

ಚನ್ನರಾಯಪಟ್ಟಣ: ನಾಡು ಕಂಡ ಸರ್ವಶ್ರೇಷ್ಠ, ರಾಷ್ಟ್ರಕವಿ, ಜಗದಕವಿ ಕುವೆಂಪು ಅವರ 120ನೇ ಜನ್ಮದಿನಾಚರಣೆ ಹಾಗೂ ಕನ್ನಡಪರ ಸಂಘಟನೆ ಕರುನಾಡ ಸರ್ವಜನ ವೇದಿಕೆಯ ಮೊದಲನೇ ವರ್ಷದ ಸ್ವಾಭಿಮಾನಿ ಕನ್ನಡಿಗರ ರಾಜ್ಯ ಮಟ್ಟದ ಸಮಾವೇಶವನ್ನು ಡಿ.28ರಂದು ಸಂಜೆ 7 ಗಂಟೆಗೆ ಪಟ್ಟಣದ ಮಾಧ್ಯಮಿಕ ಶಾಲಾ ಆವರಣದಲ್ಲಿ ಆಯೋಜಿಸಲಾಗಿದೆ ಎಂದು ಕರುನಾಡ ಸರ್ವಜನ ವೇದಿಕೆಯ ರಾಜ್ಯ ಗೌರವಾಧ್ಯಕ್ಷ ಕೆ.ಎಂ. ನಾಗೇಂದ್ರ ಬಾಬು ತಿಳಿಸಿದರು.
ಕನ್ನಡ ಭಾಷೆ, ನೆಲ, ಜಲ, ನಾಡಿಗೆ ಅನ್ಯಾಯವಾದಾಗ ಸರ್ಕಾರಗಳು, ಜನಪ್ರತಿನಿಧಿಗಳನ್ನು ಎಚ್ಚರಿಸುವ ಕೆಲಸವನ್ನು ಪ್ರಾಮಾಣಿಕವಾಗಿ ರಾಜ್ಯದಲ್ಲಿ ಕರುನಾಡ ಸರ್ವಜನ ವೇದಿಕೆ ನಿರ್ವಹಿಸುತ್ತಿದೆ. ನಾಡಿಗೆ, ನಾಡಿನ ರೈತರಿಗೆ ಸಮಸ್ಯೆ ಸೃಷ್ಟಿಯಾದಾಗ ಪ್ರಾಮಾಣಿಕವಾಗಿ ಹೋರಾಟ ಮಾಡುತ್ತಿದ್ದು, ಸಂಘಟನೆಯ ಮೊದಲನೇ ವರ್ಷದ ರಾಜ್ಯಮಟ್ಟದ ಸಮಾವೇಶವನ್ನು ಚನ್ನರಾಯಪಟ್ಟಣದಲ್ಲಿ ಹಮ್ಮಿಕೊಳ್ಳಲಾಗಿದೆ. ಕಾರ್ಯಕ್ರಮದಲ್ಲಿ ಆದಿಚುಂಚನಗಿರಿ ಹಾಸನ ಶಾಖಾ ಮಠದ ಶ್ರೀ ಶಂಭುನಾಥ ಸ್ವಾಮೀಜಿ, ಶ್ರೀ ಸಾಯಿ ಸಂಸ್ಥಾನದ ಪೀಠಾಧ್ಯಕ್ಷ ಶ್ರೀ ಗುರುಮೂರ್ತಿ ಗುರೂಜಿ, ಶ್ರೀ ಮೆಳೆಯಮ್ಮ ಆಧ್ಯಾತ್ಮಿಕ ಕೇಂದ್ರದ ಚಂದ್ರಶೇಖರ ಗುರೂಜಿ, ಹೊಸಕೊಪ್ಪಲಿನ ಶ್ರೀ ಕ್ಷೇತ್ರ ಶಕ್ತಿ ಮಠದ ಡಾ. ಬಸವೇಶ್ವರ ಚೈತನ್ಯ ಸ್ವಾಮೀಜಿ ಸಾನ್ನಿಧ್ಯ ವಹಿಸುವರು ಎಂದು ಗುರುವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಬೆಂಗಳೂರಿನ ಮಲ್ಲೇಶ್ವರಂ ವಿಧಾನಸಭಾ ಕ್ಷೇತ್ರದ ಶಾಸಕ ಡಾ.ಸಿ.ಎಸ್.ಅಶ್ವತ್ಥನಾರಾಯಣ ವಹಿಸಲಿದ್ದಾರೆ. ಕಾರ್ಯಕ್ರಮವನ್ನು ಚಿಕ್ಕನಾಯಕನಹಳ್ಳಿ ವಿಧಾನಸಭಾ ಕ್ಷೇತ್ರದ ಶಾಸಕ ಸಿ.ಬಿ.ಸುರೇಶ್ ಬಾಬು ಉದ್ಘಾಟಿಸಲಿದ್ದಾರೆ. ಮಾಜಿ ಸಚಿವ ಹಾಗೂ ಬೆಂಗಳೂರು ಮಹಾಲಕ್ಷ್ಮೀ ಲೇಔಟ್‌ನ ಶಾಸಕ ಕೆ.ಗೋಪಾಲಯ್ಯ ಗಣ್ಯರನ್ನು ಸನ್ಮಾನಿಸಲಿದ್ದಾರೆ. ಕವಿ, ನಾಟಕಕಾರ, ಕೇಂದ್ರ ಸಾಹಿತ್ಯ ಅಕಾಡೆಮಿ ಬಾಲ ಸಾಹಿತ್ಯ ಪುರಸ್ಕೃತ ಪ್ರೊ.ಕೃಷ್ಣಮೂರ್ತಿ ಬಿಳಿಕೆರೆ ಅವರು ರಾಷ್ಟ್ರಕವಿ ಕುವೆಂಪು ಅವರ ಕುರಿತು ಉಪನ್ಯಾಸ ನೀಡಲಿದ್ದಾರೆ ಎಂದು ತಿಳಿಸಿದರು.
ಶಾಸಕ ಬಾಲಕೃಷ್ಣಗೆ ಆಧುನಿಕ ಭಗೀರಥ ಪ್ರಶಸ್ತಿ:
ಶಾಸಕರಾಗಿ 12 ವರ್ಷಗಳಲ್ಲಿ ಏತ ನೀರಾವರಿ ಸೇರಿದಂತೆ ವಿವಿಧ ಯೋಜನೆಗಳ ಮೂಲಕ ತಾಲೂಕಿನ ಶೇ.80ರಷ್ಟು ಕೆರೆಗಳನ್ನು ತುಂಬಿಸಿ ರೈತಾಪಿ ವರ್ಗದ ಎಳಿಗೆಗಾಗಿ ಶ್ರಮಿಸುತ್ತಿರುವ ಶ್ರವಣಬೆಳಗೊಳ ಕ್ಷೇತ್ರದ ಶಾಸಕ ಬಾಲಕೃಷ್ಣ ಅವರಿಗೆ ಸಂಘಟನೆ ಹಾಗೂ ತಾಲೂಕಿನ ಜನತೆಯ ಪರವಾಗಿ ಆಧುನಿಕ ಭಗೀರಥ ಪ್ರಶಸ್ತಿ ಪ್ರದಾನ ಮಾಡಲಾಗುವುದು ಎಂದು ಹೇಳಿದರು.
ಕಾರ್ಯಕ್ರಮದಲ್ಲಿ ಕಲಾವಿದರಿಂದ ಕಾಮಿಡಿ ಮ್ಯೂಸಿಕಲ್ ನೈಟ್ ಏರ್ಪಡಿಸಲಾಗಿದೆ ಹಾಗೂ ತಾಲೂಕಿನ ಸರ್ಕಾರಿ ಶಾಲೆಯಲ್ಲಿ 2023- 24ನೇ ಸಾಲಿನ ಎಸ್‌ಎಸ್‌ಎಲ್‌ಸಿ ಪರೀಕ್ಷೆಯಲ್ಲಿ ಕನ್ನಡ ವಿಷಯದಲ್ಲಿ 125ಕ್ಕೆ 125 ಅಂಕ ಪಡೆದ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ಏರ್ಪಡಿಸಲಾಗಿದೆ. ಅಂದು ಸಂಜೆ 5.30ಕ್ಕೆ ಪ್ರಧಾನ ಕಚೇರಿಯಿಂದ ಮಾಧ್ಯಮಿಕ ಶಾಲಾ ಆವರಣದವರೆಗೆ ಸಾವಿರಾರು ಕನ್ನಡ ಅಭಿಮಾನಿಗಳೊಂದಿಗೆ ಬೃಹತ್ ಮೆರವಣಿಗೆ ಹಮ್ಮಿಕೊಳ್ಳಲಾಗಿದೆ. 7 ಗಂಟೆಗೆ ವೇದಿಕೆ ಕಾರ್ಯಕ್ರಮ ಆರಂಭವಾಗಲಿದೆ. ವಿವಿಧ ಇಲಾಖೆಯ ಅಧಿಕಾರಿಗಳು, ವಿವಿಧ ಸಂಘಟನೆಯ ಮುಖಂಡರು ಮುಖ್ಯ ಅತಿಥಿಗಳಾಗಿ ಭಾಗವಹಿಸಲಿದ್ದಾರೆ. ಕನ್ನಡದ ಮನಸುಗಳು ಅತಿ ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ಕಾರ್ಯಕ್ರಮವನ್ನು ಯಶಸ್ವಿಗೊಳಿಸಬೇಕೆಂದು ವಿನಂತಿಸಿದರು.
ಸಂಘಟನೆಯ ಅಧ್ಯಕ್ಷ ಜೆ.ಆರ್.ಶರತ್, ಉಪಾಧ್ಯಕ್ಷ ಬಿ.ಎಸ್.ಶರತ್ ಕುಮಾರ್, ಸಂಚಾಲಕ ಬಿ.ಕೆ.ಅಶೋಕ್, ಸಂಘಟನೆಯ ಹಾಸನ ಜಿಲ್ಲಾಧ್ಯಕ್ಷ ಕಿರಣ್ ರಾಜ್, ಚನ್ನರಾಯಪಟ್ಟಣ ತಾಲೂಕು ಅಧ್ಯಕ್ಷ ಬಿ.ಎಸ್.ಸುನಿಲ್ ಕುಮಾರ್, ಕಾರ್ಯಧ್ಯಕ್ಷ ಪ್ರಭಾಕರ್, ಹೊಳೆನರಸೀಪುರ ತಾಲೂಕು ಅಧ್ಯಕ್ಷ ಅಭಿಲಾಶ್ ಸೇರಿ ಇತರರು ಇದ್ದರು.