

ಮೈಸೂರು: ಮೈಸೂರು ಮಹಾನಗರ ಪಾಲಿಕೆ ಮತ್ತು ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ವತಿಯಿಂದ ನಗರದ ಗನ್‌ಹೌಸ್ ಬಳಿಯ ವಿಶ್ವಮಾನವ ಉದ್ಯಾನದಲ್ಲಿ ರಾಷ್ಟ್ರಕವಿ ಕುವೆಂಪು ಜಯಂತಿ ಆಯೋಜಿಸಲಾಗಿತ್ತು.
ವಿದ್ವಾಂಸ ಪ್ರೊ.ಎಚ್.ಎಸ್. ಹರಿಶಂಕರ್ ಮಾತನಾಡಿ, ನೊಬೆಲ್ ಪ್ರಶಸ್ತಿ ಪಡೆಯುವ ಎಲ್ಲ ಅರ್ಹತೆಯನ್ನು ರಾಷ್ಟ್ರಕವಿ ಕುವೆಂಪು ಹೊಂದಿದ್ದರು. ಆದರೆ, ಅವರ ಸಾಹಿತ್ಯ ಆಂಗ್ಲಭಾಷೆಗೆ ಹೆಚ್ಚಿನ ಪ್ರಮಾಣದಲ್ಲಿ ಅನುವಾದ ಹಿನ್ನೆಲೆಯಲ್ಲಿ ಅವರು ಪ್ರಶಸ್ತಿಯಿಂದ ವಂಚಿತರಾದರು ಎಂದರು.
ಕುವೆಂಪು ಜಯಂತಿ ಸಂದರ್ಭದಲ್ಲಿ ಮಾತ್ರ ಕುವೆಂಪು ಅವರನ್ನು ನೆನೆದರೆ ಸಾಲದು. ಕುವೆಂಪು ಅವರ ಎಲ್ಲ ಕೃತಿಗಳನ್ನು ಓದಿ ಅವರ ಚಿಂತನೆಗಳನ್ನು ಮೈಗೂಡಿಸಿಕೊಳ್ಳಬೇಕು. ಕನ್ನಡಿಗರು ಕನ್ನಡ ಸಾಹಿತ್ಯ ಕೃತಿಗಳನ್ನು ಓದುವ ಜತೆಗೆ ಕನ್ನಡ ಭಾಷೆಯನ್ನು ಹೆಚ್ಚಾಗಿ ಬಳಕೆ ಮಾಡಬೇಕು ಎಂದು ಹೇಳಿದರು.
ವೇದಿಕೆಯಲ್ಲಿ ಶಾಸಕ ಟಿ.ಎಸ್. ಶ್ರೀವತ್ಸ, ನಗರ ಪಾಲಿಕೆ ಆಯುಕ್ತ ಆಸಾದ್ ಉರ್ ರೆಹಮಾನ್ ಷರೀಫ್, ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ಮಡ್ಡೀಕೆರೆ ಗೋಪಾಲ್, ಮಾಜಿ ಅಧ್ಯಕ್ಷ ಎಂ.ಚಂದ್ರಶೇಖರ್, ನಗರ ಪಾಲಿಕೆ ಮಾಜಿ ಸದಸ್ಯ ಬಿ.ವಿ. ಮಂಜುನಾಥ್, ಉದ್ಯಮಿ ಎ.ಪಿ. ನಾಗೇಶ್, ಸಾರ್ವಜನಿಕ ಶಿಕ್ಷಣ ಇಲಾಖೆ ನಿರ್ದೇಶಕ ಜವರೇಗೌಡ, ಪದವಿಪೂರ್ವ ಶಿಕ್ಷಣ ಇಲಾಖೆ ಉಪ ನಿರ್ದೇಶಕ ಎಂ. ಮರಿಸ್ವಾಮಿ ಹಾಗೂ ಇತರರು ಇದ್ದರು.