ಕುವೆಂಪು ನಾಡುಕಂಡ ಶ್ರೇಷ್ಟ ದಾರ್ಶನಿಕ: ಲಯನ್ಸ್ ಮಾಜಿ ಗವರ್ನರ್ ಡಾ.ವಿ.ನಾಗರಾಜು ಭೈರಿ ಬಣ್ಣನೆ

kuvempu birthday kasapa mandya
Published on

ಮಂಡ್ಯ: ಕುವೆಂಪು ಅವರು ಅಖಂಡ ಕರ್ನಾಟಕದ ಏಕೀಕರಣದ ಕನಸನ್ನು ಕಂಡು ಹೋರಾಟ ಮಾಡಿದ, ಜ್ಞಾನಪೀಠ ಪ್ರಶಸ್ತಿ ಪಡೆದ ಮಹಾನ್ ಮಾನವತಾವಾದಿ ಜತೆಗೆ ಶ್ರೇಷ್ಟ ದಾರ್ಶನಿಕ ಎಂದು ಲಯನ್ಸ್ ಮಾಜಿ ಗವರ್ನರ್ ಡಾ.ವಿ.ನಾಗರಾಜ ಭೈರಿ ಬಣ್ಣಿಸಿದರು.

ನಗರದ ಆದರ್ಶ ಪದವಿ ಪೂರ್ವ ಕಾಲೇಜಿನಲ್ಲಿ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ಸಹಯೋಗದಲ್ಲಿ ಆಯೋಜಿಸಿದ್ದ ರಾಷ್ಟ್ರಕವಿ ಕುವೆಂಪು ಅವರ 120ನೇ ಜಯಂತ್ಯುತ್ಸವದಲ್ಲಿ ಮಾತನಾಡಿದ ಅವರು, ನಮ್ಮ ರಾಜ್ಯಕ್ಕೆ 1973ರಲ್ಲಿ ಕರ್ನಾಟಕ ಎಂದು ನಾಮಕರಣವಾದರೆ ಅದಕ್ಕಿಂತ ಎಷ್ಟೋ ವರ್ಷಗಳ ಹಿಂದೆ ಕರ್ನಾಟಕ ಎಂದು ನಾಡಗೀತೆಯನ್ನು ರಚಿಸಿರುವುದು ಅವರ ದಾರ್ಶನಿಕತೆಗೆ ದೂರದೃಷ್ಟಿಗೆ ಉದಾಹರಣೆಯಾಗಿ ನಿಲ್ಲುತ್ತದೆ ಎಂದರು.

ವ್ಯವಸ್ಥೆಯ ವಿರುದ್ಧ ದೊಡ್ಡ ಧ್ವನಿಯನ್ನು ಎತ್ತಿದವರು. ಆದರೂ ಜ್ಞಾನಪೀಠ, ಕರ್ನಾಟಕ ರತ್ನ, ಪದ್ಮಶ್ರೀ ಸೇರಿದಂತೆ ಉನ್ನತ ಪ್ರಶಸ್ತಿಗಳು ಸಂದಿರುವುದು ಅವರ ಶ್ರೇಷ್ಟತೆಯನ್ನು ಸೂಚಿಸುತ್ತದೆ. ಯಾವುದೇ ಚೌಕಟ್ಟು ನಿರ್ಮಿಸಿಕೊಳ್ಳದೇ ಕವಿಯಾಗಿ, ಸಾಹಿತಿ, ಕಾದಂಬರಿಕಾರ ಹಾಗೂ ವಿಮರ್ಶಕರಾಗಿ ಮೂಡಿಬಂದ ಬಹುಮುಖ ಪ್ರತಿಭೆ ಎಂದರು.

ಮಂಡ್ಯ ವಿವಿಯ ಪ್ರಾಧ್ಯಾಪಕ ಎಂ.ವೈ.ಶಿವರಾಮು ವಿಶೇಷ ಉಪನ್ಯಾಸ ನೀಡಿದರು. ಪ್ರಾಂಶುಪಾಲ ಎಲ್.ರವೀಂದ್ರನಾಥ್ ಅಧ್ಯಕ್ಷತೆ ವಹಿಸಿದ್ದರು. ಜಿಲ್ಲಾ ಕಸಾಪ ಗೌರವ ಕಾರ್ಯದರ್ಶಿ ಡಾ.ಕೃಷ್ಣೇಗೌಡ ಹುಸ್ಕೂರು, ಅಂಜನಾ ಶ್ರೀಕಾಂತ್, ಬಿ.ಎಂ.ಅಪ್ಪಾಜಪ್ಪ, ಧನಂಜಯ ದರಸಗುಪ್ಪೆ, ಹೊಳಲು ಶ್ರೀಧರ್, ಸುಜಾತಾ ಕೃಷ್ಣ, ಸಂಸ್ಥೆಯ ಡೀನ್ ಅಭಿಲಾಷ್ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net