ಜಾತ್ಯತೀತ ಮನೋಭಾವನೆ ಬಿತ್ತಿದ ಕುವೆಂಪು

3 hlk 1
Published on

ಹೊಳಲ್ಕೆರೆ: ಕುವೆಂಪು ಅವರು ತಮ್ಮ ಕೃತಿಗಳಲ್ಲಿ ವಿಶ್ವಮಾನವ ಸಂದೇಶ, ಜಾತ್ಯತೀತ ಮನೋಭಾವ ಬಿತ್ತುವ ಕೆಲಸ ಮಾಡಿದ್ದಾರೆ ಎಂದು ಹಿರಿಯ ಸಾಹಿತಿ ಚಂದ್ರಶೇಖರ್ ತಾಳ್ಯ ಹೇಳಿದರು.

ಪಟ್ಟಣದ ಎಂ.ಎಂ. ಸರ್ಕಾರಿ ಪದವಿಪೂರ್ವ ಕಾಲೇಜಿನಲ್ಲಿ ಕನ್ನಡ ಸಾಹಿತ್ಯ ಪರಿಷತ್ ಸಹಯೋಗದಲ್ಲಿ ಗುರುವಾರ ಹಮ್ಮಿಕೊಂಡಿದ್ದ ವಿಶ್ವಮಾನವ ದಿನಾಚರಣೆಯಲ್ಲಿ ಮಾತನಾಡಿದರು.

ಮೈಸೂರು ವಿಶ್ವವಿದ್ಯಾನಿಲಯದಲ್ಲಿ ಕನ್ನಡ ವಿಭಾಗದ ಮುಖ್ಯಸ್ಥರಾಗಿ ನಂತರ ಕುಲಪತಿಯಾಗಿ ಕೆಲಸ ಮಾಡಿದ ಕುವೆಂಪು ಮಾನಸ ಗಂಗೋತ್ರಿಯನ್ನು ಮಾದರಿ ವಿವಿಯನ್ನಾಗಿ ರೂಪಿಸಿದರು. ಕನ್ನಡದ ಮೂಲಕವೇ ಭಾರತ ಹಾಗೂ ವಿಶ್ವವನ್ನು ಕಂಡ ಅಪರೂಪದ ಮನುಷ್ಯ ಎಂದು ಬಣ್ಣಿಸಿದರು. ನಾವೆಲ್ಲರೂ ಮೌಢ್ಯಾಚರಣೆಗಳನ್ನು ಕೈ ಬಿಟ್ಟಾಗ ಮಾತ್ರ ವಿಶ್ವಮಾನವ ದಿನಾಚರಣೆಗೆ ಅರ್ಥ ಬರುತ್ತದೆ ಎಂದು ತಿಳಿಸಿದರು.

ಕನ್ನಡ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಸಾಹಿತಿ ಸಿದ್ದವ್ವನಹಳ್ಳಿ ವೀರೇಶ್‌ಕುಮಾರ್ ಮಾತನಾಡಿ, ಎಲ್ಲರ ಹೃದಯದ ಬಾಗಿಲನ್ನು ದರ್ಶಿಸಿ, ಬರೆದಂತೆ ಬದುಕಿ ವಿಶ್ವಮಾನವತೆಯನ್ನು ವಿಶ್ವಕ್ಕೆ ಸಾರಿದ ಕುವೆಂಪು ಜಗದ ಕವಿ, ಯುಗದ ಕವಿ ಎನಿಸಿಕೊಂಡ ಮಹಾ ಮಹಿಮರು ಎಂದು ಸ್ಮರಿಸಿದರು.

ಇಂದಿನ ಪ್ರಕ್ಷುಬ್ಧ ವಾತಾವರಣದಲ್ಲಿ ಬದುಕುತ್ತಿರುವ ನಮಗೆ ಕುವೆಂಪು ನೀಡಿದ ವಿಶ್ವಮಾನವ ಸಂದೇಶವಾದ ಮನುಜ ಮತ, ವಿಶ್ವಪಥ, ಸರ್ವೋದಯ, ಸಮನ್ವಯ, ಪೂರ್ಣ ದೃಷ್ಟಿ ಎಂಬ ಪಂಚ ಮಂತ್ರಗಳನ್ನು ಅಳವಡಿಸಿಕೊಂಡು ಅನಿಕೇತನರಾದಾಗ ಮಾತ್ರ ಸಮ ಸಮಾಜ ನಿರ್ಮಾಣವಾಗಲು ಸಾಧ್ಯವಾಗುತ್ತದೆ. ಅದು ನಾವು ಕುವೆಂಪು ಅವರಿಗೆ ಸಲ್ಲಿಸಬಹುದಾದ ದೊಡ್ಡ ಕಾಣಿಕೆ ಎಂದರು.

ಕಸಾಪ ಅಧ್ಯಕ್ಷ ಶಿವಮೂರ್ತಿ ಮಾತನಾಡಿ, ಕುವೆಂಪುರವರ ವಿಶ್ವಮಾನವ ತತ್ವ ಬಾಲ್ಯದಿಂದಲೇ ಬೇರೂರಬೇಕು ಎಂದು ತಿಳಿಸಿದರು.

ಜಿಲ್ಲಾ ಕನ್ನಡ ಸಾಹಿತ್ಯ ಸಮ್ಮೇಳನ ಹೊಳಲ್ಕೆರೆಯಲ್ಲಿ ನಡೆಯುತ್ತಿದ್ದು, ಎಲ್ಲರೂ ತನು, ಮನ, ಧನಗಳನ್ನು ಅರ್ಪಿಸಬೇಕು ಎಂದು ವಿನಂತಿಸಿಕೊಂಡರು.

ಅಧ್ಯಕ್ಷತೆ ವಹಿಸಿದ್ದ ಎಂ.ಎಂ. ಸರ್ಕಾರಿ ಪದವಿ ಪೂರ್ವ ಕಾಲೇಜಿನ ಪ್ರಾಂಶುಪಾಲ ಅಶೋಕ ಮಾತನಾಡಿ, ಮೌಲ್ಯಗಳು ಮರೆಯಾಗುತ್ತಿರುವ ೀ ಸಂದರ್ಭದಲ್ಲಿ ಕುವೆಂಪುರವರ ವಿಚಾರಧಾರೆಗಳು ಯುವ ಸಮುದಾಯಕ್ಕೆ ಅತ್ಯವಶ್ಯಕ ಎಂದು ತಿಳಿಸಿದರು.

ದೇವರಾಜಯ್ಯ, ನಾಗರಾಜ್ ರಾವ್, ಅಣ್ಣಪ್ಪ, ಶಿವಣ್ಣ, ನಾಗರಾಜ್ ಇತರರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net