

ಹಾಸನ: ರಾಷ್ಟ್ರಕವಿ ಕುವೆಂಪು ಅವರು ಕೇವಲ ಸಾಹಿತಿ ಮಾತ್ರವಲ್ಲದೇ ಶ್ರೇಷ್ಠ ಋಷಿಯಾಗಿದ್ದರು ಎಂದು ಶ್ರೀ ಆದಿಚುಂಚನಗಿರಿ ಮಹಾಸಂಸ್ಥಾನ ಮಠದ ಪೀಠಾಧ್ಯಕ್ಷ ಡಾ. ಶ್ರೀ ನಿರ್ಮಲಾನಂದ ನಾಥ ಸ್ವಾಮೀಜಿ ನುಡಿದರು.
ನಗರದ ಆದಿಚುಂಚನಗಿರಿ ಸಮುದಾಯ ಭವನದಲ್ಲಿ ಬುಧವಾರ ಸಂಜೆ ಹಮ್ಮಿಕೊಂಡಿದ್ದ ರಾಷ್ಟ್ರಕವಿ ಕುವೆಂಪು 120ನೇ ಜಯಂತ್ಯುತ್ಸವ ಹಾಗೂ ರಾಜ್ಯ ಮಟ್ಟದ ಬಿಜಿಎಸ್ ಕುವೆಂಪು ಪ್ರಶಸ್ತಿ ಪ್ರದಾನ ಸಮಾರಂಭದ ದಿವ್ಯ ಸಾನಿಧ್ಯ ವಹಿಸಿ ಆಶೀರ್ವಚನ ನೀಡಿದ ಅವರು, ಕುವೆಂಪು ಶುದ್ಧ ಆಧ್ಯಾತಿಕ ವ್ಯಕ್ತಿಯಾಗಿದ್ದರು ಎಂದು ಅವರ ಸಾಹಿತ್ಯ ಕೃತಿಗಳನ್ನು ಓದಿದ್ದ ಶ್ರೀ ರಾಮಕೃಷ್ಣಾಶ್ರಮದ ಸಿದ್ದೇಶ್ವರಾನಂದ ಸ್ವಾಮೀಜಿ ಅವರು ಬರೆದ ‘ವಿದೇಶದಿಂದ ಭಾರತದ ಆಶ್ರಮದವರಿಗೆ’ ಪತ್ರದಲ್ಲಿ ಉಲ್ಲೇಖಿಸಿದ್ದಾರೆ. ಕುವೆಂಪು ಮನೆಯಲ್ಲಿ ಧ್ಯಾನಾಸಕ್ತರಾಗಿದ್ದಾಗ ನನಗೆ ಗೋಚರಿಸಿದ್ದು ಪುಟ್ಟಪ್ಪ ಶ್ರೇಷ್ಠ ಋಷಿ ಎಂದು ಬರೆದಿದ್ದಾರೆ. ಅಂತಹ ಕವಿಯನ್ನು ನಾವು ಸರಿಯಾಗಿ ಅರ್ಥ ಮಾಡಿಕೊಂಡರೆ ಜೀವನ ಸಾರ್ಥಕವಾಗುತ್ತದೆ. ಧ್ಯಾನಕ್ಕೆ ಅಷ್ಟ ಮಾರ್ಗ ಬೇಕಾಗಿಲ್ಲ. ಇಂತಹ ವ್ಯಕ್ತಿಯನ್ನು ನೆನಪು ಮಾಡಿಕೊಂಡರೆ ಸಾಕು. ಸದಾ ಕೆಸರು ತುಂಬಿರುವ ಬದುಕಿನಲ್ಲಿ ಆಗಾಗ ಇಂತಹ ವ್ಯಕ್ತಿಗಳ ಸ್ಮರಣೆ ಮಾಡಿದರೆ ಮನಸ್ಸು ಪರಿಪಕ್ವವಾಗುತ್ತದೆ ಎಂದರು.
ಕುವೆಂಪು ಚಿಂತನೆಗಳನ್ನು ಜಗತ್ತಿನಾದ್ಯಂತ ಪಸರಿಸುವ ಕೆಲಸವನ್ನು ಇವತ್ತು ಪ್ರಶಸ್ತಿ ಪಡೆದವರು ಮಾಡುತ್ತಿದ್ದಾರೆ. ಇವರ ಮುಖಾಂತರ ಕುವೆಂಪು ಅವರ ಎತ್ತರ ಅಳೆಯಲು ಸಾಧ್ಯವಾಗುತ್ತದೆ. ಕುವೆಂಪು ಅವರನ್ನು ಸ್ಮರಿಸುವುದು ಶ್ರೇಷ್ಠ ಕ್ಷಣವೆಂದು ಭಾವಿಸಬೇಕು. ಸಾಮಾನ್ಯವಾಗಿ ಸಾಹಿತಿಗಳು ಆಧ್ಯಾತ್ಮಿಕ ಭಾಷೆಯಲ್ಲಿ ಬರೆಯುವುದಿಲ್ಲ. ಕುವೆಂಪು ಒಬ್ಬರೇ ಆಧ್ಯಾತ್ಮ ಮತ್ತು ಆಧುನಿಕ ತಂತ್ರಜ್ಞಾನ ಭಾಷೆಯನ್ನು ತಮ್ಮ ಬರವಣಿಗೆಯಲ್ಲಿ ಅಳವಡಿಸಿಕೊಂಡಿದ್ದರು. ಮಲ್ಲಿಗೆ ಹೂವು ಮನೆಯಲ್ಲಿ ಯಾವ ರೀತಿ ಸುಗಂಧ ಬೀರುತ್ತದೆಯೋ ಕುವೆಂಪು ಸಾಹಿತ್ಯ ಸಹ ಅದೇ ಅನುಭೂತಿ ನೀಡುತ್ತದೆ. ಪುಟ್ಟಪ್ಪ ಅವರನ್ನು ಸ್ಮರಿಸಿದರೆ ಮನಸ್ಸು ಧ್ಯಾನಸ್ಥ ಸ್ಥಿತಿ ತಲುಪುತ್ತದೆ. ಕನ್ನಡ ಸಾಹಿತ್ಯದಲ್ಲಿ ಅನೇಕರು ಸಾಮಾಜಿಕ ಪಿಡುಗಿನ ಕುರಿತು ಬರೆದಿದ್ದಾರೆ. ಅದರ ಜತೆಗೆ ಆಧ್ಯಾತಿಕ ಔನ್ನತ್ಯ ಏರಿದವರು ವಿರಳ ಎಂದು ಹೇಳಿದರು.
20ನೇ ಶತಮಾನದ ಸಾಹಿತ್ಯ ಕ್ಷೇತ್ರವನ್ನು ಕುವೆಂಪು ಒಬ್ಬರೇ ಆವರಿಸಿಕೊಂಡಿದ್ದರು. ಅವರನ್ನು ತೆಗಳಿದರೂ, ಹೊಗಳಿದರೂ ಏನೇ ಮಾಡಿದರೂ ಒಟ್ಟಿನಲ್ಲಿ ಸಾಹಿತ್ಯ ಮಾತ್ರ ಕುವೆಂಪು ಸುತ್ತಲೇ ಗಿರಕಿ ಹೊಡೆಯುತ್ತಿತ್ತು. ಹಾಗಿದ್ದ ಮೇಲೆ ಕುವೆಂಪು ಶಕ್ತಿ ಎಷ್ಟಿತ್ತು ಎಂಬುದನ್ನು ನಾವೆಲ್ಲ ಆಲೋಚಿಸಬೇಕು ಎಂದು ಹೇಳಿದರು.
ಬಿಜಿಎಸ್ ಕುವೆಂಪು ರಾಜ್ಯ ಪ್ರಶಸ್ತಿ ಸ್ವೀಕರಿಸಿದ ಸಂಶೋಧಕ ಡಾ. ಹಂ.ಪ.ನಾಗರಾಜಯ್ಯ ಮಾತನಾಡಿ, ಗೋಕಾಕ್ ವರದಿ ಅನುಷ್ಠಾನವಾಗಲು ಕುವೆಂಪು ಅವರ ಪಾತ್ರ ದೊಡ್ಡದಾದರೂ ಮಾಧ್ಯಮಗಳಲ್ಲಿ ಪ್ರಾಧಾನ್ಯತೆ ಸಿಗಲಿಲ್ಲ. ಶಿಕ್ಷಣದಲ್ಲಿ ಕನ್ನಡ ಕಡ್ಡಾಯಗೊಳಿಸಬೇಕೆಂಬ ಬೇಡಿಕೆಯಿಟ್ಟುಕೊಂಡು ನಡೆದ ಹೋರಾಟಕ್ಕೆ ಸಿನಿಮಾ ಕ್ಷೇತ್ರದಿಂದ ಡಾ.ರಾಜಕುಮಾರ್, ಸಾಹಿತ್ಯ ಕ್ಷೇತ್ರದಿಂದ ಕುವೆಂಪು ಧುಮುಕಿದ ಪರಿಣಾಮ ಸರ್ಕಾರ ಕನ್ನಡವನ್ನು ಕಡ್ಡಾಯಗೊಳಿಸಿತು ಎಂದು ಹೇಳಿದರು.
ಇದೇ ವೇಳೆ ಸಂಶೋಧನೆ ಕ್ಷೇತ್ರದಿಂದ ಡಾ. ಹಂ.ಪ. ನಾಗರಾಜಯ್ಯ, ಕನ್ನಡ ನುಡಿ ಸೇವೆ ಕ್ಷೇತ್ರದಿಂದ ಪ್ರೊ. ಕೃಷ್ಣೇಗೌಡ, ಸಾಹಿತಿ ಕ್ಷೇತ್ರದಿಂದ ಡಾ.ಟಿ.ಸಿ.ಪೂರ್ಣಿಮಾ ಹಾಗೂ ಮಾಧ್ಯಮ ಕ್ಷೇತ್ರದಿಂದ ಸುದರ್ಶನ್ ಚನ್ನಂಗಿಹಳ್ಳಿ ಅವರಿಗೆ ರಾಜ್ಯ ಮಟ್ಟದ ಬಿಜಿಎಸ್ ಕುವೆಂಪು ಪ್ರಶಸ್ತಿ ಪ್ರದಾನ ಮಾಡಿ ಗೌರವಿಸಲಾಯಿತು.
ವೇದಿಕೆ ಕಾರ್ಯಕ್ರಮಕ್ಕೂ ಮೊದಲು ಅನಿಕೇತನ ಕಲಾ ತಂಡದಿಂದ ಕಿರಗೂರಿನ ಗಯ್ಯಳಿಗಳು ನಾಟಕ ಪ್ರದರ್ಶನ ಮೆಚ್ಚುಗೆ ಪಡೆಯಿತು.
ಆದಿಚುಂಚನಗಿರಿ ಹಾಸನ ಶಾಖಾ ಮಠದ ಶ್ರೀ ಶಂಭುನಾಥ ಸ್ವಾಮೀಜಿ, ಕಬ್ಬಳ್ಳಿ ಮಠದ ಶ್ರೀ ಶಿವಪುತ್ರನಾಥ ಸ್ವಾಮೀಜಿ, ಒಕ್ಕಲಿಗರ ಸಂಘದ ಜಿಲ್ಲಾಧ್ಯಕ್ಷ ಜಿ.ಎಲ್.ಮುದ್ದೇಗೌಡ, ಶಾಸಕರಾದ ಸಿ.ಎನ್.ಬಾಲಕೃಷ್ಣ, ಎಚ್.ಪಿ.ಸ್ವರೂಪ್, ಎಚ್.ಬಿ.ಮದನಗೌಡ ಇದ್ದರು. ಉಪನ್ಯಾಸಕ ಲಕ್ಷ್ಮೀನಾರಾಯಣ ನಿರೂಪಿಸಿದರು.