

ಶಶಿ ಈಶ್ವರಮಂಗಲ
ಕಾಂಕ್ರೀಟ್ ಕಟ್ಟಡದ ಕೊಠಡಿಯೊಳಗೆ ಅಧ್ಯಯನ ನಿರತ ವಿದ್ಯಾರ್ಥಿಗಳಿಗಾಗುವ ಸೆಕೆ ಸಮಸ್ಯೆಗೆ ಪರಿಹಾರ ಕಂಡುಕೊಳ್ಳುವ ಪೂರಕ ವ್ಯವಸ್ಥೆ ಪುತ್ತೂರು ತಾಲೂಕಿನ ಕೆಯ್ಯೂರಿನ ಕರ್ನಾಟಕ ಪಬ್ಲಿಕ್ ಸ್ಕೂಲ್‌ನಲ್ಲಿ ಆಗಿದೆ. ಅದುವೇ ಪರಿಸರ ಸ್ನೇಹಿ ಕುಟೀರ.
ಕರ್ನಾಟಕ ಪಬ್ಲಿಕ್ ಸ್ಕೂಲ್ ಕೆಯ್ಯೂರಿನ ಕಾಲೇಜು ವಿಭಾಗದಲ್ಲಿ ಈ ಕುಟೀರ ವ್ಯವಸ್ಥೆ ಎದ್ದು ನಿಂತಿದೆ. ಮರದ ಕಂಬ ಅಳವಡಿಸಿ ಅದರ ಮೇಲೆ ಸೋಗೆಯ ಛಾವಣಿ ನಿರ್ಮಿಸಲಾಗಿದೆ. ಉದ್ಯಾನಕ್ಕೆ ಹಾಕುವ ಹಸಿರು ಶೇಡ್ ನೆಟ್ ಗೋಡೆಯ ಹಾಗೆ ಅಳವಡಿಸಿ ನಿರ್ಮಿಸಿರುವ ಕೊಠಡಿ ಪರಿಸರ ಸ್ನೇಹಿಯಾಗಿದೆ. ಕರ್ನಾಟಕ ಪಬ್ಲಿಕ್ ಸ್ಕೂಲ್ ಆಗಿ ಮಾರ್ಪಟ್ಟಿರುವ ಈ ವಿದ್ಯಾಸಂಸ್ಥೆಯಲ್ಲಿ ವಿದ್ಯಾರ್ಥಿಗಳ ಸಂಖ್ಯೆಯಲ್ಲೂ ಹೆಚ್ಚಳವಾಗಿದೆ.
ನಾಳೆ ಉದ್ಘಾಟನೆ: ಪರಿಸರ ಸ್ನೇಹಿ ಕೊಠಡಿಗಳ ಉದ್ಘಾಟನೆ, ದತ್ತಿನಿಧಿ ವಿತರಣೆ, ಉಚಿತ ಪುಸ್ತಕ ವಿತರಣೆ ಮತ್ತು ವಿದಾಯಕೂಟ ಏ.9ರಂದು ಮಧ್ಯಾಹ್ನ 3ಕ್ಕೆ ನಡೆಯಲಿದೆ. ಜಿಪಂ ಅಧ್ಯಕ್ಷೆ ಮೀನಾಕ್ಷಿ ಶಾಂತಿಗೋಡು ಉದ್ಘಾಟಿಸಲಿದ್ದು, ಶಾಸಕ ಸಂಜೀವ ಮಠಂದೂರು ಅಧ್ಯಕ್ಷತೆ ವಹಿಸುವರು. ನಿವೃತ್ತ ದೈಹಿಕ ಶಿಕ್ಷಣ ಶಿಕ್ಷಕ ವಿಶ್ವೇಶ್ವರ ಭಟ್ ಪಿ, ಪ್ರಾಥಮಿಕ ಶಾಲಾ ವಿಭಾಗದ ನಿಕಟಪೂರ್ವ ಎಸ್‌ಡಿಎಂಸಿ ಅಧ್ಯಕ್ಷ ಪ್ರಫುಲ್ಲಚಂದ್ರ ದಟ್ಟ ಅವರಿಗೆ ವಿದಾಯಕೂಟ ನಡೆಯಲಿದೆ.
ಕೊಠಡಿ ಕೊರತೆ: ಕಲೆ, ವಾಣಿಜ್ಯ, ವಿಜ್ಞಾನ ಈ ಮೂರು ವಿಭಾಗಗಳು ಇರುವ ಕಾಲೇಜಿಗೆ 6 ತರಗತಿ ಕೊಠಡಿ, 3 ಪ್ರಯೋಗಾಲಯ ಕೊಠಡಿ, 1 ಗ್ರಂಥಾಲಯ, 1 ಕಂಪ್ಯೂಟರ್ ಕೊಠಡಿ ಸೇರಿ 11 ಕೊಠಡಿಗಳ ಕೊರತೆಯಿದೆ. ಪ್ರೌಢಶಾಲಾ ವಿಭಾಗದಿಂದ 3 ಕೊಠಡಿಗಳನ್ನು ಎರವಲು ಪಡೆದು ಕಾಲೇಜು ತರಗತಿ ನಡೆಸಲಾಗುತ್ತಿದೆ. ಇಷ್ಟೊಂದು ಸಮಸ್ಯೆಯಿದ್ದರೂ ಇಲ್ಲಿಗೆ ಅನುದಾನ ಬಿಡುಗಡೆಯಾಗಿಲ್ಲ. ಆದರೂ ವಿದ್ಯಾರ್ಥಿಗಳ ಕಲಿಕೆಗೆ ತೊಂದರೆಯಾಗಬಾರದೆಂದು ಪ್ರಾಂಶುಪಾಲರು ಹಾಗೂ ಉಪನ್ಯಾಸಕ ವೃಂದದ ಆಲೋಚನೆ ಹಾಗೂ ಮಕ್ಕಳ ಮತ್ತು ಪಾಲಕರ ಪರಿಶ್ರಮದಿಂದ ಪರಿಸರ ಸ್ನೇಹಿ ಕೊಠಡಿ ರೂಪುಗೊಳಿಸಿದೆ.
ಮಕ್ಕಳಿಗೆ ಪ್ರಕೃತಿ ಸಹಜ ಬದುಕು ಮತ್ತು ಜೀವನ ಪಾಠ ಹೇಳಿಕೊಡುವ ಹಾಗೂ ಕಸದಿಂದ ರಸದ ಚಿಂತನೆಯೊಂದಿಗೆ ಪರಿಸರ ಸ್ನೇಹಿ ಕುಟೀರ ನಿರ್ಮಿಸಲಾಗಿದೆ. ಇದು ನಮ್ಮ ಕಲ್ಪನೆಯಾಗಿದ್ದರೂ ಕೆಲಸ ಮಾಡಿದವರು ಮಕ್ಕಳು ಮತ್ತು ಅವರ ಪಾಲಕರು. ಈ ವಿದ್ಯಾಸಂಸ್ಥೆಯಲ್ಲಿರುವ ಕೊಠಡಿಗಳ ಸಮಸ್ಯೆ ಬಗೆಹರಿಸುವ ನಿಟ್ಟಿನಲ್ಲಿ ಗಮನ ಸೆಳೆಯುವ ಪ್ರಯತ್ನವೂ ಇದಾಗಿದೆ. ಆನಂದ ಪಿ. ಪ್ರಾಂಶುಪಾಲ, ಕರ್ನಾಟಕ ಪಬ್ಲಿಕ್ ಸ್ಕೂಲ್ ಕೆಯ್ಯೂರು