನಿಂದ ಸ್ವದೇಶಕ್ಕೆ ಮರಳಿದ್ದ ಅನೇಕ ಭಾರತೀಯರಿಗೆ ಈಗ ಉದ್ಯೋಗ ಕಳೆದುಕೊಳ್ಳುವ ಭೀತಿ ಎದುರಾಗಿದೆ.

ಭಾರತ ಸಹಿತ ಏಳು ದೇಶಗಳ ಜನರ ಪ್ರವೇಶಕ್ಕೆ ಕುವೈತ್ ತಾತ್ಕಾಲಿಕ ತಡೆ ನೀಡಿದೆ. ಬಾಂಗ್ಲಾದೇಶ, ಇರಾನ್, ನೇಪಾಳ, ಪಾಕಿಸ್ತಾನ, ಫಿಲಿಫೈನ್ಸ್ ಮತ್ತು ಶ್ರೀಲಂಕಾ ನಿರ್ಬಂಧಕ್ಕೆ ಒಳಗಾಗಿರುವ ಇತರ ರಾಷ್ಟ್ರಗಳು. ಕುವೈತ್ ಸರ್ಕಾರದ ಸಂವಹನ ಕೇಂದ್ರವು ಟ್ವಿಟ್ಟರ್‌ನಲ್ಲಿ ಇದನ್ನು ಪ್ರಕಟಿಸಿದ್ದು, ಎಷ್ಟು ಸಮಯದವರೆಗೆ ಇದು ಅನ್ವಯವಾಗುತ್ತದೆ ಎಂದು ಕಾಲಮಿತಿ ನಿಗದಿಪಡಿಸಿಲ್ಲ.

ನಿರ್ಬಂಧ ಪಟ್ಟಿಯಲ್ಲಿ ಇರದ ಇತರ ರಾಷ್ಟ್ರಗಳ ನಡುವೆ ಕುವೈತ್ ಆ.1ರಿಂದ ಅಂತಾರಾಷ್ಟ್ರೀಯ ವಿಮಾನ ಸಂಚಾರ ಪುನರಾರಂಭಿಸಲಿದೆ.

ವೀಸಾ ಅಮಾನ್ಯ: ವಲಸಿಗರು ಆರು ತಿಂಗಳಿಗಿಂತ ಅಧಿಕ ದಿನ ಉದ್ಯೋಗದಲ್ಲಿ ಇರುವ ದೇಶದಿಂದ ಹೊರಗೆ ಇದ್ದರೆ ಅವರ ವೀಸಾ ತನ್ನಿಂತಾನೇ ರದ್ದುಗೊಳ್ಳುವುದು. ಕೆಲವರು ಲಾಕ್‌ಡೌನ್ ಮೊದಲೇ ರಜೆಯಲ್ಲಿ ಊರಿಗೆ ತೆರಳಿದವರು ಕೂಡ ಊರಿಗೆ ಮರಳಲು ಸಾಧ್ಯವಾಗಿಲ್ಲ. ಆರು ತಿಂಗಳು ಅವಧಿ ಮುಗಿದರೆ ಆ ವೀಸಾಕ್ಕೆ ಮಾನ್ಯತೆ ಇರುವುದಿಲ್ಲ. ಈಗಾಗಲೇ ಕುವೈತ್‌ನಲ್ಲಿ ಉದ್ಯೋಗಕ್ಕೆ ಸ್ಥಳೀಯರಿಗೆ ಆದ್ಯತೆ ಒದಗಿಸಲು ಆರಂಭಿಸಲಾಗಿದೆ. ಒಂದು ವೇಳೆ ಒಮ್ಮೆ ವೀಸಾ ಅವಧಿ ನಷ್ಟಗೊಂಡರೆ ಮತ್ತೆ ಉದ್ಯೋಗ ಪಡೆಯುವುದು ಭಾರತೀಯರಿಗೆ ಕಷ್ಟವಾಗಲಿದೆ.

‘ಈ ನಡುವೆ ಕೋವಿಡ್ ಹಿನ್ನೆಲೆಯಲ್ಲಿ ದೇಶದಿಂದ ಹೊರಗೆ ಇರುವ ಆರು ತಿಂಗಳ ಅವಧಿಯನ್ನು ಒಂದು ವರ್ಷಕ್ಕೆ ವಿಸ್ತರಿಸಲಾಗಿದೆ ಎನ್ನುವ ಸುದ್ದಿ ಹರಡಿದೆ. ಈ ಬಗ್ಗೆ ಯಾವುದೇ ಅಧಿಕೃತ ಪ್ರಕಟಣೆ ಹೊರಬಿದ್ದಿಲ್ಲ. ಅವಧಿ ವಿಸ್ತರಣೆಯಾದರೆ ಸ್ವದೇಶಕ್ಕೆ ಮರಳಿರುವ ಭಾರತೀಯರಿಗೆ ಮತ್ತೆ ಕುವೈತ್‌ನಲ್ಲಿ ಉದ್ಯೋಗ ಮುಂದುವರಿಸಲು ಅನುಕೂಲವಾಗಲಿದೆ’ ಎನ್ನುತ್ತಾರೆ ದಕ್ಷಿಣ ಕನ್ನಡ ಮೂಲದ ವಿಜ್ಞಾನಿ ವಿನೋದ್ ಕುಮಾರ್ ಅಂಬ್ಲಮೊಗರು.

ಕರೊನಾ ಕಾಟದಿಂದ ಕುವೈತ್ ಚೇತರಿಸಿಕೊಳ್ಳುತ್ತಿದ್ದು, ಸೋಂಕು ಅಧಿಕವಿರುವ ರಾಷ್ಟ್ರಗಳಿಂದ ಜನರು ಆಗಮಿಸಲು ಅವಕಾಶ ಒದಗಿಸಿದರೆ ಮತ್ತೆ ಸಮಸ್ಯೆಯಾದೀತು ಎನ್ನುವ ಉದ್ದೇಶದಿಂದ ನಿರ್ಬಂಧ ವಿಧಿಸಿರಬಹುದು. - ಮಂಜೇಶ್ವರ ಮೋಹನ್‌ದಾಸ್ ಕಾಮತ್, ಕುವೈತ್‌ನಲ್ಲಿರುವ ಅನಿವಾಸಿ ಭಾರತೀಯ ಇಂಜಿನಿಯರ್

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net