

ತುಮಕೂರು: ತಮ್ಮ ಜ್ಞಾನದಿಂದ ವಸ್ತು, ವಿಷಯದ ನಿಜವಾದ ಸಾರಸಂಗ್ರಹವನ್ನು ಸಮರ್ಥವಾಗಿ ಬಣ್ಣಿಸುವ ಶಕ್ತಿ ಹೊಂದಿದ್ದ ಕುವೆಂಪು ಅವರು ವಾಗ್ದೇವಿಯ ಶಬ್ಧ ಭಂಡಾರವನ್ನು ಸೂರೆಗೈದ ಕನ್ನಡದ ಏಕೈಕ ಮೇರು ಕವಿ ಎಂದು ಸಾಹಿತಿ ಡಾ. ದೊಡ್ಡರಂಗೇಗೌಡ ಬಣ್ಣಿಸಿದರು.
ನಗರದ ಕನ್ನಡ ಭವನದಲ್ಲಿ ಬುಧವಾರ ಕನ್ನಡ ಸಾಹಿತ್ಯ ಪರಿಷತ್ ಆಯೋಜಿಸಿದ್ದ ಕುವೆಂಪು ಜಯಂತಿ, ಅಭಿನಂದನಾ ಸಮಾರಂಭ ಹಾಗೂ ಪ್ರೇರಣಾ ಶಿಬಿರಕ್ಕೆ ಚಾಲನೆ ನೀಡಿ ಮಾತನಾಡಿದರು. ಕನ್ನಡದ ಮತ್ತೋರ್ವ ಸಾಹಿತ್ಯ ಶ್ರೇಷ್ಠ ವರಕವಿ ದ.ರಾ.ಬೇಂದ್ರೆ ಅವರು ಕುವೆಂಪು ಅವರನ್ನು ಯುಗದ ಕವಿ, ಜಗದ ಕವಿ ಎಂದು ಬಣ್ಣಿಸಿದ್ದಾರೆ. ಕನ್ನಡ ಸಾಹಿತ್ಯ ಕ್ಷೇತ್ರಕಂಡ ಕವಿ ರತ್ನ ಕುವೆಂಪು, ಅವರು ಹಸಿರೇ ಉಸಿರೆಂದು ನಂಬಿದ್ದವರು ಎಂದರು.
ಕೇಂದ್ರ ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ಡಾ.ಮಹೇಶಜೋಷಿ ಮಾತನಾಡಿ, ಪ್ರಕೃತಿ ಮತ್ತು ಆಧ್ಯಾತ್ಮ ಕುವೆಂಪು ಅವರ ಸಾಹಿತ್ಯದ ಎರಡು ಕಣ್ಣುಗಳಾಗಿದ್ದವು ಎಂದರು. ಕಸಾಪ ಚುನಾವಣೆ ರಾಜಕೀಯ ಚುನಾವಣೆಯಂತಲ್ಲ, ಕನ್ನಡ ಸಾಹಿತ್ಯ ಪರಿಷತ್ತಿನ ಕೇಂದ್ರ ಅಧ್ಯಕ್ಷ ಸ್ಥಾನಕ್ಕೆ ನಿಂತ 20 ಜನರು ಠೇವಣಿ ಕಳೆದುಕೊಂಡಿರುವುದು ಇದೇ ಮೊದಲು. ನಂಬಿಕೆಯಿಟ್ಟು ಮತ ನೀಡಿದವರ ವಿಶ್ವಾಸ ಉಳಿಸಿಕೊಂಡು ಹೋಗುವ ಕೆಲಸ ಮಾಡಲಾಗುವುದು ಎಂದರು.
ಲೇಖಕಿ ಬಾ.ಹ.ರಮಾಕುಮಾರಿ ಮಾತನಾಡಿ, ಕನ್ನಡ ನಾಡು ರಂಗಭೂಮಿ ಜತೆಗೆ ಸಾಹಿತ್ಯವನ್ನು ಉನ್ನತ ಮಟ್ಟಕ್ಕೆ ಕೊಂಡೊಯ್ದಿದೆ. ಜಿಲ್ಲೆಗೆ ಕೀರ್ತಿ ತರುವಂತಹ ನವ ಲೇಖಕರು, ಸಾಹಿತಿಗಳು ಹುಟ್ಟಿಕೊಳ್ಳುತ್ತಿದ್ದು, ಅಂತಹವರನ್ನು ಗಟ್ಟಿಗೊಳಿಸುವ ಕಾರ್ಯ ಕಾಸಪ ವತಿಯಿಂದ ನಡೆಯಬೇಕು ಎಂದರು.
ಕನ್ನಡ ಸಾಹಿತ್ಯ ಪರಿಷತ್ ಜಿಲ್ಲಾಧ್ಯಕ್ಷ ಕೆ.ಎಸ್.ಸಿದ್ದಲಿಂಗಪ್ಪ ಮಾತನಾಡಿ, ಕವಿಯಾಗಿ, ಸಾಮಾನ್ಯ ವ್ಯಕ್ತಿಯಾಗಿ ಕುವೆಂಪು ಅವರು ಮಾಡುತ್ತಿದ್ದ ಸಮಾಜಮುಖಿ ಕಾರ್ಯಗಳನ್ನು ಪ್ರತಿಯೊಬ್ಬರೂ ಪಾಲಿಸುವ ಮೂಲಕ ವಿಶ್ವ ಮಾನವ ದಿನಾಚರಣೆ ಸಾರ್ಥಕಗೊಳಿಸಬೇಕು ಎಂದರು. ಸಾಹಿತಿ ಕವಿತಾಕೃಷ್ಣ, ನಿವೃತ್ತ ಪ್ರಾಧ್ಯಾಪಕ ಯೋಗೀಶ್ವರ, ಕಸಾಪ ಪದಾಧಿಕಾರಿಗಳು ಇದ್ದರು.
ಎಲ್ಲ ಜಿಲ್ಲೆಯಲ್ಲೂ ಅಧ್ಯಯನ ಕೇಂದ್ರ ಆರಂಭಿಸಿ: ಪ್ರತಿ ಜಿಲ್ಲಾ ಕೇಂದ್ರದಲ್ಲಿಯೂ ಕುವೆಂಪು ಅಧ್ಯಯನ ಕೇಂದ್ರ ಆರಂಭಿಸುವ ಮೂಲಕ ವಿಶ್ವಮಾನವ ಸಂದೇಶ ನೀಡಿದ ಮಹಾನ್ ಚೇತನದ ಚಿಂತನೆಗಳನ್ನು ಯುವ ಜನರಿಗೆ ತಲುಪಿಸಬೇಕು ಎಂದು ಸರ್ಕಾರಿ ನೌಕರರ ಸಂಘದ ಜಿಲ್ಲಾಧ್ಯಕ್ಷ ನರಸಿಂಹರಾಜು ಹೇಳಿದರು. ತುಮಕೂರಿನ ಡಾ.ಗುಬ್ಬಿ ವೀರಣ್ಣ ಕಲಾಕ್ಷೇತ್ರದಲ್ಲಿ ಬುಧವಾರ ಕುವೆಂಪು ಜನ್ಮ ದಿನಾಚರಣೆ ಅಂಗವಾಗಿ ಜಿಲ್ಲಾಡಳಿತದ ವತಿಯಿಂದ ಆಯೋಜಿಸಿದ್ದ ವಿಶ್ವಮಾನವ ದಿನಾಚರಣೆಯಲ್ಲಿ ಮಾತನಾಡಿದರು. ರಾಷ್ಟ್ರಕವಿ ಕುವೆಂಪು ಕನ್ನಡ ಆಸ್ತಿಯಾಗಿದ್ದು, ಅವರ ವಿಚಾರಧಾರೆಗಳು ನಾಡಿಗೆ ಅಗತ್ಯವಾಗಿದೆ, ಎಲ್ಲ ವಿದ್ಯಾರ್ಥಿಗಳು ಕುವೆಂಪು ಅವರ ಬಗ್ಗೆ ತಿಳಿದುಕೊಳ್ಳಲು ಅನುಕೂಲವಾಗುವಂತೆ ಅಧ್ಯಯನ ಕೇಂದ್ರಗಳು ಆರಂಭವಾಗಬೇಕು ಎಂದರು. ಕಾಂಗ್ರೆಸ್ ಮುಖಂಡ ಮುರಳೀಧರ ಹಾಲಪ್ಪ ಮಾತನಾಡಿ, ಕುವೆಂಪು ಕನ್ನಡ ಸಾರಸ್ವತ ಲೋಕಕ್ಕೆ ನೀಡಿದ ಕೊಡುಗೆ ಅಪಾರ. ಕುವೆಂಪು ಅವರ ಸರಳತೆ, ವೈಚಾರಿಕತೆಯ ದೃಷ್ಟಿಕೋನ ಅವರ ಸಾಹಿತ್ಯದಲ್ಲಿಯೂ ವ್ಯಕ್ತವಾಗಿದೆ ಎಂದರು.