

ಮಂಡ್ಯ: ಕವಿಗಳು ಬರೆದ ಕಾವ್ಯವನ್ನು ಜನರ ಕಿವಿಗಳಿಗೆ ತಲುಪಿಸುವ ಕೆಲಸ ದೊಡ್ಡದು. ಈ ನಿಟ್ಟಿನಲ್ಲಿ ಗೀತ ಗಾಯನದ ಮೂಲಕ ಮಾಡುತ್ತಿರುವುದು ಸಂತೋಷದ ವಿಷಯ ಎಂದು ಬಾಗಲಕೋಟೆಯ ಖ್ಯಾತ ನಾಟಕಕಾರ ಪ್ರೊ.ಬಿ.ಆರ್.ಪಾಟೀಲ್ ಅಭಿಪ್ರಾಯಪಟ್ಟರು.
ನಗರದ ರೈತ ಸಭಾಂಗಣದಲ್ಲಿ ಕರ್ನಾಟಕ ಸಂಘದ ವತಿಯಿಂದ ಸಂಸ್ಕೃತಿ ಸಂಘಟಕ ದಿ.ಕೆ.ಪ್ರಹ್ಲಾದರಾವ್ ನೆನಪಿನಲ್ಲಿ ಏರ್ಪಡಿಸಿದ್ದ ರಾಜ್ಯಮಟ್ಟದ ಕುವೆಂಪು ಗೀತಗಾಯನ ಸ್ಪರ್ಧೆ ಉದ್ಘಾಟಿಸಿ ಮಾತನಾಡಿದ ಅವರು, ನಮ್ಮಲ್ಲಿ ಶ್ರೇಷ್ಟ ಸಾಹಿತಿ, ಕವಿಗಳಿದ್ದರೂ ಸಾಹಿತ್ಯ ಬಲ್ಲವರು ಗಮನಿಸದಿರುವುದು ಬೇಸರದ ವಿಷಯ ಎಂದರು.
ಭಾವ ಎನ್ನುವುದು ಕೇವಲ ಬಾಯಿಂದ ಬರುವುದಲ್ಲ, ಬದಲಿಗೆ ಹೃದಯದಿಂದ ಬರಬೇಕು, ಆತ್ಮದಿಂದ ಉದಯಿಸಬೇಕು. ಭಾವಗೀತೆಗಳನ್ನು ಕೇವಲ ಸ್ಪರ್ಧೆಗಾಗಿ ಕಲಿತು ಹಾಡಿದರೆ ಉಳಿಯುದಿಲ್ಲ. ಆದರೆ ಅರಿತು ಹಾಡಿದರೆ ಉಳಿಯುತ್ತದೆ. ಹೃದಯ ತೆರೆದು ಹಾಡಬೇಕು ಎಂಬ ಕಿವಿಮಾತು ಹೇಳಿದ ಅವರು, ಕುವೆಂಪು ಅವರು ಶ್ರೇಷ್ಟ ಕವಿಯಾಗಿದ್ದರು. ರಾಷ್ಟ್ರಮಟ್ಟದ ಎಲ್ಲ ಪ್ರಶಸ್ತಿಗಳನ್ನು ಪಡೆದರೂ ನೋಬಲ್ ಪ್ರಶಸ್ತಿ ಲಭಿಸಲಿಲ್ಲ. ಅದಕ್ಕಾಗಿ ಅವರು ಲಾಭಿ ಮಾಡಲಿಲ್ಲ ಎಂದರು.
ಕರ್ನಾಟಕ ಸಂಘದ ಅಧ್ಯಕ್ಷ ಪ್ರೊ.ಬಿ.ಜಯಪ್ರಕಾಶಗೌಡ ಮಾತನಾಡಿ, ನಾವು ಹಿಂದಿನ ಪರಂಪರೆ ಮರೆಯದೇ ಯುವ ಪೀಳಿಗೆಗಾಗಿ ಮುಂದುವರಿಸಿಕೊಂಡು ಹೋಗಬೇಕು. ಇಂದು ಆನ್‌ಲೈನ್‌ನಿಂದಾಗಿ ಭಾವ ಸಂಬಂಧಕ್ಕೆ ಧಕ್ಕೆ ಉಂಟಾಗಿದೆ. ಒಬ್ಬರನ್ನೊಬ್ಬರು ಮುಖಾಮುಖಿಯಾದಾಗ ಮಾತ್ರ ಅಂತಹ ಸಂಬಂಧ ಉಳಿಯುತ್ತದೆ. ಗಾಯಕರು ಯಾರನ್ನು ಅನುಕರಣೆ ಮಾಡುವುದು ಬೇಡ. ಟ್ರಾೃಕ್‌ಗಳನ್ನು ಬಳಸದೇ ನಿಮ್ಮ ಶಾರೀರದ ಮೇಲೆ ನಂಬಿಕೆ ಇಟ್ಟು ನಿಮ್ಮದೇ ದಾಟಿಯಲ್ಲಿ ಆತ್ಮ ಸಂತೋಷಕ್ಕಾಗಿ ಹಾಡಿ ಎಂದರು.
ಕೆ.ಪ್ರಹ್ಲಾದರಾವ್ ತಮ್ಮ ಸಂಸ್ಕೃತಿ ಸಂಘಟನೆಯ ಮೂಲಕ ಒಳ್ಳೆಯ ಕೆಲಸ ಮಾಡಿದ್ದಾರೆ. ಹಲವು ಕಲಾವಿದರನ್ನು ಪರಿಚಯಿಸಿದ್ದಾರೆ. ಮಂಡ್ಯದ ಘನತೆಯನ್ನು ಎತ್ತಿ ಹಿಡಿದಿದ್ದಾರೆ. ಅವರನ್ನು ನೆನೆಯುವುದು ನಮ್ಮ ಕರ್ತವ್ಯ. 60ರ ದಶಕದಿಂದ ಅಸ್ಥಿತ್ವದಲ್ಲಿರುವ ರೈತ ಸಭಾಂಗಣ ಮಂಡ್ಯದ ಅಸ್ಮಿತೆಯಾಗಿದೆ. ಇಲ್ಲಿ ನೂರಾರು ಮಹತ್ವಪೂರ್ಣ ಕಾರ್ಯಕ್ರಮಗಳು ನಡೆದಿವೆ. ಇಲ್ಲಿ ನಿಂತು ಮಾತನಾಡುವುದೆಂದರೆ ಅಭಿಮಾನದ ವಿಷಯ. ಇಂತಹ ರೈತ ಸಭಾಂಗಣಕ್ಕೆ ಕಾಯಕಲ್ಪ ಆಗಬೇಕಾದ ಅಗತ್ಯವಿದೆ. ಇದಕ್ಕಾಗಿ ನಮ್ಮ ಜನಪ್ರತಿನಿಧಿಗಳ ಗಮನ ಸೆಳೆಯುವ ಕೆಲಸ ಮಾಡಬೇಕು ಎಂದು ತಿಳಿಸಿದರು.
ಕೆ.ಪ್ರಹ್ಲಾದರಾವ್ ಅವರ ಪುತ್ರ ಹಾಸನದ ಪ್ರಮೋದ್ ಮಾತನಾಡಿ, ಜಯಪ್ರಕಾಶಗೌಡರು ಮಾಡುವ ಕಾರ್ಯಕ್ರಮಗಳನ್ನು ನೋಡಿದರೆ ನಮ್ಮ ತಂದೆ ನೆನಪಾಗುತ್ತಾರೆ. ಇಂತಹ ಕಾರ್ಯಕ್ರಮಗಳನ್ನು ಮಾಡಲು ಸಂಘಟನೆಗಳಿಗೆ ಆರ್ಥಿಕ ಶಕ್ತಿ ಬೇಕು. ಶಕ್ತಿ ಇಲ್ಲದಿದ್ದರೂ ನಮ್ಮ ತಂದೆ ಉಳ್ಳವರಿಂದ ಹಣ ತಂದು ಕಾರ್ಯಕ್ರಮ ಮಾಡಿ ಅನೇಕ ಪ್ರತಿಭೆಗಳನ್ನು ಮಂಡ್ಯಕ್ಕೆ ಪರಿಚಯಿಸಿದರು. ಇಂತಹ ಸಂಘಟಕರ ಹಿಂದಿನ ಉದ್ದೇಶವನ್ನು ಅರಿಯಬೇಕು. ರೈತ ಸಭಾಂಗಣವನ್ನು ಇಲ್ಲಿನ ಆಡಳಿತ ಮಂಡಳಿ ನವೀಕರಿಸಲು ಸಾಧ್ಯವಾಗದಿದ್ದರೆ ಸಾರ್ವಜನಿಕವಾಗಿಯಾದರೂ ಇದರ ವೈಭವವನ್ನು ಮತ್ತೆ ಮರುಕಳಿಸುವಂತೆ ಮಾಡಲು ತಮ್ಮ ಕೈಲಾದಷ್ಟು ಸಹಾಯ ಮಾಡುವುದಾಗಿ ಹೇಳಿದರು.
ನಿವೃತ್ತ ಪ್ರಾಂಶುಪಾಲ ಸಾಹಿತಿ ಡಾ.ಮ.ರಾಮಕೃಷ್ಣ ಅಧ್ಯಕ್ಷತೆ ವಹಿಸಿದ್ದರು. ತೀರ್ಪುಗಾರರಾದ ಡಾ.ಎನ್.ವೈ.ಶ್ರೀನಿವಾಸಯ್ಯ, ಎಂ.ಆರ್.ಶಶಿಕಲಾ, ಎಚ್.ಆರ್.ರಮ್ಯಾ, ಕೋಣನಹಳ್ಳಿ ಜಯರಾಮು, ಮಂಜುಳಾ ಉದಯಶಂಕರ್ ಹಾಜರಿದ್ದರು.