ಕುವೆಂಪು ಮಹಾನ್ ಮಾನವತವಾದಿ: ಕ್ಷೇತ್ರ ಶಿಕ್ಷಣಾಧಿಕಾರಿ ಬಿ.ಚಂದ್ರಶೇಖರ್ ಬಣ್ಣನೆ

kuvempu birthday mandya
Published on

ಮಂಡ್ಯ: ರಾಷ್ಟ್ರಕವಿ ಕುವೆಂಪು ಅವರು ಸಮಾಜಕ್ಕೆ ವಿಶ್ವ ಮಾನವ ಸಂದೇಶವನ್ನು ಸಾರುವ ಮೂಲಕ ನಾಡನ್ನು ಉತ್ತುಂಗಕ್ಕೇರಿಸಿದ ಮಹಾನ್ ಮಾನವತವಾದಿ ಎಂದು ಕ್ಷೇತ್ರ ಶಿಕ್ಷಣಾಧಿಕಾರಿ ಬಿ.ಚಂದ್ರಶೇಖರ್ ಹೇಳಿದರು.

ಪಾಂಡವಪುರ ಪಟ್ಟಣದ ತಾಲೂಕು ಕಚೇರಿಯಲ್ಲಿ ಆಯೋಜಿಸಿದ್ದ ರಾಷ್ಟ್ರಕವಿ ಕುವೆಂಪು ಜಯಂತ್ಯುತ್ಸವದಲ್ಲಿ ಮಾತನಾಡಿದ ಅವರು, ಕುವೆಂಪು ಅವರು ಮಕ್ಕಳ ಕಾವ್ಯ, ಕಾದಂಬರಿ ಸೇರಿದಂತೆ ಅನೇಕ ಕಾವ್ಯ ಪ್ರಕಾರಗಳನ್ನು ರಚಿಸಿದ್ದಾರೆ. ಅದರಲ್ಲೂ ಶ್ರೀರಾಮಾಯಣ ದರ್ಶನಂ ಎಂಬ ಮಹಾಕಾವ್ಯವನ್ನು ರಚಿಸಿದ್ದಾರೆ. ಜತೆಗೆ ಮಲೆಗಳಲ್ಲಿ ಮಧುಮಗಳು ಎಂಬ ಕಾದಂಬರಿಯನ್ನು ಕೊಡುಗೆಯಾಗಿ ನೀಡಿದ್ದಾರೆ ಎಂದರು.

ಕುವೆಂಪು ಅವರು ತಮ್ಮ ಬಾಲ್ಯಶಿಕ್ಷಣವನ್ನು ತೀರ್ಥಹಳ್ಳಿಯಲ್ಲಿ ಮುಗಿಸಿ ನಂತರ ಪ್ರೌಢ ಶಿಕ್ಷಣ, ಪದವಿ ಹಾಗೂ ಸ್ನಾತಕೋತ್ತರ ಪದವಿಯನ್ನು ಮೈಸೂರಿನ ಮಹರಾಜ ಕಾಲೇಜಿನಲ್ಲಿ ಮುಗಿಸಿ ಅದೇ ಕಾಲೇಜಿನಲ್ಲಿ ಕನ್ನಡ ಅಧ್ಯಾಪಕರಾಗಿ ತಮ್ಮ ವೃತ್ತಿಯನ್ನು ಪ್ರಾರಂಭಿಸಿದರು. ಮೈಸೂರಿನ ಶೈಕ್ಷಣಿಕ ಕೇಂದ್ರ ಎಂದೇ ಪ್ರಸಿದ್ದಿಯಾದ ಮಾನಸ ಗಂಗೋತ್ರಿಯನ್ನು ಅವರ ಕಾಲದಲ್ಲಿಯೇ ಆರಂಭ ಮಾಡಿ ವಿದ್ಯಾರ್ಥಿಗಳಿಗೆ ಅನುಕೂಲ ಮಾಡಿದ್ದರು ಎಂದರು.

ತಹಸೀಲ್ದಾರ್ ಶ್ರೇಯಸ್ ಮಾತನಾಡಿ, ಮಗು ಹುಟ್ಟುವಾಗ ವಿಶ್ವಮಾನವನಾಗಿ ಹುಟ್ಟುತ್ತಾನೆ. ಆದರೆ ಬೆಳೆಯುತ್ತಾ ಅಲ್ಪಮಾನವನಾಗಿ ಬಿಡುತ್ತಾನೆ. ಹಾಗಾಗಿ ನಾವೆಲ್ಲರು ವಿಶ್ವ ಮಾನವರಾಗೋಣ ಎಂದು ಸಲಹೆ ನೀಡಿದರು.

ಗ್ರೇಡ್-2 ತಹಸೀಲ್ದಾರ್ ಸಂತೋಷ್, ರೈತ ಸಂಘದ ತಾಲೂಕು ಅಧ್ಯಕ್ಷ ಪಿ.ನಾಗರಾಜು, ದಸಂಸ ಮುಖಂಡ ಡಿ.ಕೆ.ಅಂಕಯ್ಯ, ಪುರಸಭೆ ಮುಖ್ಯಾಧಿಕಾರಿ ವೀಣಾ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net