

ಶಿವಮೊಗ್ಗ: ಬುದ್ದಿ ಮತ್ತು ಮನಸ್ಸಿನ ನಿಯಂತ್ರಣಕ್ಕೆ ಯೋಗ ಸನ್ಮಾರ್ಗವಾಗಿದೆ. ಮನೆ ಮನೆಗಳಿಗೂ ಯೋಗವನ್ನು ವಿಸ್ತರಿಸುವ ಕೆಲಸ ಆಗಬೇಕಿದೆ ಎಂದು ಯೋಗಾಚಾರ್ಯ ಡಾ. ಸಿ.ವಿ.ರುದ್ರಾರಾದ್ಯ ಹೇಳಿದರು.
ಕುವೆಂಪುನಗರದಲ್ಲಿ ಭಾನುವಾರ ಬದುಕು ಕ್ಷೇಮಾಭಿವೃದ್ಧಿ ಸಂಘ ಹಾಗೂ ಶಿವಗಂಗಾ ಯೋಗ ಕೇಂದ್ರದ ಆಶ್ರಯದಲ್ಲಿ 21 ದಿನಗಳ ಯೋಗ, ಪ್ರಾಣಾಯಾಮ, ಧ್ಯಾನ ಶಿಬಿರದ ಸಮಾರೋಪ ಸಮಾರಂಭದಲ್ಲಿ ಮಾತನಾಡಿದ ಅವರು, ಯೋಗವು ನಮ್ಮ ಬದುಕಿನ ಒಂದು ಭಾಗವಾಗಬೇಕಿದೆ ಎಂದರು.
ಯೋಗವು ಶರೀರದ ಬಗ್ಗೆ ಮಾತ್ರವಲ್ಲದೆ ಸೂಕ್ಷ ಶರೀರ ಮತ್ತು ಸೂರ್ಯ ಶರೀರಕ್ಕೆ ಅತ್ಯಗತ್ಯವಾಗಿದೆ. ಮನಸ್ಸು ಮತ್ತು ದೇಹ ಸದೃಢವಾಗಲು ಯೋಗ ರಹದಾರಿಯಾಗಿದ್ದು ಪ್ರತಿಯೊಬ್ಬರೂ ಆರೋಗ್ಯವಾಗಿರಲು ಯೋಗ ಮಾಡಬೇಕು ಎಂದು ಸಲಹೆ ನೀಡಿದರು.
ಮಹಾನಗರ ಪಾಲಿಕೆ ಸದಸ್ಯ ಧೀರರಾಜ್ ಹೊನ್ನವಿಲೆ ಮಾತನಾಡಿ, ಯೋಗದಿಂದ ಆರೋಗ್ಯಭಾಗ್ಯ ಪ್ರಾಪ್ತಿಯಾಗಲಿದೆ. ಮೌಲ್ಯಗಳನ್ನು ಸಮಾಜಕ್ಕೆ ಕೊಡಬೇಕೋ ವಿನಃ ಬೇಡುವಂತೆ ಆಗಬಾರದು. ಅದು ಸಾಧ್ಯವಾಗಬೇಕಾದರೆ ಆರೋಗ್ಯ ಸದೃಢವಾಗಿರಬೇಕು. ಆರೋಗ್ಯ ಸುಧಾರಣೆಗೆ ಯೋಗ ಅಗತ್ಯವಾಗಿದೆ ಎಂದರು.
ಡಿವೈಎಸ್ಪಿ ಬಿ.ಬಾಲರಾಜ್ ಮಾತನಾಡಿ, ವಿಶ್ವವೇ ಭಾರತದತ್ತ ತಿರುಗಿ ನೋಡುವಂತೆ ಮಾಡಿದ್ದು ಯೋಗ. ಮನುಷ್ಯನ ದೇಹವನ್ನು ಸಮತೋಲನವಾಗಿ ಯೋಗ ನಿಯಂಣತ್ರಿಸುತ್ತದೆ. ಮನಸ್ಸು ಮತ್ತು ದೇಹವನ್ನು ನಿಯಂತ್ರಿಸುವಲ್ಲಿ ಮುಖ್ಯ ಪಾತ್ರವಹಿಸುತ್ತದೆ ಎಂದು ಹೇಳಿದರು.
ಬದುಕು ಕ್ಷೇಮಾಭಿವೃದ್ಧಿ ಸಂಘದ ಅಧ್ಯಕ್ಷ ಕೆ.ಎನ್.ಪ್ರಸನ್ನ ಅಧ್ಯಕ್ಷತೆ ವಹಿಸಿದ್ದರು. ಯೋಗಗುರು ರುದ್ರಾರಾಧ್ಯ ಅವರನ್ನು ಸನ್ಮಾನಿಸಲಾಯಿತು. ಶಿಬಿರಾರ್ಥಿಗಳಿಗೆ ಪ್ರಮಾಣಪತ್ರ ವಿತರಿಸಲಾಯಿತು. ಡಿವೈಎಸ್ಪಿ ಸುರೇಶ್, ಸಂಘದ ಪದಾಧಿಕಾರಿಗಳಾದ ಡಾ.ರಾಜ್ ಪ್ರಕಾಶ್, ವೇದಾನಂದ್, ರಾಘವೇಂದ್ರ, ಪ್ರಕಾಶಪ್ಪ, ಉಮೇಶ್, ನಿಕಿಲ್ ಚವ್ಹಾಣ್, ಕೆ.ಬಿ.ಶಂತನು, ಮೀರಾ, ಶ್ವೇತಾ, ವಿಶಾಲಾ ಮೂರ್ತಿ ಭಾಗವಹಿಸಿದ್ದರು.