

ಕೋಲಾರ: ಕುವೆಂಪು ಅವರು ಡಾಂಭಿಕತೆ, ಗೊಡ್ಡು ಸಂಪ್ರದಾಯಗಳಿಗೆ ವಿರೋಧವಾಗಿದ್ದು, ತಾವು ನಂಬಿದ ತತ್ವಗಳಿಗೆ ಬದ್ಧರಾಗಿರುವ ಮೂಲಕ ನಿಷ್ಠೂರ ನಿಲುವು ಹೊಂದಿದ್ದರು ಎಂದು ಕುಪ್ಪಳ್ಳಿ ಕುವೆಂಪು ಪ್ರತಿಷ್ಠಾನದ ಅಧ್ಯಕ್ಷ ಹಾಗೂ ಮಾಜಿ ಸಭಾಪತಿ ಬಿ.ಎಲ್.ಶಂಕರ್ ಹೇಳಿದರು.
ನಗರ ಹೊರವಲಯದ ಬೆಂಗಳೂರು ಉತ್ತರ ವಿಶ್ವವಿದ್ಯಾಲಯದ ಮಂಗಸಂದ್ರ ಸ್ನಾತಕೋತ್ತರ ಕೇಂದ್ರ ಹಾಗೂ ಕುವೆಂಪು ಪ್ರತಿಷ್ಠಾನ, ಕುಪ್ಪಳ್ಳಿ ಇವರ ಜಂಟಿ ಸಹಯೋಗದಲ್ಲಿ ಬುಧವಾರ ಹಮ್ಮಿಕೊಂಡಿದ್ದ "ಕುವೆಂಪು ಹೊಸನೋಟ' ರಾಷ್ಟ್ರೀಯ ವಿಚಾರ ಸಂಕಿರಣ ಉದ್ಘಾಟಿಸಿ ಮಾತನಾಡಿದರು.
ಕುವೆಂಪು ಅವರ ತತ್ವಗಳು ಬಸವಣ್ಣ, ಅಂಬೇಡ್ಕರ್ ತತ್ವಗಳಂತೆ ಇದ್ದು, ಮಾನವೀಯತೆಗೆ ಒತ್ತು ಕೊಡುವಂತಿದ್ದು, ಮನುಷ್ಯನನ್ನು ಎಲ್ಲ ಸಂಕೋಲೆಗಳಿಂದ ಕಳಚಲು ಕರೆ ನೀಡುವಂತಿವೆ ಎಂದು ತಿಳಿಸಿದರು.
ಇಂದಿನ ವಿದ್ಯಾರ್ಥಿಗಳಿಗೆ ಕುವೆಂಪು ಅವರ ಮಾನವೀಯ ತತ್ವಗಳು, ವಿಶ್ವಮಾನವ ಸಂದೇಶವನ್ನು ತಲುಪಿಸುವ ಕೆಲಸವಾಗಬೇಕು. ಸಮಾಜದಲ್ಲಿ ಸಮಾನತೆ, ಭಾವೈಕ್ಯ, ಸೌಹಾರ್ದತೆ ನೆಲೆಸಲು ಕುವೆಂಪು ಅವರ ಸಾಹಿತ್ಯ ಓದುವ ಅಗತ್ಯವಿದೆ ಎಂದರು. ಯಾವುದೇ ವ್ಯಕ್ತಿ ಜಾತಿಯಿಂದ ಮುಖ್ಯನಾಗಬಾರದು. ನೈತಿಕ ವ್ಯಕ್ತಿತ್ವ, ಮಾನವೀಯ ಗುಣದಿಂದ ಸಮಾಜದಲ್ಲಿ ಮುಖ್ಯನಾಗಬೇಕು ಎಂದು ಕುವೆಂಪು ನಂಬಿದ್ದರು. ಒಂದು ಮಗು ಹುಟ್ಟಿದಾಗ ಅವನು ವಿಶ್ವಮಾನವನಾಗಿರುತ್ತಾನೆ. ಆದರೆ ಆ ಮಗುವನ್ನು ಜಾತಿ, ಮತದ ಕಟ್ಟುಪಾಡುಗಳಿಂದ ಬಂಧಿಸಲಾಗುತ್ತದೆ ಎಂದು ಅಭಿಪ್ರಾಯಪಟ್ಟಿದ್ದರು ಎಂದರು. ವಿವಿಧತೆಯಲ್ಲಿ ಏಕತೆಯನ್ನು ಕಾಣುವ ಮೂಲಕ ಎಲ್ಲವನ್ನೂ ಒಗ್ಗೂಡಿಸಿ ನೋಡುವುದು ಕುವೆಂಪು ಅವರ ತತ್ವವಾಗಿತ್ತು. ಅವರು ಸರಳ ವಿವಾಹ ಪದ್ಧತಿಯನ್ನು ಪ್ರೋತ್ಸಾಹಿಸಿದವರು. ಅವರ ಸಾಹಿತ್ಯ, ಕಲೆಗಳಲ್ಲಿಯೂ ಈ ತತ್ವಗಳನ್ನು ಕಾಣಬಹುದಾಗಿದೆ ಎಂದು ತಿಳಿಸಿದರು.
ಕನ್ನಡದ ಸೇವೆ ಸ್ಮರಣೀಯ
ಕುಪ್ಪಳ್ಳಿ ಕುವೆಂಪು ಪ್ರತಿಷ್ಠಾನ ಬೆಂಗಳೂರು ಉತ್ತರ ವಿವಿ ಆಶ್ರಯದಲ್ಲಿ "ಕುವೆಂಪು ಹೊಸನೋಟ' ವಿಚಾರ ಸಂಕಿರಣ ನಡೆಸಲು ಒಪ್ಪಿಕೊಂಡಿದ್ದು, ಸ್ತುತ್ಯಾರ್ಹ. ಕುವೆಂಪು ಅವರು ಸಾಹಿತ್ಯ ಕ್ಷೇತ್ರದಲ್ಲಿ ಮೇಲ್ಪಂಕ್ತಿಯ ಕವಿಯಾಗಿದ್ದಾರೆ. ಅವರು ಕನ್ನಡಕ್ಕೆ ಸಲ್ಲಿಸಿದ ಸೇವೆ ಸ್ಮರಣೀಯ ಎಂದು ವಿವಿಯ ಕುಲಪತಿ ಪ್ರೊ.ನಿರಂಜನ ವಾನಳ್ಳಿ ಹೇಳಿದರು. ಕುವೆಂಪು ಅವರ ವಿಶ್ವಮಾನವ ಸಂದೇಶ ಜಾತಿ, ಧರ್ಮದ ಎಲ್ಲೆ ಮೀರಿ ಮಾನವೀಯತೆಯನ್ನು ಎತ್ತಿ ಹಿಡಿಯುತ್ತದೆ ಅವರ ತತ್ವಗಳಲ್ಲಿ ಪ್ರಮುಖವಾದವುಗಳೆಂದರೆ ಜಾತಿ ಬೇಡ, ಮತ ಬೇಡ, ಎಲ್ಲ ದೇವರಿಗೂ ಬೇಡ ಮನುಜಮತ, ವಿಶ್ವಪಥದ ಮಾತುಗಳು ಸರ್ವಕಾಲಕ್ಕೂ ಪ್ರಸ್ತುತ ಎಂದು ತಿಳಿಸಿದರು.
ಗೋಷ್ಠಿ-2
ಕುವೆಂಪು ನಾಟಕಗಳ ಕುರಿತು ಕರ್ನಾಟಕ ಲೇಖಕಿಯರ ಸಂಘದ ಅಧ್ಯಕ್ಷೆ ಡಾ.ಎಚ್.ಎಲ್ ಪುಷ್ಪಾ ಮಾತನಾಡಿದರು. ಕುವೆಂಪು ಕಾವ್ಯಗಳ ಕುರಿತು ಬೆಂಗಳೂರಿನ ನ್ಯಾಷನಲ್ ಕಾಲೇಜಿನ ಸಹ ಪ್ರಾಧ್ಯಾಪಕ ಡಾ.ರವಿಕುಮಾರ್ ಬಾಗಿ ಮಾತನಾಡಿದ್ದು, ಗೋಷ್ಠಿಯ ಅಧ್ಯಕ್ಷತೆಯನ್ನು ಕನ್ನಡ ಪುಸ್ತಕ ಪ್ರಾಧಿಕಾರದ ಮಾಜಿ ಅಧ್ಯಕ್ಷ ಸಿದ್ದರಾಮಯ್ಯ ವಹಿಸಿದ್ದರು.
ಗೋಷ್ಠಿ-1
ವಿಚಾರ ಸಾಹಿತ್ಯದ ಕುರಿತು ಸಾಹಿತಿ ಹಾಗೂ ಹಿರಿಯ ಸಾಫ್ಟ್ ವೇರ್ ಇಂಜಿಯರ್ ಎಸ್.ಆರ್.ವಿಜಯಶಂಕರ್ ಹಾಗೂ ಶ್ರೀರಾಮಾಯಣದರ್ಶನಂ ಮಹಾಕಾವ್ಯದ ಕುರಿತು ಬೆಂಗಳೂರಿನ ಮಹಾರಾಣಿ ಕ್ಲಸ್ಟರ್ ವಿಶ್ವವಿದ್ಯಾಲಯದ ಪ್ರಾಧ್ಯಾಪಕ ಡಾ.ಕೆ.ವೈ.ನಾರಾಯಣಸ್ವಾಮಿ ಮಾತನಾಡಿದರು. ಬೆಂಗಳೂರು ವಿವಿ ಕನ್ನಡ ಅಧ್ಯಯನ ಕೇಂದ್ರದ ಪ್ರಾಧ್ಯಾಪಕ ಪ್ರೊ.ಡಿ.ಡೊಮಿನಿಕ್ ಅಧ್ಯಕ್ಷತೆ ವಹಿಸಿದ್ದು, ಉತ್ತರ ವಿವಿ ಕುಲಪತಿ ಪ್ರೊ.ನಿರಂಜನ ವಾನಳ್ಳಿ ಸಮಾರೋಪ ಭಾಷಣ ಮಾಡಿದರು.