

ಮಂಡ್ಯ: ರಸಋಷಿ ಕವಿ ಕುವೆಂಪು ಜನ್ಮದಿನಾಚರಣೆ ಅಂಗವಾಗಿ ಜಿಲ್ಲಾದ್ಯಂತ ನಮನ ಕಾರ್ಯಕ್ರಮ ಆಯೋಜಿಸಲಾಗಿತ್ತು. ಇದರೊಂದಿಗೆ ರಾಷ್ಟ್ರಕವಿಯನ್ನು ಸ್ಮರಿಸಿಕೊಳ್ಳಲಾಯಿತು.
ನಗರದ ಆರ್‌ಎಪಿಸಿಎಂಎಸ್ ಆವರಣದಲ್ಲಿರುವ ರಾಷ್ಟ್ರಕವಿ ಕುವೆಂಪು ಅವರ ಪ್ರತಿಮೆಗೆ ಜಿಲ್ಲಾಡಳಿತ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ, ನಗರಸಭೆ ವತಿಯಿಂದ ಮಾಲಾರ್ಪಣೆ ಮಾಡಲಾಯಿತು. ಅಪರ ಜಿಲ್ಲಾಧಿಕಾರಿ ಡಾ.ಎಚ್.ಎಲ್.ನಾಗರಾಜು ಮಾತನಾಡಿ, ಮಾನವೀಯತೆ ಸಮಾಜದಲ್ಲಿ ಉಳಿಯಬೇಕು. ಮೌಢ್ಯತೆ ದೂರವಾಗಬೇಕು ಎಂಬುದನ್ನು ತಮ್ಮ ಕಾವ್ಯ, ಮಹಾಕಾವ್ಯ, ನಾಟಕ, ಕಾದಂಬರಿಗಳ ಮೂಲಕ ಸಮಾಜಕ್ಕೆ ಕುವೆಂಪು ವಿಶ್ವಮಾನವ ಸಂದೇಶ ನೀಡಿದ್ದವರು ಎಂದು ಬಣ್ಣಿಸಿದರು.
ಆಡು ಮುಟ್ಟದ ಸೊಪ್ಪಿಲ್ಲ, ಕುವೆಂಪು ರಚಿಸದ ಸಾಹಿತ್ಯವಿಲ್ಲ. ಮನುಜಮತ, ವಿಶ್ವಪಥ, ಸರ್ವೋದಯ, ಸಮನ್ವಯ, ಪೂರ್ಣದೃಷ್ಠಿ ಎಂಬ ಪಂಚಮಂತ್ರ ವಿಶ್ವಕ್ಕೆ ಅವಶ್ಯಕ ಎಂದು ವಿಶ್ವಮಾನವ ಸಂದೇಶವನ್ನು ಕುವೆಂಪು ಅವರು ನೀಡಿದ್ದಾರೆ. ಆದ್ದರಿಂದ ಅವರನ್ನು ವ್ಯಕ್ತಿಯಾಗಿ ಸಂಕುಚಿತ ಭಾವನೆಯಲ್ಲಿ ನೋಡಬೇಡಿ, ದೊಡ್ಡ ದಾರ್ಶನಿಕರಾಗಿ ನೋಡಬೇಕು ಎಂದು ಸಲಹೆ ನೀಡಿದರು.
ತಹಸೀಲ್ದಾರ್ ಡಾ.ಶಿವಕುಮಾರ ಬಿರಾದರ್, ಅಪರ ಪೋಲಿಸ್ ವರಿಷ್ಠಾಧಿಕಾರಿ ತಿಮ್ಮಯ್ಯ, ಬಿ.ಜಿ.ಎಸ್ ಕಾಲೇಜಿನ ಪ್ರಾಧ್ಯಾಪಕ ಬೆಟ್ಟಸ್ವಾಮಿ, ಮುಖಂಡರಾದ ಎ.ಸಿ.ರಮೇಶ್, ಕಾರಸವಾಡಿ ಮಹದೇವು, ಬಿ.ಎಸ್.ಅನುಪಮಾ, ಜಿ.ಎನ್.ಕೆಂಪರಾಜು, ರತ್ನಮ್ಮ, ನೇತ್ರಾವತಿ, ಅರುಣಾ, ಸುಜಾತಾ ಕೃಷ್ಣ, ಲಂಕೇಶ್, ನಾಗರೇವಕ್ಕ, ಯಶೋಧ ಭಾಗವಹಿಸಿದ್ದರು.
ವಿವಿಧ ಸಂಘಟನೆಗಳಿಂದ ಆಚರಣೆ: ಆರ್‌ಎಪಿಸಿಎಂಎಸ್ ಆವರಣದಲ್ಲಿರುವ ರಾಷ್ಟ್ರಕವಿ ಕುವೆಂಪು ಅವರ ಪ್ರತಿಮೆಗೆ ಕನ್ನಡ ಸಾಹಿತ್ಯ ಪರಿಷತ್ ಜಿಲ್ಲಾ ಘಟಕ, ಕೃಷಿಕ ಲಯನ್ಸ್ ಸಂಸ್ಥೆ, ಪ್ರತಿಭಾಂಜಲಿ ಸುಗಮ ಸಂಗೀತ ಅಕಾಡೆಮಿ ಹಾಗೂ ವಿವಿಧ ಸಂಘಟನೆಗಳ ವತಿಯಿಂದ ಮಾಲಾರ್ಪಣೆ ಮಾಡಲಾಯಿತು.
ಕೃಷಿಕ ಲಯನ್ಸ್ ಸಂಸ್ಥೆ ಆಡಳಿತಾಧಿಕಾರಿ ಕೆ.ಟಿ.ಹನುಮಂತು ಮಾತನಾಡಿ, ಕುವೆಂಪು ಅವರು ವಿಶ್ವಮಾನವ ಸಂದೇಶವನ್ನು ಇಡೀ ಜಗತ್ತಿಗೆ ಸಾರಿದಂತವರು. ಯುವಕರು ಮೊಬೈಲ್ ಬಳಕೆಯನ್ನು ಕಡಿಮೆ ಮಾಡಿ ಕುವೆಂಪು ಅವರ ಸಾಹಿತ್ಯವನ್ನು ಹೆಚ್ಚು ಓದುವ ಕೆಲಸ ಮಾಡಬೇಕು. ಯುವಕರ ಜತೆಗೆ ಈಗಿನ ಕಾಲಘಟ್ಟದಲ್ಲಿ ಮಠಾಧೀಶರು, ರಾಜಕಾರಣಿಗಳು ಕುವೆಂಪು ವಿಚಾರಗಳನ್ನು ಅಳವಡಿಸಿಕೊಳ್ಳಬೇಕು. ಅವರ ಬಗ್ಗೆ ಎಷ್ಟು ಹೇಳಿದರೂ ಮುಗಿಯಲ್ಲ. ಮುಖ್ಯವಾಗಿ ನುಡಿದಂತೆ ನಡೆದವರು, ಬರೆದಂತೆ ಬದುಕಿ ತೋರಿಸಿಕೊಟ್ಟವರು ಎಂದು ಶ್ಲಾಘಿಸಿದರು.
ಕಸಾಪ ಜಿಲ್ಲಾ ಗೌರವ ಕಾರ್ಯದರ್ಶಿ ಹುಸ್ಕೂರು ಕೃಷ್ಣೇಗೌಡ ಮಾತನಾಡಿ, ವಿಶ್ವಮಾನವ ತತ್ವ ಅಳವಡಿಸಿಕೊಂಡರೆ ವಿಶ್ವದಲ್ಲೇ ಯುದ್ಧ ನಿಲ್ಲುತ್ತವೆ. ಜಾತಿ ಜಾತಿ ಹಾಗೂ ಧರ್ಮಗಳ ನಡುವಿನ ಕಲಹ ದೂರಾಗುತ್ತದೆ. ಕುವೆಂಪು ಅವರು ನಮಗೆ ವಿಶ್ವಮಾನವ ಸಂದೇಶವನ್ನು ನೀಡಿದ್ದಾರೆ. ಇವತ್ತು ವಿಶ್ವದ ಬೆರಳೆಣಿಕೆಯ ಕವಿಗಳ ಪಟ್ಟಿಯಲ್ಲಿ ನಮ್ಮ ಕನ್ನಡದ ಹೆಮ್ಮೆಯ ರಾಷ್ಟ್ರಕವಿ ಕುವೆಂಪು ನಿಲ್ಲುತ್ತಾರೆ. ಅಂದರೆ ಅವರ ಸಾಹಿತ್ಯ ಸೇವೆ ಬಹಳ ಅನನ್ಯವಾದದ್ದು ಎಂದರು.
ಇದೇ ಸಂದರ್ಭದಲ್ಲಿ ಸಾಹಿತಿ ಡಾ.ಮ.ರಾಮಕೃಷ್ಣ ಅವರಿಗೆ ವಿಶ್ವ ಮಾನವ ಪ್ರಶಸ್ತಿ ನೀಡಿ ಗೌರವಿಸಲಾಯಿತು. ಕಸಾಪ ಪದಾಧಿಕಾರಿಗಳಾದ ಧನಂಜಯ ದರಸಗುಪ್ಪೆ, ಬಿ.ಎಂ.ಅಪ್ಪಾಜಪ್ಪ, ಹೊಳಲು ಶ್ರೀಧರ್, ಎಂ.ಸಿ.ಭಾಸ್ಕರ್, ಸುಜಾತಾ ಕೃಷ್ಣ, ಚಂದ್ರಲಿಂಗು ಬಿ.ಜಿ.ಉಮಾ, ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಉಪನಿರ್ದೇಶಕ ಉದಯಕುಮಾರ್, ಪ್ರತಿಭಾಂಜಲಿ ಡೇವಿಡ್, ಬಲ್ಲೇನಹಳ್ಳಿ ಮಂಜುನಾಥ್ ಇತರರಿದ್ದರು.