ಕುಸುಬೆಗೆ ಸಿಗುತ್ತಿಲ್ಲ ಕಿಮ್ಮತ್ತು!

h3- Kusube 2
Published on

StartFragment

ಹುಬ್ಬಳ್ಳಿ: ಧಾರವಾಡ ಜಿಲ್ಲೆಯಲ್ಲಿ ಈ ಬಾರಿ ಕುಸುಬೆ ಇಳುವರಿ ಉತ್ತಮವಾಗಿದೆ. ಆದರೆ, ಫಸಲು ಕೈಸೇರುವ ಈ ಹೊತ್ತಿನಲ್ಲಿ ಮಾರುಕಟ್ಟೆಯಲ್ಲಿ ದರ ಕುಸಿದಿದೆ. ಹೀಗಾಗಿ, ಬೆಳೆಗಾರರಲ್ಲಿ ಆತಂಕ ಸೃಷ್ಟಿಸಿದೆ.

ಸದ್ಯ ಹುಬ್ಬಳ್ಳಿ ಎಪಿಎಂಸಿ ಮಾರುಕಟ್ಟೆಯಲ್ಲಿ ಕುಸುಬೆ ಬೆಲೆ ಕ್ವಿಂಟಾಲ್​ಗೆ ಗರಿಷ್ಠ 4300 ರೂಪಾಯಿಗೆ ಮಾರಾಟವಾಗುತ್ತಿದೆ. ಕುಸುಬೆ ಎಣ್ಣೆಗೆ ಮಾರುಕಟ್ಟೆಯಲ್ಲಿ ಉತ್ತಮ ಬೆಲೆ ಇದೆ. ಆದರೂ, ಇದರ ತಯಾರಿಕೆಗೆ ಬೇಕಾದ ಕುಸುಬೆಯ ದರ ಇಳಿಕೆಯಾಗಿರುವುದು ಅಚ್ಚರಿ ಮೂಡಿಸಿದೆ. ಕೇಂದ್ರ ಸರ್ಕಾರ ಘೋಷಣೆ ಮಾಡಿದ ಬೆಂಬಲ ಬೆಲೆಗಿಂತಲೂ ಕಡಿಮೆ ಮೊತ್ತವನ್ನು ಟೆಂಡರ್​ನಲ್ಲಿ ಹಾಕುತ್ತಿರುವುದರಿಂದ ರೈತರಿಗೆ ಅನ್ಯಾಯವಾಗುತ್ತಿದೆ.

ಕೇಂದ್ರ ಸರ್ಕಾರ ಪ್ರತಿ ಕ್ವಿಂಟಾಲ್ ಕುಸುಬೆಗೆ 5327 ರೂಪಾಯಿ ಬೆಂಬಲ ಬೆಲೆ ಘೋಷಣೆ ಮಾಡಿದೆ. ಆದರೆ, ಎಪಿಎಂಸಿಯಲ್ಲಿ ಇದಕ್ಕಿಂತ ಒಂದೆರಡು ಸಾವಿರ ರೂಪಾಯಿ ಕಡಿಮೆ ಬೆಲೆ ಇರುವುದರಿಂದ ರೈತರು ನಷ್ಟ ಅನುಭವಿಸಬೇಕಾಗಿದೆ.

ಎಣ್ಣೆಬೀಜ ಬೆಳೆಯಾದ ಕುಸುಬೆಗೆ ಈ ವರ್ಷದ ಹಿಂಗಾರು ಹಂಗಾಮು ಅನುಕೂಲಕರ ವಾತಾವರಣ ಒದಗಿಸಿದ್ದರಿಂದ ಉತ್ತಮ ಫಸಲು ಬಂದಿದೆ. ಧಾರವಾಡ ಜಿಲ್ಲೆಯಲ್ಲಿ ಈ ವರ್ಷದ (2020-21) ಹಿಂಗಾರಿನಲ್ಲಿ 9179 ಹೆಕ್ಟೇರ್​ನಲ್ಲಿ ಕುಸುಬೆ ಬಿತ್ತನೆಯಾಗಿತ್ತು. ಅಂದಾಜು 94,235 ಕ್ವಿಂಟಾಲ್ ಉತ್ಪಾದನೆಯಾಗುವ ನಿರೀಕ್ಷೆ ಇದೆ. ಈಗಾಗಲೇ ಅರ್ಧಕ್ಕಿಂತ ಹೆಚ್ಚು ಫಸಲು ಕಟಾವ್ ಆಗಿದ್ದು, ಇನ್ನೆರಡು ವಾರದಲ್ಲಿ ಪೂರ್ತಿಗೊಳ್ಳಲಿದೆ. ಅಷ್ಟರೊಳಗೆ ಬೆಂಬಲ ಬೆಲೆಯಡಿ ಖರೀದಿ ಆರಂಭಿಸಬೇಕು ಎಂದು ರೈತರು ಸರ್ಕಾರಕ್ಕೆ ಒತ್ತಾಯಿಸಿದ್ದಾರೆ.

ಎಲ್ಲೆಲ್ಲಿ ಬಿತ್ತನೆ?

ಧಾರವಾಡ ಜಿಲ್ಲೆಯ ಕುಂದಗೋಳ ತಾಲೂಕಿನಲ್ಲಿ ಹೆಚ್ಚಿನ ಪ್ರಮಾಣದಲ್ಲಿ ಕುಸುಬೆ ಬೆಳೆಯಲಾಗುತ್ತದೆ. ಈ ವರ್ಷ ಕುಂದಗೋಳದಲ್ಲಿ 5107 ಹೆಕ್ಟೇರ್​ನಲ್ಲಿ ಸುಮಾರು 53,600 ಕ್ವಿಂಟಾಲ್ ಇಳುವರಿಯ ನಿರೀಕ್ಷೆ ಇದೆ. ಇದೇ ರೀತಿ ನಂತರದ ಸ್ಥಾನ ಹುಬ್ಬಳ್ಳಿ ತಾಲೂಕಿಗೆ ಇದೆ. ಇಲ್ಲಿ ಸುಮಾರು 2300 ಹೆಕ್ಟೇರ್​ನಲ್ಲಿ ಅಂದಾಜು 23,000 ಕ್ವಿಂಟಾಲ್ ಬೆಳೆ ಬರುವ ನಿರೀಕ್ಷೆ ಇದೆ. ನವಲಗುಂದದಲ್ಲಿ 1109 ಹೆಕ್ಟೇರ್​ನಲ್ಲಿ ಸುಮಾರು 11645 ಕ್ವಿಂಟಾಲ್ ಹಾಗೂ ಧಾರವಾಡ ತಾಲೂಕಿನಲ್ಲಿ 663 ಹೆಕ್ಟೇರ್​ನಲ್ಲಿ 5967 ಕ್ವಿಂಟಾಲ್ ಬೆಳೆ ಬರುವ ನಿರೀಕ್ಷೆ ಇದೆ. ಕಲಘಟಗಿಯಲ್ಲಿ ಕುಸುಬೆ ಬಿತ್ತನೆಯಾಗಿಲ್ಲ.

ಕುಸುಬೆ ಬೆಳೆ ಕೈಗೆ ಬರುವ ಹೊತ್ತಿಗೆ ಮಾರುಕಟ್ಟೆಯಲ್ಲಿ ಬೆಲೆ ಕುಸಿದಿರುವುದರಿಂದ ನಷ್ಟವಾಗುತ್ತಿದೆ. ಈಗಾಗಲೇ ಕೇಂದ್ರ ಸರ್ಕಾರ ಬೆಂಬಲ ಬೆಲೆ ಘೋಷಣೆ ಮಾಡಿದ್ದು, ರಾಜ್ಯ ಸರ್ಕಾರ ಕೂಡಲೆ, ಖರೀದಿ ಕೇಂದ್ರ ಆರಂಭಿಸಿ ರೈತರ ನೆರವಿಗೆ ಬರಬೇಕು.| ಪರ್ವತಗೌಡ ಪಾಟೀಲ ರೈತ

ಬೆಂಬಲ ಬೆಲೆಯಡಿ ಕುಸುಬೆ ಖರೀದಿ ಮಾಡಬೇಕೆಂದು ರೈತ ಸಂಘದ ಪದಾಧಿಕಾರಿಗಳು ಇಲಾಖೆಗೆ ಮನವಿ ಮಾಡಿದ್ದಾರೆ. ರೈತರ ಕೋರಿಕೆಯನ್ನು ಮೇಲಧಿಕಾರಿಗಳಿಗೆ ಕಳುಹಿಸಲಾಗಿದೆ.| ರಾಜಶೇಖರ ಅಣಗೌಡರಸಹಾಯಕ ಕೃಷಿ ನಿರ್ದೇಶಕರು, ಹುಬ್ಬಳ್ಳಿ

EndFragment

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net