ಕನ್ನಡ ಸಾಹಿತ್ಯ ಶ್ರೀಮಂತಗೊಳಿಸಿದ ಕುವೆಂಪು

04 CRP-4A
ಚನ್ನರಾಯಪಟ್ಟಣದಲ್ಲಿ ಕರುನಾಡು ಸರ್ವಜನಾ ವೇದಿಕೆಯಿಂದ ಆಯೋಜಿಸಿದ್ದ ಕುವೆಂಪು ಜಯಂತ್ಯುತ್ಸವ ಕಾರ್ಯಕ್ರಮದಲ್ಲಿ ಶಾಸಕ ಸಿ.ಎನ್. ಬಾಲಕೃಷ್ಣ ಅವರಿಗೆ ಆಧುನಿಕ ಭಗೀರಥ ಪ್ರಶಸ್ತಿ ನೀಡಿ ಗೌರವಿಸಲಾಯಿತು. ಕೆ.ಎಂ.ನಾಗೇಂದ್ರ ಬಾಬು, ಜಿ.ಆರ್.ಶರತ್, ಕೆ.ಎನ್.ಬನಶಂಕರಿ ರಘು, ರಾಣಿಕೃಷ್ಣ ಇತರರು ಇದ್ದರು.
Published on

ಚನ್ನರಾಯಪಟ್ಟಣ: ಕನ್ನಡ ಸಾಹಿತ್ಯವನ್ನು ಶ್ರೀಮಂತಗೊಳಿಸಿದ ಕೀರ್ತಿ ರಾಷ್ಟ್ರಕವಿ ಕುವೆಂಪು ಅವರಿಗೆ ಸಲ್ಲುತ್ತದೆ. ಕನ್ನಡ ನಾಡಿಗೆ ದೇಶದಲ್ಲಿ ಹಿರಿಮೆ, ಗರಿಮೆ ಮೂಡಿಸಿದ ಕುವೆಂಪು ಜಯಂತ್ಯುತ್ಸವ ಕೇವಲ ಆಚರಣೆಗಷ್ಟೇ ಸೀಮಿತಗೊಳ್ಳದೆ ಅವರ ಆದರ್ಶನಿಯ ಯುವಸಮುದಾಯದಲ್ಲಿ ಅನುಸರಣೆಯಾಗಬೇಕೆಂದು ಶಾಸಕ ಸಿ.ಎನ್.ಬಾಲಕೃಷ್ಣ ಹೇಳಿದರು.

ಪಟ್ಟಣದಲ್ಲಿ ಕರುನಾಡ ಸರ್ವಜನ ವೇದಿಕೆಯ ಸ್ವಾಭಿಮಾನಿ ಸಮಾವೇಶ ಹಾಗೂ ಕುವೆಂಪು ಜಯಂತ್ಯುತ್ಸವ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಕುವೆಂಪು ರಚಿಸಿದ ಸಾಹಿತ್ಯದಲ್ಲಿ ಸಮಾಜಮುಖಿ ಚಿಂತನೆ ಇದೆ. ಸಮಾಜಕ್ಕೆ ದಾರಿದೀಪವಾಗಿದೆ. ನಾಡಿನ ಗೌರವವನ್ನು ಎತ್ತಿಹಿಡಿದಿದ್ದಾರೆ. ಕನ್ನಡಕ್ಕೆ ಮೊದಲ ಜ್ಞಾನಪೀಠ ಪ್ರಶಸ್ತಿ ತಂದುಕೊಟ್ಟ ಮೇರು ಸಾಹಿತಿ ಎಂದು ಬಣ್ಣಿಸಿದರು.

ಕನ್ನಡಕ್ಕೆ ಭಾಷೆಯ ಸ್ಥಾನಮಾನ ದೊರಕಿದೆ. ಇದು ಸಾಹಿತ್ಯಕ್ಷೇತ್ರದ ಅಭಿವೃದ್ಧಿಗೆ ಪೂರಕವಾಗಲಿದೆ. ವಿದ್ಯಾರ್ಥಿಗಳು ಸಾಹಿತ್ಯ ಕೃತಿಗಳನ್ನು ಓದುವ ಅಭಿರುಚಿ ರೂಢಿಸಿಕೊಳ್ಳುವುದರಿಂದ ವ್ಯಕ್ತಿತ್ವ ವಿಕಸನವಾಗುತ್ತದೆ. ಸಂಗೀತ, ಸಾಹಿತ್ಯ, ಕಲೆ, ಕ್ರೀಡೆಯಲ್ಲಿ ಕನ್ನಡನಾಡು ತನ್ನದೇ ಆದ ಪರಂಪರೆ ಹೊಂದಿದೆ ಎಂದು ತಿಳಿಸಿದರು.

ಕಿರುತೆರೆ ಕಲಾವಿದ ವರ್ತೂರು ಸಂತೋಷ್ ಮಾತನಾಡಿ, ದೇಸಿ ರಾಸುಗಳನ್ನು ಸಾಕಬೇಕು. ಸದ್ಯದಲ್ಲಿ ಬೂಕನಬೆಟ್ಟದಲ್ಲಿ ನಡೆಯಲಿರುವ ದನಗಳ ಜಾತ್ರೆಯಲ್ಲಿ ಉತ್ತಮ ರಾಸುಗಳಿಗೆ ಆಯೋಜಕರು, ತಾಲೂಕು ಆಡಳಿತ ಚಿನ್ನ, ಬೆಳ್ಳಿ ಬಹುಮಾನ ನೀಡುವ ಮೂಲಕ ಪ್ರೋತ್ಸಾಹಿಸಬೇಕು ಎಂದು ಶಾಸಕರಲ್ಲಿ ಮನವಿ ಮಾಡಿದರು.

ಕರುನಾಡ ಸರ್ವಜನ ವೇದಿಕೆ ಗೌರವಾಧ್ಯಕ್ಷ ಕೆ.ಎಂ.ನಾಗೇಂದ್ರಬಾಬು ಮಾತನಾಡಿ, ಯುವಜನರ ಜೀವನಕ್ಕೆ ಮಾರಕವಾಗಿರುವ ಆನ್‌ಲೈನ್ ಗೇಮ್‌ಗಳನ್ನು ನಿಷೇಧಿಸಬೇಕು ಎಂದು ಆಗ್ರಹಿಸಿದರು.

ಚಿತ್ರನಟ ಪ್ರಥಮ್ ಮಾತನಾಡಿದರು. ಶಾಸಕ ಬಾಲಕೃಷ್ಣ ಅವರಿಗೆ ಆಧುನೀಕ ಭಗೀರಥ ಬಿರುದು ನೀಡಿ ಗೌರವಿಸಲಾಯಿತು. ಮೈಸೂರಿನ ಕಲಾವಿದ ಪುನೀತ್ ಅವರು ಸ್ಥಳದಲ್ಲೇ ಮೂರು ನಿಮಿಷಗಳಲ್ಲಿ ಶಾಸಕ ಬಾಲಕೃಷ್ಣ ಅವರ ಚಿತ್ರ ಬಿಡಿಸಿ ಅವರಿಗೆ ಕೊಡುಗೆಯಾಗಿ ನೀಡಿದರು.

ಎಸ್‌ಎಸ್‌ಎಲ್‌ಸಿಯಲ್ಲಿ ಕನ್ನಡದಲ್ಲಿ 125 ಅಂಕಗಳಿಸಿದ ತಾಲೂಕಿನ ಸರ್ಕಾರಿ ಪ್ರೌಢಶಾಲೆಯ 17 ವಿದ್ಯಾರ್ಥಿಗಳನ್ನು ಸನ್ಮಾನಿಸಲಾಯಿತು.

ಬೆಂಗಳೂರಿನ ಕನ್ನಡಪರ ಹೋರಾಟಗಾರ ದಿವಂಗತ ಬಸವರಾಜ್ ಮತ್ತು ಜಯರಾಂ ಕುಟುಂಬ ವರ್ಗದವರನ್ನು ಸನ್ಮಾನಿಸಲಾಯಿತು. ಚಲನಚಿತ್ರ ಕಲಾವಿದರಾದ ತನಿಷಾ ಕುಪ್ಪಂಡ, ಭಾವನಾ, ಸೂರಜ್, ತುಕಾಲಿ ಸಂತೋಷ್, ಮಾನಸಾ, ಮಹಾಲಕ್ಷ್ಮೀ, ಪುನೀತ್ ಮೈಸೂರು, ಮಿಮಿಕ್ರಿ ಶ್ಯಾಮ್, ಡ್ಯಾನ್ಸರ್ ಬೃಂದಾ, ಸುನಾಮಿ ಕಿಟ್ಟಿ ಸೇರಿ ಕಲಾವಿದರು ಸಾಂಸ್ಕೃತಿಕ ಕಾರ್ಯಕ್ರಮ ನಡೆಸಿಕೊಟ್ಟರು.

ಕರುನಾಡ ವೇದಿಕೆಯ ಅಧ್ಯಕ್ಷ ಜೆ.ಆರ್. ಶರತ್, ಪುರಸಭಾಧ್ಯಕ್ಷೆ ಕೆ.ಎನ್.ಬನಶಂಕರಿ, ಉಪಾಧ್ಯಕ್ಷೆ ರಾಣಿ ಭಾಗವಹಿಸಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net