

ನಂಜನಗೂಡು : ಕ್ರೀಡೆಗಳಲ್ಲಿ ಸೋಲು, ಗೆಲುವನ್ನು ಸಮಾನವಾಗಿ ಸ್ವೀಕರಿಸಬೇಕು ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ. ವಿಜಯೇಂದ್ರ ಹೇಳಿದರು.
ನಗರದ ಶ್ರೀ ನಂಜುಂಡೇಶ್ವರ ಸ್ವಾಮಿ ದೇವಾಲಯದ ದಾಸೋಹ ಭವನದ ಆವರಣದಲ್ಲಿ ಪ್ರಧಾನಿ ನರೇಂದ್ರ ಮೋದಿ ಹುಟ್ಟು ಹಬ್ಬದ ಅಂಗವಾಗಿ ಮೋದಿಜೀ ಅಭಿಮಾನಿಗಳ ಬಳಗ ಭಾನುವಾರ ಹಮ್ಮಿಕೊಂಡಿದ್ದ ನಾಡ ಕುಸ್ತಿ ಪಂದ್ಯಾವಳಿ ಉದ್ಘಾಟಿಸಿ ಮಾತನಾಡಿ, ದೇಶದ ಹೆಮ್ಮೆಯ ಪ್ರಧಾನಿ ಮೋದಿ ಜನ್ಮದಿನದ ಅಂಗವಾಗಿ ದೇಶಾದ್ಯಂತ ಹಲವಾರು ಆಚರಣೆ ಮಾಡುತ್ತಿದ್ದಾರೆ. ನಂಜನಗೂಡಿನಲ್ಲೂ ಅವರ ಅಭಿಮಾನಿಗಳ ಬಳಗವು ಕುಸ್ತಿ ಪಂದ್ಯಾವಳಿ ಆಯೋಜನೆ ಮಾಡಿರುವುದು ವಿಶೇಷವಾಗಿದೆ ಎಂದರು.
ಇತಿಹಾಸ ಹೊಂದಿರುವ ಕುಸ್ತಿಯನ್ನು ಯುವ ಪೀಳಿಗೆಯೂ ಮುನ್ನಡೆಸಿಕೊಂಡು ಹೋಗಬೇಕು. ಗ್ರಾಮೀಣ ಭಾಗದ ಕ್ರೀಡೆಗಳಲ್ಲಿ ಸ್ಪರ್ಧಿಗಳು ಭಾಗವಹಿಸುವುದು ಮುಖ್ಯವಾಗುತ್ತದೆ. ವಿಶೇಷವಾಗಿ ಮೈಸೂರು ಭಾಗದಲ್ಲಿ ಕುಸ್ತಿ ಕ್ರೀಡೆಯು ಪ್ರಸಿದ್ಧಿ ಹೊಂದಿದ್ದು, ಆಧುನಿಕ ಕಾಲದಲ್ಲೂ ಈ ರೀತಿಯ ಪಂದ್ಯಗಳನ್ನು ಹೆಚ್ಚು ಆಯೋಜನೆ ಮಾಡುವ ಕೆಲಸವಾಗಬೇಕು ಎಂದರು.
ಅಧ್ಯಕ್ಷತೆ ವಹಿಸಿದ್ದ ಮಾಜಿ ಶಾಸಕ ಬಿ. ಹರ್ಷವರ್ಧನ್ ಮಾತನಾಡಿ, ಕುಸ್ತಿ ಪಂದ್ಯಾವಳಿಗೆ ಸಾವಿರಾರು ವರ್ಷಗಳು ಇತಿಹಾಸವಿದೆ. ಗ್ರಾಮೀಣ ಭಾಗದಲ್ಲಿ ಇದನ್ನು ಉಳಿಸುವ ಪ್ರಯತ್ನ ನಿರಂತರವಾಗಿ ನಡೆಯುತ್ತಿದೆ. ಕ್ರೀಡೆಗಳಲ್ಲಿ ಸೋಲು ಗೆಲುವು ಸಾಮಾನ್ಯ. ಅದನ್ನು ಮನಸ್ಸಿನಲ್ಲಿ ಇಟ್ಟುಕೊಳ್ಳದೆ ಗುರಿಯನ್ನು ತಲುಪುವುದು ಮುಖ್ಯ ಎಂದರು.
ಶಾಸಕ ಟಿ. ಎಸ್. ಶ್ರೀವತ್ಸ, ಮಾಜಿ ಶಾಸಕರಾದ ಎಲ್.ನಾಗೇಂದ್ರ, ಬಿಜೆಪಿ ರಾಜ್ಯ ಹಿಂದುಳಿದ ವರ್ಗಗಳ ಘಟಕದ ಅಧ್ಯಕ್ಷ ರಘು ಕೌಟಿಲ್ಯ, ಬಿಜೆಪಿ ಗ್ರಾಮಾಂತರ ಜಿಲ್ಲಾಧ್ಯಕ್ಷ ಕುಂಬರಹಳ್ಳಿ ಸುಬ್ಬಣ್ಣ, ಜಿಲ್ಲಾ ಮಾಜಿ ಅಧ್ಯಕ್ಷ ಮಹದೇವಸ್ವಾಮಿ, ಬಿಜೆಪಿ ನಗರ ಮಂಡಲ ಅಧ್ಯಕ್ಷ ಸಿದ್ದರಾಜು, ನಗರಸಭಾ ಸದಸ್ಯ ಮಹದೇವ ಪ್ರಸಾದ್, ಬಿಜೆಪಿ ಗ್ರಾಮಾಂತರ ಘಟಕ ಅಧ್ಯಕ್ಷ ಕೆಂಡಗಣ್ಣಪ್ಪ, ಹೆಮ್ಮರಗಾಲ ಸೋಮಣ್ಣ, ಸಿಂಧುವಳ್ಳಿ ಕೆಂಪಣ್ಣ, ಸಿದ್ದರಾಜು ಇತರರು ಭಾಗವಹಿಸಿದ್ದರು.