ಬಸವಾದಿ ಶರಣರ ಸಾಲಿನಲ್ಲಿ ನಿಲ್ಲುವ ಶ್ರೇಷ್ಠ ವ್ಯಕ್ತಿತ್ವ ಕುವೆಂಪು

clk kuvempu janmadina
Published on

ಚಳ್ಳಕೆರೆ: ತಮ್ಮ ಅಪಾರ ವಿದ್ವತ್ತಿನ ಮೂಲಕ ಕನ್ನಡ ಸಾರಸ್ವತ ಲೋಕಕ್ಕೆ ಬಹುದೊಡ್ಡ ಕೊಡುಗೆ ನೀಡುವುದರ ಜತೆಗೆ ವಿಶ್ವ ಮಾನವ ಸಂದೇಶ ಸಾರಿದ ಕುವೆಂಪು ಬಸವಾದಿ ಶರಣ ಸಾಲಿನಲ್ಲಿ ನಿಲ್ಲುವ ಶ್ರೇಷ್ಠ ವ್ಯಕ್ತಿತ್ವದವರಾಗಿದ್ದಾರೆ ಎಂದು ನಿವೃತ್ತ ಕೆಎಎಸ್ ಅಧಿಕಾರಿ ಎನ್. ರಘುಮೂರ್ತಿ ಹೇಳಿದರು.

ನಗರದ ರೋಟರಿ ಬಾಲ ಭವನದಲ್ಲಿ ಭಾನುವಾರ ಕೊರ್ಲಕುಂಟೆ ಗ್ರಾಮದ ಕನ್ನಡ ಸಾಂಸ್ಕೃತಿಕ ಸಂಸ್ಥೆ ಹಮ್ಮಿಕೊಂಡದ್ದ ಕುವೆಂಪು ಜನ್ಮದಿನಾಚರಣೆ ಉದ್ಘಾಟಿಸಿ ಮಾತನಾಡಿದರು.

ಬಸವಣ್ಣನ ವಚನ, ಕುವೆಂಪು ಅವರ ಕಾವ್ಯ, ಕನಕದಾಸರ ಕೀರ್ತನೆ, ಡಿ.ವಿ. ಗುಂಡಪ್ಪ ಅವರ ತತ್ವಗಳನ್ನು ಮನನ ಮಾಡಿಕೊಳ್ಳುವ ಕೆಲಸ ಆಗಬೇಕು. ಸಾಹಿತ್ಯದ ವಿಚಾರಗಳನ್ನು ಪ್ರತಿ ಮನ, ಮನೆಗಳಿಗೆ ಕೊಂಡೊಯ್ಯವ ಕೆಲಸ ಆಗಬೇಕು. ಮನೆಯಲ್ಲಿ ಕವಿ, ಕಾವ್ಯ ಕುರಿತು ಮಾತನಾಡುವ ಸಂಸ್ಕೃತಿ ಬೆಳೆಯಬೇಕು ಎಂದು ತಿಳಿಸಿದರು.

ಗಂಡು ಮೆಟ್ಟಿನ ಚಿತ್ರದುರ್ಗದ ನೆಲದ ಶೌರ್ಯವನ್ನು ತರಾಸು ದುರ್ಗಾಸ್ತಮಾನ ಕೃತಿಯಲ್ಲಿ ದಾಖಲಿಸಿದ್ದಾರೆ. ಆದರೆ, ಎಷ್ಟು ಮನೆಗಳಲ್ಲಿ ಆ ಕೃತಿ ಕಾಣಲು ಸಾಧ್ಯ ಎಂದು ಪ್ರಶ್ನಿಸಿದರು.

ಸಂಸ್ಥೆ ಅಧ್ಯಕ್ಷ ಕೊರ್ಲಕುಂಟೆ ತಿಪ್ಪೇಸ್ವಾಮಿ ಮಾತನಾಡಿ, ಕಲುಷಿತಗೊಳ್ಳುತ್ತಿರುವ ಸಮಾಜಕ್ಕೆ ಸಾಹಿತ್ಯ ಚಿಂತನೆ ಅಗತ್ಯವಿದೆ. ಸಮಾಜವನ್ನು ಸರ್ವಜನಾಂಗದ ಶಾಂತಿಯ ತೋಟದಂತೆ ನೋಡಬೇಕಿದೆ ಎಂದು ಬಯಸಿದ ಮಹನೀಯರ ಚಿಂತನೆಗಳನ್ನು ಅರಿತುಕೊಳ್ಳುವ ಜಾಗೃತಿ ಎಲ್ಲರಲ್ಲಿ ಬೆಳೆಯಬೇಕಾಗಿದೆ ಎಂದು ತಿಳಿಸಿದರು.

ಬುದ್ಧ ವೇದಿಕೆ ಅಧ್ಯಕ್ಷ ಮೈತ್ರಿ ದ್ಯಾಮಣ್ಣ ಮಾತನಾಡಿ, ಜನರ ಬುದುಕಿನ ಚಿತ್ರಣವನ್ನು ಸಾಹಿತ್ಯ ಕೃತಿಗಳಲ್ಲಿ ತರುವಲ್ಲಿ ತಳಕು ಮತ್ತು ಬೆಳಗೆರೆ ಮನೆತನಗಳ ಕೊಡುಗೆ ಅನನ್ಯವಾಗಿದೆ ಎಂದರು.

ವಿಶ್ವಮಾನವನಾಗಿ ಹುಟ್ಟುವ ಮಗು, ಅಲ್ಪನಾಗುವ ಪರಿಸ್ಥಿತಿಗೆ ಸಮಾಜದ ವ್ಯವಸ್ಥೆ ಕಾರಣವಾಗಿದೆ. ಕುವೆಂಪು ಬರಹ ಸಮಾನತೆಯ ರೂಪಕವಾಗಿದೆ. ಅದನ್ನು ಉಳಿಸಿಕೊಳ್ಳುವ ಜವಾಬ್ದಾರಿ ನಮ್ಮದಾಗಬೇಕು ಎಂದು ತಿಳಿದರು.

ಕೆಪಿಸಿಸಿ ಕರಕುಶಲ ವಿಭಾಗದ ಅಧ್ಯಕ್ಷ ಆರ್. ಪ್ರಸನ್ನ ಕುಮಾರ್, ಕವಯತ್ರಿ ಶಬ್ರಿನ ಮಹಮ್ಮದ್ ಅಲಿ, ಬಿ. ಫರಿದ್ ಖಾನ್, ಬನಶ್ರೀ ಮಂಜುಳಮ್ಮ, ಕಲಾವಿದ ಪಗಡಲಬಂಡೆ ನಾಗೇಂದ್ರಪ್ಪ, ಗೋಪನಹಳ್ಳಿ ಶಿವಣ್ಣ, ಬೆಳಗೆರೆ ಸುರೇಶ್, ಎಚ್. ಲಂಕಪ್ಪ, ಜಾಲಿ ಮಂಜು, ಆರ್. ದ್ಯಾಮರಾಜ್, ಒನಕೆ ಓಬವ್ವ ವೇದಿಕೆ ಅಧ್ಯಕ್ಷ ಮಾರುತಿ, ಎನ್. ಕುಶ, ದುರ್ಗಾವರ ತಿಪ್ಪೇಸ್ವಾಮಿ, ರವಿವರ್ಮ, ಮುತ್ತುರಾಜ್ ಇತರರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net