

ಮಂಡ್ಯ: ಕೆರಗೋಡಿನಲ್ಲಿ ತಿಂಗಳ ಹಿಂದೆ ಉದ್ವಿಗ್ನತೆ ಆರಂಭವಾದಾಗ ಸಕ್ಕರೆಯ ನಾಡಿನ ಬಂಧುಗಳಿಗೊಂದು ಪತ್ರ ಅಂತ ಬರೆದಿದ್ದೆ. ಏಕೆಂದರೆ ನಾವು ಕರಾವಳಿಯಲ್ಲಿ ಮಾಡಿದ ಗಲಭೆಗಳು ನೆನಪಿಗೆ ಬಂದವು. ಸಂತರ ನಾಡಿನ ಈ ದೇಶದಲ್ಲಿ ಧರ್ಮದ ಅರ್ಥ ಗೊತ್ತಿಲ್ಲದವರು ಹಬ್ಬಿಸುತ್ತಿರುವ ಗಲಭೆ ತಡೆಯಲು ಮನಸ್ಸು ತುಡಿಯುತ್ತಿತ್ತು ಎಂದು ವಿಚಾರವಾದಿ ಎಂ.ಜಿ ಹೆಗಡೆ ಹೇಳಿದರು.
ನಗರದ ರೈತ ಸಂಭಾಂಗಣದಲ್ಲಿ ಜಾಗೃತ ಕರ್ನಾಟಕ ಸಂಘಟನೆಯಿಂದ ಆಯೋಜಿಸಿದ್ದ ’ಕುವೆಂಪು ಕ್ರಾಂತಿ ಕಹಳೆ-50’ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ನನಗೆ ಮತೀಯವಾದದ ಅಮಲು ಹೆಚ್ಚಾದಾಗ ನನ್ನ ಗುರುಗಳು ಬುದ್ದಿವಾದ ಹೇಳಿ ಹೊರತಂದರು. ಹಾಗಾಗಿ ಮನುಷ್ಯನಾಗಿದ್ದೇನೆ. ನನ್ನ ರೀತಿ ಯಾರೂ ಸಹ ಮತೀಯವಾದಕ್ಕೆ ಬಲಿಯಾಗುವುದು ಬೇಡ ಎಂದು ಸಲಹೆ ನೀಡಿದರು.
ಕರಾವಳಿಯಲ್ಲಿ 2008ರಿಂದ ನಡೆದ ಕೋಮುಗಲಭೆಗಳಲ್ಲಿ ಕೇಸು ಹಾಕಿಸಿಕೊಂಡವರ 460 ಜನರ ಪಟ್ಟಿ ಗಮನಿಸಿದೆ. ಅದರಲ್ಲಿ 435 ಜನ ಹಿಂದುಳಿದ ವರ್ಗದವರಿದ್ದರೆ, 15 ಜನ ದಲಿತರ ಮಕ್ಕಳು ಇದ್ದಾರೆ. ಅದು ಬಿಟ್ಟರೆ ಮೇಲ್ಜಾತಿಯ ಒಬ್ಬರೂ ಇಲ್ಲದಿರುವುದೇಕೆ ಎಂದು ಪ್ರಶ್ನಿಸಿದ ಅವರು, ಹಿಂದುತ್ವದ ರಾಜಕಾರಣ ಆರಂಭವಾದ ನಂತರ ಈ ರಾಜಕೀಯ ದುರುದ್ದೇಶ ಹೆಚ್ಚುತ್ತಾ ಇದೆ. ನಮ್ಮ ಮಕ್ಕಳಿಗೆ ಪೆನ್ನು ಪುಸ್ತಕ ಕೊಡುವ ಬದಲು ತಲವಾರ್ ಕೊಡಬೇಡಿ. ಬಡವರ ಮನೆ ಮಕ್ಕಳು ಬೀದಿಗೆ ಬರಬೇಡಿ. ಕೋಮು ಗಲಭೆ ಶುರುವಾದರೆ ಕೃಷಿ ಭೂಮಿಯಲ್ಲಿ ಯುವಕರು ಇರುವುದಿಲ್ಲ. ಯಾವುದೇ ಕಾರಣಕ್ಕೂ ಮತೀಯವಾದಿಗಳಿಗೆ ಅವಕಾಶ ಕೊಡಬೇಡಿ ಎಂದರು.
ಸಾಹಿತಿ ಡಾ.ಬಂಜಗೆರೆ ಜಯಪ್ರಕಾಶ್ ಮಾತನಾಡಿ, ಕುವೆಂಪು ಅವರ ಬಹು ಚರ್ಚಿತ ’ವಿಚಾರ ಕ್ರಾಂತಿಗೆ ಆಹ್ವಾನ, ಸಂಸ್ಕೃತಿ ಕ್ರಾಂತಿಗೆ ಕಹಳೆ ನಾಂದಿ’ ಭಾಷಣಗಳಿಗೆ 50 ವರ್ಷ ತುಂಬಿದ ಮತ್ತು ಮಂಡ್ಯಕ್ಕೆ 85 ವರ್ಷ ತುಂಬಿದ ಹಿನ್ನೆಲೆಯಲ್ಲಿ ಈ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ. ಕುವೆಂಪು ಕೇವಲ ಮಂಡ್ಯ, ಶಿವಮೊಗ್ಗಕ್ಕೆ ಸೀಮಿತರಲ್ಲ. ಇಡೀ ಭಾರತದಲ್ಲಿ ಶೂದ್ರ ಪ್ರಜ್ಞೆಯನ್ನು ಸಾರಿದ ದಾರ್ಶನಿಕ, ಯುಗಕವಿಯಾಗಿದ್ದಾರೆ ಎಂದರು.
ಕುವೆಂಪು ಅವರ ದೃಷ್ಟಿಯಲ್ಲಿ ಮನುಷ್ಯರಾಗಿರುವುದು ಎಂದರೆ ವಿಚಾರವುಳ್ಳವರಾಗಿರುವುದು ಎಂದರ್ಥ. ಯುವಜನರಿಗೆ ನಿರಂಕುಶಮತಿಗಳಾಗಿ ಎಂದು ಕರೆ ನೀಡಿದ್ದರು. ಮಿತಿಗಳು ಇರದಿರುವ ಮನಸ್ಸು, ಜಾತಿ ಮತಗಳ ಅಡ್ಡಿಯಿಲ್ಲದಿರುವ ಮನಸ್ಸು ಎಂದಿದ್ದರು. ಸಮಾಜಕ್ಕೆ ಒಳಿತನ್ನು ಮಾಡುವ ಅಂಶಗಳಿಗೆ ಕುವೆಂಪು ಕರೆ ನೀಡಿದರು. ಆಧ್ಯಾತ್ಮಿಕತೆ ಎಂದರೆ ಮತ ಅಲ್ಲ. ಮೌಢ್ಯ ಕಂದಾಚಾರವಂತೂ ಅಲ್ಲವೇ ಅಲ್ಲ. ವಿಶ್ವ ನಿಯಮಗಳನ್ನು ಅರಿಯುವುದು ಎಂದರೆ ಪ್ರಕೃತಿ ಶಕ್ತಿಯನ್ನು ಅರಿತು ಗೌರವಿಸುವುದು. ಯಾವುದು ಮಾಡಿದರೆ ಎಲ್ಲರಿಗೂ ಒಳಿತಾಗುತ್ತದೆ ಎಂಬುದನ್ನು ಅರಿಯಲು ಮತಿಯನ್ನು ಬಳಸಿ ಎಂದು ಕುವೆಂಪು ಹೇಳಿದ್ದರು ಎಂದರು.
ವಾಗ್ಮಿ ಸುಧೀರ್‌ಕುಮಾರ್ ಮುರೋಳಿ, ಲೇಖಕಿ ಸೌಮ್ಯ ಕೋಡೂರು, ಕವಿ ರಾಜೇಂದ್ರ ಪ್ರಸಾದ್, ಹೋರಾಟಗಾರ್ತಿಯರಾದ ಸಿ.ಕುಮಾರಿ, ಪೂರ್ಣಿಮಾ, ತೇಜ ಯಾಲಕ್ಕಯ್ಯ ಮಾತನಾಡಿದರು. ದಸಂಸ ಸಂಚಾಲಕರಾದ ಗುರುಪ್ರಸಾದ್ ಕೆರಗೋಡು ಅಧ್ಯಕ್ಷತೆ ವಹಿಸಿದ್ದರು.