

ಮಂಡ್ಯ: ಸ್ವಾರ್ಥ, ವ್ಯಕ್ತಿ ಕೇಂದ್ರಿತ ಸಮಾಜದಲ್ಲಿ ಪರಸ್ಪರ ದ್ವೇಷವನ್ನು ಹುಟ್ಟು ಹಾಕುತ್ತಿರುವ ಇಂದಿನ ಪರಿಸ್ಥಿತಿಯಲ್ಲಿ ಕುವೆಂಪು ಅವರ ಮೌಲ್ಯ ಎಲ್ಲರ ಬದುಕಿನ ಹಾದಿಯಾಗಲಿ ಎಂದು ಚಿಂತಕ ನರಹಳ್ಳಿ ಬಾಲಸುಬ್ರಮಣ್ಯ ಸಲಹೆ ನೀಡಿದರು.
ನಗರದ ಕರ್ನಾಟಕ ಸಂಘದ ಕೆ.ವಿ.ಶಂಕರಗೌಡ ಶತಮಾನೋತ್ಸವ ಭವನದಲ್ಲಿ ಪ್ರಗತಿಪರ ಸಂಘಟನೆಗಳ ಸಹಯೋಗದಲ್ಲಿ ಆಯೋಜಿಸಿದ್ದ ಕುವೆಂಪು ವೈಚಾರಿಕತೆಯ ಅಭಿಯಾನ ಮತ್ತು ಕೈಪಿಡಿ ಬಿಡುಗಡೆ ಸಮಾರಂಭ ಉದ್ಘಾಟಿಸಿ ಮಾತನಾಡಿದ ಅವರು, ಪ್ರಸ್ತುತ ಸಹಬಾಳ್ವೆಯ ವಿವೇಕ ಬೇಕಿದೆ. ಎಲ್ಲರೂ ಒಟ್ಟಾಗಿ ಬದುಕಲು ಸಾಧ್ಯ ಎಂಬುವ ಮೌಲ್ಯವನ್ನು ಪ್ರತಿಪಾದಿಸಬೇಕಿದೆ. ಅಂತೆಯೇ ಪ್ರಬುದ್ಧತೆಯನ್ನ ಧಿಕ್ಕರಿಸುವ ಪ್ರತಿಭಟಿಸುವ ನಿರಾಕರಿಸುವ ಧೈರ್ಯ ಕೂಡ ಬೇಕಾಗಿದೆ ಎಂದರು.
20ನೇ ಶತಮಾನದಲ್ಲಿ ಭಿನ್ನವಾದ ಅನೇಕ ಪ್ರತಿಭೆಗಳನ್ನು ಕಂಡರು ಕೂಡ ಈ ಕಾಲಘಟ್ಟದಲ್ಲಿ ಕುವೆಂಪು ಅವರು ಸಾಂಸ್ಕೃತಿಕವಾಗಿ ಹೆಚ್ಚು ಮುಖ್ಯರು ಎಂಬುದನ್ನು ಕನ್ನಡ ಸಂಸ್ಕೃತಿ ಅಧ್ಯಯನ ಮಾಡಿದಾಗ ತಿಳಿಯುತ್ತದೆ. ಕನ್ನಡ ಪರಂಪರೆ ನೋಡಿದರೆ ಬಹುಶಃ 20ನೇ ಶತಮಾನ ಅತ್ಯಂತ ವಿಶಿಷ್ಟವಾಗಿದೆ. ಈ ಶತಮಾನದಲ್ಲಿ ಬಂದಷ್ಟು ವೈವಿಧ್ಯಮಯ ಪ್ರತಿಭೆಗಳು ಬಹುಶಃ ಯಾವ ಶತಮಾನದಲ್ಲಿಯೂ ಕಾಣಿಸಲಿಲ್ಲ. ಒಂದು ಶತಮಾನದಲ್ಲಿ ನಾಲ್ಕೈದು ಜನ ಪ್ರತಿಭಾವಂತರನ್ನು ನಾವು ನೋಡಬಹುದು?. ಆದರೆ, ಇಷ್ಟರ ಮಟ್ಟಿಗೆ ಹೆಚ್ಚಿನ ಸಂಖ್ಯೆಯ ವೈವಿಧ್ಯಮಯವಾದ ಪ್ರತಿಭೆಗಳನ್ನು 20ನೇ ಶತಮಾನದಲ್ಲಿ ಕಾಣುತ್ತೇವೆ ಎಂದು ಹೇಳಿದರು.
ಕುವೆಂಪು ಅವರ ವೈಶಿಷ್ಟ ಏನೆಂದರೆ ಸಾಂಸ್ಕೃತಿಕವಾಗಿ ಹೆಚ್ಚು ಮುಖ್ಯರು ಅಥವಾ ಅನನ್ಯರು ಎಂಬುದನ್ನು ಕನ್ನಡ ಸಂಸ್ಕೃತಿ ಅಧ್ಯಯನ ಮಾಡಿದವರಿಗೆ ಅನ್ನಿಸದೇ ಇರಲಾರದು. ಇದಕ್ಕೆ ಕಾರಣವೂ ಇದೆ. ಅವರು ಬರೆಯಲು ಶುರುಮಾಡಿದಾಗ ರಾಜಪ್ರಭುತ್ವ ಅಧಿಕಾರದಲ್ಲಿತ್ತು. ಹಾಗೆಯೇ ಸಾಂಸ್ಕೃತಿಕ ಪ್ರಭುತ್ವ ಮೇಲ್ವರ್ಗದ ಹಿಡಿತದಲ್ಲಿತ್ತು. ಇಂತಹ ಹೊತ್ತಿನಲ್ಲಿ ತಮ್ಮ ಬರವಣಿಗೆಯನ್ನು ಪ್ರಾರಂಭಿಸಿ ಅಪಾರವಾಗಿ ಬರೆದು ಸಾಮಾಜಿಕ ವ್ಯವಸ್ಥೆಯ ಜನಾಂಗಕ್ಕೆ ಆತ್ಮವಿಶ್ವಾಸ ಹಾಗೂ ಆತ್ಮಗೌರವ ದೊರಕಿಸಿಕೊಟ್ಟ 20ನೇ ಶತಮಾನದ ಬೇರೆಯಾವ ಲೇಖಕರಿಗೂ ಸಾಧ್ಯವಾಗಲಿಲ್ಲ ಎಂದು ವ್ಯಾಖ್ಯಾನಿಸಿದರು.
ಕವೆಂಪು ಅವರು ಶೂದ್ರನನ್ನ ತಪಸ್ವಿ ಹಾಗೂ ರೈತನನ್ನ ಯೋಗಿ ಎಂದು, ಜನಸಾಮಾನ್ಯನಿಗೆ ಶ್ರೀ ಎಂಬ ಗೌರವವನ್ನ ನೀಡುವುದರ ಮೂಲಕ ತಮ್ಮ ಬರಹದಲ್ಲಿ ಸಮಾನತೆಯನ್ನು ಪ್ರತಿಪಾದಿಸಿದರು. ಮೇಲ್ವರ್ಗದ ಅಸಾಮಾನತೆಯ ಧೋರಣೆಯ ವಿರುದ್ಧ ಕ್ರಾಂತಿಕಾರಕ ಬರವಣಿಗೆಯ ಮೂಲಕ ಉತ್ತರವನ್ನು ನೀಡಿದರು. ಲೋಹಿಯಾ ಅವರು ರಾಜಕಾರಣಕ್ಕೆ ಬರುವಂತೆ ಆಹ್ವಾನಿಸಿದಾಗ ಮತ್ತು ಬಿಎಂಶ್ರೀ ಕನ್ನಡ ಜಾಗೃತಿಯ ಹೋರಾಟಕ್ಕೆ ಕರೆದಾಗಲೂ ಅತ್ಯಂತ ನಯವಾಗಿ ತಿರಸ್ಕರಿಸಿದ ಕುವೆಂಪು ಅವರು ಬರಹದ ಮೂಲಕವೇ ಸಾಮಾಜಿಕ ಬದಲಾವಣೆಯ ಮತ್ತು ಕನ್ನಡ ಅಭಿವೃದ್ಧಿಯನ್ನು ಮಾಡುವುದಾಗಿ ಹೇಳಿ ತಮ್ಮ ಸಾಹಿತ್ಯವನ್ನು ಮುಂದುವರಿಸಿದ್ದು ವಿಶೇಷವಾಗಿತ್ತು ಎಂದು ವಿವರಿಸಿದರು.
ಕುವೆಂಪು ಅವರಿಗೂ ಮಂಡ್ಯಕ್ಕೂ ಬಹಳ ವಿಶಿಷ್ಟ ಸಂಬಂಧವಿದೆ. ಕುವೆಂಪು ಅವರು ಶಿವಮೊಗ್ಗದವರಾಗಿದ್ದರೂ ಸಹ ಚಿತ್ರಗಳ ಹಾಗೂ ಸಾಹಿತ್ಯಗಳು ಮಲೆನಾಡಾಗಿದ್ದರು. ಜೀವ ಮತ್ತು ಆತ್ಮ ನೇಗಿಲಯೋಗಿ ಯಾವುದಕ್ಕೆ ಕರೆಯುತ್ತೇವೆಯೋ ಈ ಆತ್ಮ ಯಾವುದೆಂದರೆ ಬಹುಶಃ ಜಿಲ್ಲೆಯ ರೈತ ಎಂದುಕೊಂಡಿದ್ದೇನೆ. ಕುವೆಂಪು ಅವರಿಗೆ ಎರಡು ಕಾರಣಕ್ಕಾಗಿ ಮಂಡ್ಯ ಇಷ್ಟ ಆಗುತ್ತಿತ್ತಂತೆ. ಒಂದು ರೈತರಿಗೆ ದನಿ ಕೊಟ್ಟ ಜಿಲ್ಲೆ, ಮತ್ತೊಂದು ಕುವೆಂಪು ಪ್ರತಿಪಾದಿಸಿದ ಮಂತ್ರ ಮಾಂಗಲ್ಯ, ಈ ಮಂತ್ರಮಾಂಗಲ್ಯವನ್ನು ಮಂಡ್ಯ ಜಿಲ್ಲೆಯಲ್ಲಿ ಹೆಚ್ಚು ಮಾಡಿದಂತಹ ಜಿಲ್ಲೆ ಎನ್ನುವದನ್ನು ಆಗಾಗ್ಗೆ ಕುವೆಂಪು ಅವರು ಹೇಳುತ್ತಿದ್ದರಂತೆ ಎಂದು ಸ್ಮರಿಸಿದರು.
ಕೈಪಿಡಿ ಬಿಡುಗಡೆ ಮಾಡಿ ಮಾತನಾಡಿದ ಛಾಯಾಗ್ರಾಹಕ ಸೇನಾನಿ, ದೇವಸ್ಥಾನಕ್ಕೆ ಹಣ ಸಂಗ್ರಹ ಮಾಡುವ ಹಾಗೆ ಶಿಕ್ಷಣಕ್ಕೆ ಒತ್ತು ನೀಡುವುದಿಲ್ಲ ಇದನ್ನು ನೋಡಿದರೆ ಶೂದ್ರರೆಲ್ಲ ಒಂದು ರೀತಿಯ ಅಕ್ಷರ ದ್ವೇಷಿಯಾಗಿದ್ದಾರಾ ಎನ್ನಿಸುತ್ತದೆ. ಕುವೆಂಪು ಅವರು ಹೇಳಿದ್ದ ಚರ್ಚ್, ಮಸೀದಿ, ಮಂದಿರಗಳಿಂದ ಹೊರ ಬನ್ನಿ ಎನ್ನುವುದನ್ನೇ ಸರಿಯಾಗಿ ಓದುಕೊಂಡಿಲ್ಲ ಎಂದು ವಿಷಾದಿಸಿದರು.
ಅಂಕಣಕಾರ ಬಿ.ಚಂದ್ರೇಗೌಡ, ವನ್ಯಜೀವಿ ತಜ್ಞ ಕೃಪಾಕರ, ವಿಚಾರವಾದಿ ಜಗದೀಶ್ ಕೊಪ್ಪ, ದಸಂಸ ಸಂಚಾಲಕ ಗುರುಪ್ರಸಾದ್ ಕೆರಗೋಡು, ಸಿ.ಕುಮಾರಿ, ಟಿ.ಎಲ್.ಕೃಷ್ಣೇಗೌಡ ಇದ್ದರು.