ಕುವೆಂಪು ಕನ್ನಡ ಅಕ್ಷರ ಲೋಕದ ಮೇರು ಶಿಖರ: ಟಿ.ಪಿ.ರಮೇಶ್

MDK04
Published on

ಮಡಿಕೇರಿ: ಕುವೆಂಪುರವರು ಕನ್ನಡ ಅಕ್ಷರ ಲೋಕದ ನವ ಸಾಹಿತ್ಯವನ್ನು ಮೇರು ಶಿಖರಕ್ಕೆ ಏರಿಸಿದ ಮಹಾನ್ ಚೇತನ ಎಂದು ಕನ್ನಡ ಸಾಹಿತ್ಯ ಪರಿಷತ್ತು ಜಿಲ್ಲಾ ಘಟಕದ ಮಾಜಿ ಅಧ್ಯಕ್ಷ ಟಿ.ಪಿ.ರಮೇಶ್ ಅಭಿಪ್ರಾಯಿಸಿದರು.


ಜಿಲ್ಲಾಡಳಿತ, ಜಿಲ್ಲಾ ಪಂಚಾಯಿತಿ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ವತಿಯಿಂದ ಕನ್ನಡ ಸಾಹಿತ್ಯ ಪರಿಷತ್ ಜಿಲ್ಲಾ ಘಟಕ ಹಾಗೂ ಕೊಡಗು ಜಿಲ್ಲಾ ಜಾನಪದ ಪರಿಷತ್ ಸಹಕಾರದಲ್ಲಿ ನಗರದ ಕುವೆಂಪು ಪುತ್ಥಳಿ ಆವರಣದಲ್ಲಿ ಗುರುವಾರ ನಡೆದ ವಿಶ್ವ ಮಾನವ ದಿನಾಚರಣೆಯಲ್ಲಿ ಪಾಲ್ಗೊಂಡು ಮಾತನಾಡಿದರು.


ಕುವೆಂಪುರವರು ನಮ್ಮ ತಲೆಮಾರನ್ನು ವೈಚಾರಿಕ ಅಂಗಳಕ್ಕೆ ಕರೆದೊಯ್ದು ಪರಿಚಯಿಸಿದ ಅದ್ಭುತ ವಿಚಾರವಂತ. ಕುವೆಂಪು ಅವರು ನೀಡಿರುವ ವಿಶ್ವ ಮಾನವ ಸಂದೇಶ ಸದಾ ಕಾಲಕ್ಕೆ ಸಲ್ಲುತ್ತದೆ. ರಾಷ್ಟ್ರಕವಿ, ಜ್ಞಾನಪೀಠ ಪ್ರಶಸ್ತಿ ಪುರಸ್ಕೃತ ಕುವೆಂಪುರವರು ಕುಪ್ಪಳ್ಳಿಯಲ್ಲಿ ಹುಟ್ಟಿ ಇಡೀ ವಿಶ್ವಕ್ಕೆ ಕನ್ನಡ ಸಾಹಿತ್ಯವನ್ನು ವಿಸ್ತರಿಸಿ ಇತಿಹಾಸದ ದಿಗ್ಗಜರ ಪಾಲಿಗೆ ಸೇರಿದರು. ಕರ್ನಾಟಕ ವೈಚಾರಿಕ ವಲಯದ ಸಾಕ್ಷಿ ಪ್ರಜ್ಞೆಯಂತೆ ಇದ್ದ ಕುವೆಂಪು ಅವರು, ಕನ್ನಡ ನಾಡು, ನುಡಿ ಕಟ್ಟುವ ಕಾಯಕದಲ್ಲಿ ತಮ್ಮನ್ನು ಸಂಪೂರ್ಣವಾಗಿ ಸಮರ್ಪಿಸಿಕೊಂಡಿದ್ದರು ಎಂದು ಹೇಳಿದರು.


ಕನ್ನಡ ಸಾಹಿತ್ಯ ಪರಿಷತ್ತು ಜಿಲ್ಲಾ ಘಟಕದ ಅಧ್ಯಕ್ಷ ಎಂ.ಪಿ.ಕೇಶವ ಕಾಮತ್ ಮಾತನಾಡಿ, ರಾಷ್ಟ್ರಕವಿ ಕುವೆಂಪುರವರು ಎಲ್ಲಾದರೂ ಇರು, ಎಂತಾದರೂ ಇರು, ಎಂದೆಂದಿಗೂ ನೀ ಕನ್ನಡವಾಗಿರು ಎಂಬ ದೀಕ್ಷೆಯನ್ನು ಕೊಟ್ಟಿದ್ದಾರೆ. ನೀ ಮೆಟ್ಟುವ ನೆಲ ಅದೇ ಕರ್ನಾಟಕ, ನೀ ಕುಡಿಯುವ ನೀರು ಅದೇ ಕಾವೇರಿ, ಕನ್ನಡ ಮತ್ತು ಸಂಸ್ಕೃತಿ ವಿಶ್ವ ವ್ಯಾಪ್ತಿಯಾಗಿಯೂ ಕನ್ನಡತನ ಉಳಿಸಿಕೊಳ್ಳುವ ದೂರದೃಷ್ಟಿಯನ್ನು ಕುವೆಂಪು ಅವರು ನೀಡಿದ್ದಾರೆ ಎಂದು ವಿವರಿಸಿದರು.


ಕೊಡಗು ಜಿಲ್ಲಾ ಜಾನಪದ ಪರಿಷತ್ ಅಧ್ಯಕ್ಷ ಬಿ.ಜಿ.ಅನಂತಶಯನ ಮಾತನಾಡಿ, ಕುವೆಂಪುರವರ ಸೃಜನಶೀಲ ಬರಹಗಳ ಜತೆಗೆ ಸಾಂಸ್ಕೃತಿಕವಾಗಿ ಮಹತ್ವ ಹೊಂದಿವೆ. ಅವರ ವಿಚಾರ ಬರಹಗಳು ಮನುಷ್ಯತ್ವದ ಏಕತೆಯನ್ನು ಎತ್ತಿ ಹಿಡಿಯುತ್ತವೆ. ಬರಹಗಳು ಮುಂದಿನ ಸಹಸ್ರಮಾನದವರೆಗೂ ಕನ್ನಡ ನಾಡಿನ ಸಾಕ್ಷಿ ಪ್ರಜ್ಞೆ. ಆ ನಿಟ್ಟಿನಲ್ಲಿ ಮಕ್ಕಳಿಗೆ ಕುವೆಂಪು ಸಾಹಿತ್ಯವನ್ನು ತಿಳಿಸುವಂತಾಗಬೇಕು ಎಂದು ಕರೆ ನೀಡಿದರು.


ಜಿ.ಪಂ.ಮಾಜಿ ಅಧ್ಯಕ್ಷರು ಹಾಗೂ ಕುವೆಂಪುರವರ ಕುಟುಂಬಸ್ಥರಾದ ಕೆ.ಪಿ.ಚಂದ್ರಕಲಾ ಮಾತನಾಡಿ, ಕರ್ನಾಟಕದಲ್ಲಿ ಕುವೆಂಪು ಎಂಬುದು ವ್ಯಕ್ತಿ ನಾಮವಲ್ಲ. ಎಚ್ಚರದ ವಿರಾಟ ಪ್ರಜ್ಞೆ, ಅಭಿಮಾನದ ಪ್ರತೀಕ ಎಂದು ನುಡಿದರು.


ಕುವೆಂಪುರವರ ಪುತ್ಥಳಿ ನವೀಕರಣಕ್ಕೆ ಜಿಲ್ಲಾಡಳಿತ ಸ್ಪಂದಿಸಿದ್ದು, ಮಾನ್ಯ ಜಿಲ್ಲಾಧಿಕಾರಿ ಅವರಿಗೆ ಕೃತಜ್ಞತೆ ಎಂದು ಇದೇ ಸಂದರ್ಭದಲ್ಲಿ ಹೇಳಿದರು.


ಕನ್ನಡ ಸಾಹಿತ್ಯ ಪರಿಷತ್ತಿನ ಗೌರವ ಕಾರ್ಯದರ್ಶಿ ಮುನೀರ್ ಅಹಮ್ಮದ್ ಮಾತನಾಡಿ, ರಾಷ್ಟ್ರಕವಿ ಕುವೆಂಪು ಅವರು ಕನ್ನಡ ಸಾಹಿತ್ಯ ಲೋಕಕ್ಕೆ ಅಪಾರ ಕೊಡುಗೆ ನೀಡಿದ್ದಾರೆ. ಮನುಜ ಮತ-ವಿಶ್ವ ಪಥ ಸಂದೇಶವನ್ನು ಸಾರಿದ್ದಾರೆ. ಕುವೆಂಪು ಅವರ ಆದರ್ಶಗಳನ್ನು ಪ್ರತಿಯೊಬ್ಬರೂ ಪಾಲಿಸುವಂತಾಗಬೇಕು ಎಂದರು.


ಈ ಸಂದರ್ಭದಲ್ಲಿ ಉಪ ವಿಭಾಗಾಧಿಕಾರಿ ಯತೀಶ್ ಉಳ್ಳಾಲ್, ನಗರಸಭೆ ಅಧ್ಯಕ್ಷೆ ಅನಿತಾ ಪೂವಯ್ಯ, ಸರ್ವೋದಯ ಸಮಿತಿ ಅಧ್ಯಕ್ಷ ಅಂಬೆಕಲ್ ಕುಶಾಲಪ್ಪ, ರಕ್ಷಣಾ ವೇದಿಕೆಯ ರವಿಗೌಡ, ತಹಶೀಲ್ದಾರ್ ಪಿ.ಎಸ್.ಮಹೇಶ್, ಪೌರಾಯುಕ್ತ ವಿಜಯ, ಪ್ರಮುಖರಾದ ನೆರವಂಡ ಉಮೇಶ್, ಕಾರ್ಮಿಕ ಇಲಾಖಾ ಅಧಿಕಾರಿ ಅನಿಲ್ ಬಗಟಿ, ಜಿಲ್ಲಾ ಆಯುಷ್ ಅಧಿಕಾರಿ ಡಾ.ರೇಣುಕಾ ದೇವಿ ಇತರರು ಇದ್ದರು. ಕಾರ್ಯಕ್ರಮಕ್ಕೂ ಮೊದಲು ಕುವೆಂಪುರವರ ಪುತ್ಥಳಿಗೆ ಮಾಲಾರ್ಪಣೆ ಹಾಗೂ ಪುಷ್ಪಾರ್ಚನೆಯನ್ನು ಗಣ್ಯರು ನೆರವೇರಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net