

ಶಿವಮೊಗ್ಗ: ಕುವೆಂಪು ವಿವಿಯಲ್ಲಿ ಭ್ರಷ್ಟಚಾರ ನಡೆದಿದೆ. ಜತೆಗೆ ಆಡಳಿತ ವ್ಯವಸ್ಥೆಯೂ ಅಸಮರ್ಪಕವಾಗಿದೆ. ಇದೆಲ್ಲದರ ಬಗ್ಗೆ ಸರ್ಕಾರ ಉನ್ನತ ಮಟ್ಟದ ತನಿಖೆ ನಡೆಸಿ ಭ್ರಷ್ಟಚಾರದಲ್ಲಿ ಭಾಗಿಯಾಗಿರುವವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕೆಂದು ವಿಧಾನ ಪರಿಷತ್ ಸದಸ್ಯ ಡಾ.ಧನಂಜಯ ಸರ್ಜಿ ಸರ್ಕಾರವನ್ನು ಒತ್ತಾಯಿಸಿದ್ದಾರೆ.
ಮಂಗಳವಾರ ಪರಿಷತ್ ಕಲಾಪದಲ್ಲಿ ವಿಷಯ ಪ್ರಸ್ತಾಪಿಸಿ ಉನ್ನತ ಶಿಕ್ಷಣ ಸಚಿವ ಡಾ.ಎಂ.ಸಿ.ಸುಧಾಕರ್ ಅವರ ಗಮನಸೆಳೆದರು. ವಿದ್ಯಾರ್ಥಿಗಳ ಶೈಕ್ಷಣಿಕ ಬದುಕನ್ನು ರೂಪಿಸುವ ಮಹತ್ತರ ಜವಬ್ದಾರಿ ನಿರ್ವಹಿಸಬೇಕಾದ ವಿವಿಯು ಏಕರೂಪದ ವೇಳಾಪಟ್ಟಿ ಅನುಸರಿಸುವಲ್ಲಿ ಲೋಪ ಎಸಗಿದೆ ಎಂದು ತಿಳಿಸಿದರು.
ವಿವಿಯ ಪ್ರಸಾರಾಂಗದಲ್ಲಿ ಲಕ್ಷಾಂತರ ರೂಪಾಯಿಗಳ ಅವ್ಯವಹಾರ ನಡೆದಿದ್ದು ಈಗಾಗಲೇ ಲೋಕಾಯುಕ್ತದಲ್ಲಿ ಪ್ರಕರಣ ದಾಖಲಾಗಿದೆ. ವಿವಿಯ ದೂರ ಶಿಕ್ಷಣ ಪ್ರವೇಶಾತಿ ಮತ್ತು ವ್ಯಾಸಂಗದ ಇನ್ನಿತರ ನಿರ್ವಹಣೆಗಳನ್ನು ತಂತ್ರಾಂಶದ ಮೂಲಕ ನಡೆಸಲು ಬೆಂಗಳೂರಿನ ಕಂಪನಿಯೊಂದಿಗೆ ಮಾಡಿಕೊಂಡಿರುವ ಒಪ್ಪಂದ, ದರ ನಿರ್ಣಯಗಳಲ್ಲಿನ ತಪ್ಪುಗಳಿಂದಾಗಿ ವಿವಿಗೆ ಲಕ್ಷಾಂತರ ರೂ. ನಷ್ಟವಾಗಿದೆ ಎಂದು ಹೇಳಿದರು.