ಕುಸುಮ್ ಯೋಜನೆಯಲ್ಲಿ 1 ಸಾವಿರಕ್ಕೂ ಹೆಚ್ಚು ಸೋಲಾರ್ ಪೀಡರ್

udp-22-sunil kumar
Published on

ಉಡುಪಿ: ರಾಜ್ಯ ಸರ್ಕಾರ ಕುಸುಮ್ ಯೋಜನೆ ಮೂಲಕ ರೈತರ ಸೋಲಾರ್ ಪಂಪ್‌ಸೆಟ್‌ಗಳಿಗೆ 1 ಸಾವಿರಕ್ಕೂ ಹೆಚ್ಚು ಸೋಲಾರ್ ಫೀಡರ್ ಅಳಡಿಸಲಾಗುತ್ತಿದ್ದು, ಇದರಿಂದ ರಾಜ್ಯದ 3.25 ಲಕ್ಷ ರೈತರಿಗೆ ಅನುಕೂಲವಾಗಲಿದೆ ಎಂದು ಇಂಧನ ಸಚಿವ ಸುನೀಲ್ ಕುಮಾರ್ ತಿಳಿಸಿದರು.

ಶನಿವಾರ ಪತ್ರಿಕಾ ಭವನದಲ್ಲಿ ಪತ್ರಕರ್ತರೊಂದಿಗೆ ಸಂವಾದ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು. ಹೊಸ ಸೋಲಾರ್ ಫೀಡರ್ ಮೂಲಕ ನೇರವಾಗಿ ಪಂಪ್‌ಸೆಟ್‌ಗಳಿಗೆ ವಿದ್ಯುತ್ ಟೆಂಡರ್ ಪ್ರಕ್ರಿಯೆ ಆರಂಭವಾಗಿದೆ ಎಂದರು.
1108 ಇವಿ ಚಾರ್ಜಿಂಗ್ ಪಾಯಿಂಟ್
ರಾಜ್ಯದಲ್ಲಿ 1108 ಇವಿ ಚಾಜಿಂಗ್ ಪಾಯಿಂಟ್ ಪ್ರಾರಂಭಿಸಲು ಉದ್ದೇಶಿಸಲಾಗಿದ್ದು, ಟೆಂಡರ್ ಪ್ರಕ್ರಿಯೆ ನಡೆಯುತ್ತಿದೆ. ಜಿಲ್ಲೆಯಲ್ಲಿ ಸುಮಾರು 12 ಕಡೆಗಳಲ್ಲಿ ಜಾರ್ಜಿಂಗ್ ಸೆಂಟರ್ ಆರಂಭವಾಗಲಿದೆ. ಈ ಮೂಲಕ ವಿದ್ಯುತ್ ಚಾಲಿತ ವಾಹನಗಳಿಗೆ ಹೆಚ್ಚಿನ ಒತ್ತು ನೀಡಲಾಗುವುದು. 210 ಟಿಸಿ ರಿಪೇರಿ ಕೇಂದ್ರ ಪ್ರಾರಂಭಿಸಲಾಗಿದ್ದು, ನ.1ರಿಂದ 15ರವರೆಗೆ ರಾಜ್ಯಾದ್ಯಂತ ಟಿಸಿ ನಿರ್ವಹಣಾ ಅಭಿಯಾನ ಮಾಡುತ್ತೇವೆ. ಬೇಸಿಗೆಯಲ್ಲಿ ವಿದ್ಯುತ್ ಸರಬರಾಜಿನಲ್ಲಿ ಯಾವುದೇ ತೊಂದರೆಯಾಗದಂತೆ ಕ್ರಮ ವಹಿಸಲಾಗುವುದು. ಕಳೆದ ವರ್ಷ ಅತೀ ಹೆಚ್ಚು 14,800 ಮೆಗಾವ್ಯಾಟ್ ಬೇಡಿಕೆ ಬಂದಿತ್ತು. ಈ ಬಾರಿಯೂ ಅದಕ್ಕನುಗುಣವಾಗಿ ಕಾರ್ಯನಿರ್ವಹಿಸಲಾಗುವುದು. ಬೆಳಕು ಯೋಜನೆಯಲ್ಲಿ ಒಂದು ವರ್ಷದಲ್ಲಿ 2.5 ಲಕ್ಷ ಮನೆಗಳಿಗೆ ವಿದ್ಯುತ್ ಸಂಪರ್ಕ ನೀಡಲಾಗಿದೆ. ಎಲ್ಲಾ ಸರ್ಕಾರಿ ಕಚೇರಿಗಳಿಗೆ ಪ್ರೀಪೇಡ್ ಮೀಟರ್ ಅಳವಡಿಸಲು ಸೂಚನೆ ನೀಡಲಾಗಿದೆ ಎಂದು ಮಾಹಿತಿ ನೀಡಿದರು.

ಈ ವರ್ಷದ ರಾಜ್ಯೋತ್ಸವ ಪ್ರಶಸ್ತಿಗೆ 28 ಸಾವಿರ ಹೆಸರುಗಳನ್ನು ಸಾರ್ವಜನಿಕರು ಶಿಫಾರಸ್ಸು ಮಾಡಿದ್ದಾರೆ. ಇವರಲ್ಲಿ 67 ಜನರನ್ನು ಆಯ್ಕೆ ಮಾಡಲಾಗುತ್ತದೆ. ತೆರೆಮರೆಯ ಸಾಧಕರನ್ನು ಗುರುತಿಸಲು, ಎಲ್ಲಾ ಜಿಲ್ಲೆಗಳಿಗೆ ಮತ್ತು 35 ಕಲಾಪ್ರಾಕಾರಗಳಿಗೆ ಆದ್ಯತೆ ನೀಡುವಂತೆ ತಿಳಿಸಿದ್ದೇನೆ ಎಂದರು. ದೈವ ನರ್ತಕರಿಗೆ 2 ಸಾವಿರ ಮಾಸಾಶನ ನೀಡಲು ನಿರ್ಧರಿಸಲಾಗಿದ್ದು, ಪ್ರತೀ ಜಿಲ್ಲೆಯಲ್ಲಿ 58 ವರ್ಷ ಮೇಲ್ಪಟ್ಟವರನ್ನು ಗುರುತಿಸುವ ಪ್ರಕ್ರಿಯೆ ನಡೆಯುತ್ತಿದೆ ಎಂದರು.
ಮಲ್ಲಿಕಾರ್ಜುನ ಖರ್ಗೆ ಕಾಂಗ್ರೆಸ್ ಅಧ್ಯಕ್ಷರಾಗಿರುವುದು ನೆಪ ಮಾತ್ರ. ಆಡಳಿತ ಮತ್ತು ನಿರ್ವಹಣೆ ಗಾಂಧಿ ಕುಟುಂಬದ ಕಪಿಮುಷ್ಟಿಯಲ್ಲಿಯೇ ಇರುತ್ತದೆ ಎಂದರು. ಭಗವದ್ಗೀತೆ ಜಿಹಾದ್ ಬೋಧಿಸುತ್ತದೆ ಎಂಬ ಕೇಂದ್ರದ ಮಾಜಿ ಗೃಹ ಸಚಿವ ಶಿವರಾಜ್ ಪಾಟೀಲ್ ಹೇಳಿಕೆ ಬಗ್ಗೆ ಕಾಂಗ್ರೆಸ್ ಸ್ಪಷ್ಟನೆ ನೀಡಬೇಕು ಎಂದು ಆಗ್ರಹಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net