ಕುವೆಂಪು ಕನ್ನಡದ ಅಸ್ಮಿತೆ: ಡಾ.ಕಾವೇರಿ ಪ್ರಕಾಶ್

MDK02
Published on

ಮಡಿಕೇರಿ: ಇಪ್ಪತ್ತನೇ ಶತಮಾನದ ದೈತ್ಯ ಪ್ರತಿಭೆ, ವಿಶ್ವಮಾನವ ಎಂದು ಪ್ರಸಿದ್ಧರಾಗಿದ್ದ ಕೆ.ವಿ.ಪುಟ್ಟಪ್ಪ ಕುವೆಂಪು ಕನ್ನಡದ ಅಸ್ಮಿತೆ ಎಂದು ಮಡಿಕೇರಿ ಸರಕಾರಿ ಪದವಿ ಪೂರ್ವ ಕಾಲೇಜಿನ ಪ್ರಾಧ್ಯಾಪಕಿ ಡಾ.ಕಾವೇರಿ ಪ್ರಕಾಶ್ ಬಣ್ಣಿಸಿದರು.


ಕೊಡಗು ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ಮತ್ತು ಕೊಡಗು ಜಿಲ್ಲಾ ಲೇಖಕ ಮತ್ತು ಕಲಾವಿದರ ಬಳಗದ ಆಶ್ರಯದಲ್ಲಿ ಕೊಡಗು ಪತ್ರಿಕಾ ಭವನ ಟ್ರಸ್ಟ್ ಸಭಾಂಗಣದಲ್ಲಿ ಆಯೋಜಿಸಿದ್ದ ಕುವೆಂಪು ಜನ್ಮದಿನಾಚರಣೆ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಪಾಲ್ಗೊಂಡು ಮಾತನಾಡಿದರು.


ಕುವೆಂಪು ಆಂಗ್ಲ ಪ್ರಾಧ್ಯಾಪಕರಾಗಿದ್ದು, ಮೊದಲಿಗೆ ಆಂಗ್ಲ ಭಾಷೆಯಲ್ಲಿಯೇ ಕವನ, ಪ್ರಬಂಧಗಳನ್ನು ರಚಿಸಿ ಪ್ರಕಟಿಸಿದ್ದರು. ಅವರು ಆಂಗ್ಲ ವ್ಯಾಮೋಹದಿಂದ ಅಲ್ಲಿಯೇ ಉಳಿದಿದ್ದರೆ ಕನ್ನಡ ಸಾಹಿತ್ಯ ಲೋಕ ಎಷ್ಟು ವಿಧ್ಯಮಿಸುತ್ತಿರಲಿಲ್ಲ. ಅವರು ಕನ್ನಡ ಸಾಹಿತ್ಯ ಲೋಕದ ಭಾಗ್ಯ. ಕುವೆಂಪು ರಚಿಸಿದ ಸಾಹಿತ್ಯ ಪ್ರಕಾರಗಳಿಂದ ಶಿಶು ಸಾಹಿತ್ಯ ದಿಂದ ಹಿಡಿದು ವೈಚಾರಿಕತೆಯ ವರೆಗೂ ಸಾಹಿತ್ಯದ ಹಾಳಾಗಲವನ್ನು ವಿವರವಾಗಿ ಪ್ರಸ್ತುತಪಡಿಸಿದ್ದಾರೆ ಎಂದರು.


ಕೊಡಗು ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ಮತ್ತು ಕೊಡಗು ಜಿಲ್ಲಾ ಲೇಖಕ ಮತ್ತು ಕಲಾವಿದರ ಬಳಗದ ಅಧ್ಯಕ್ಷ ಎಂ.ಪಿ.ಕೇಶವ ಕಾಮತ್ ಮಾತನಾಡಿ, ಕುವೆಂಪು ಕವನಗಳು, ವಿಚಾರಧಾರೆ ಇಂದಿಗೂ ಪ್ರಸ್ತುತ ಅವರು ಪ್ರಸ್ತುತಪಡಿಸಿದ ವಿಶ್ವ ಮಾನವ ಸೂತ್ರ ಸರಿಯಾಗಿ ಅಳವಡಿಸಿಕೊಂಡರೆ ಜೀವನ, ದೇಶ ಎರಡು ಧನ್ಯ ಎಂದರು.


ಸೋಮವಾರಪೇಟೆ ಪದವಿ ಪೂರ್ವ ಕಾಲೇಜಿನ ಉಪನ್ಯಾಸಕಿ ತಿಲೋತ್ತಮೆ ನಂದ ಕುಮಾರ್ ಕುವೆಂಪು ಬದುಕು ಬರಹ ಕುರಿತು ಮಾತನಾಡಿ, ಕುವೆಂಪು, ಸ್ವಾಮಿ ವಿವೇಕಾನಂದರ ಹಲವಾರು ಕೃತಿಗಳನ್ನು ಕನ್ನಡೀಕರಿಸಿದ್ದಾರೆ. ತಮ್ಮ ಗ್ರಂಥಗಳಲ್ಲಿ ಯಾವುದೇ ಒಂದು ಪಾತ್ರವನ್ನು ಅರ್ಥವತ್ತಾಗಿ ಮನಮುಟ್ಟುವಂತೆ ಮಾಡುವ ಶೈಲಿ ಎಂದೆಂದಿಗೂ ಪ್ರಸ್ತುತ. ಮಾನವನ ಬುದ್ಧಿ ವಿಚಾರವಂತವಾಗಿರಬೇಕು. ಪ್ರತಿಭೆ ಭಾವನಾತ್ಮಕವಾಗಿರಬೇಕು. ಆಗ ಮಾತ್ರ ಬುದ್ಧಿ ಮತ್ತು ಪ್ರತಿಭೆಯ ಪ್ರಯೋಜನ ಜಗತ್ತಿಗೆ ಆಗುತ್ತದೆ ಎಂದರು.


ಹಿರಿಯ ಸಾಹಿತಿ, ಮದೆ ಪ್ರೌಢಶಾಲೆಯ ನಿವೃತ್ತ ಮುಖ್ಯೋಪಾಧ್ಯಾಯರಾದ ಬಿ.ಆರ್.ಜೋಯಪ್ಪ ಮಾತನಾಡಿದರು. ಕುವೆಂಪು ರಚಿತ ಗಾಯನವನ್ನು ಜಿಲ್ಲೆಯ ಉದಯೋನ್ಮುಕ ಗಾಯಕರಾದ ಸೆಲೋಮಿ ಶೀಲಾ, ಪಾಂಡಿ ಕೀರ್ತಿ ಗಿರೀಶ್, ರಕ್ಷಾ ಪ್ರಭಾಕರ್, ಅಮೃತ್ ರಾಜ್, ಅನಿತ್ ರಾಜ್, ಚೊಕ್ಕಾಡಿ ಪ್ರೇಮ ರಾಘವಯ್ಯ ಹಾಡಿದರು.


ಕಾರ್ಯಕ್ರಮದಲ್ಲಿ ಕೊಡಗು ಜಿಲ್ಲಾ ಲೇಖಕ ಮತ್ತು ಕಲಾವಿದರು ಬಳಗದ ಉಪಾಧ್ಯಕ್ಷೆ ರೇವತಿ ರಮೇಶ್, ಕೊಡಗು ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಕಾರ್ಯದರ್ಶಿ ಎಸ್.ಐ.ಮುನಿರ್ ಅಹ್ಮದ್, ಕುಶಾಲನಗರ ತಾಲೂಕು ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ಕೆ.ಎಸ್.ಮೂರ್ತಿ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net