ಡಿಜಿಟಲೀಕರಣದಿಂದ ರೈತರಿಗೆ ಅನುಕೂಲ, ಶಾಸಕ ದೊಡ್ಡನಗೌಡ ಪಾಟೀಲ್ ಹೇಳಿಕೆ

Laptop Distribution
ಕುಷ್ಟಗಿಯ ತಹಸಿಲ್ ಕಚರಿಯಲ್ಲಿ ಸೋಮವಾರ ಏರ್ಪಡಿಸಿದ್ದ ಡಿಜಿ ದಾಖಲೆಗಳ ವಿತರಣೆ ಕಾರ್ಯಕ್ರಮದಲ್ಲಿ ಶಾಸಕ ದೊಡ್ಡನಗೌಡ ಪಾಟೀಲ್ ಗ್ರಾಮ ಲೆಕ್ಕಾಧಿಕಾರಿಗಳಿಗೆ ಲ್ಯಾಪ್‌ಟಾಪ್ ವಿತರಿಸಿದರು. ತಹಸೀಲ್ದಾರ್ ಅಶೋಕ ಶಿಗ್ಗಾವಿ, ಕಂದಾಯ ಇಲಾಖೆ ಸಿಬ್ಬಂದಿ ಇದ್ದರು.
Published on

ಕುಷ್ಟಗಿ: ಡಿಜಿಟಲೀಕರಣದಿಂದ ಭೂ ದಾಖಲೆಗಳ ರಕ್ಷಣೆಯಾಗಲಿದೆ ಎಂದು ವಿಧಾನಸಭೆ ವಿರೋಧ ಪಕ್ಷದ ಮುಖ್ಯ ಸಚೇತಕ, ಶಾಸಕ ದೊಡ್ಡನಗೌಡ ಪಾಟೀಲ್ ಹೇಳಿದರು.

ಪಟ್ಟಣದ ತಹಸಿಲ್ ಕಚೇರಿಯಲ್ಲಿ ಸೋಮವಾರ ಭೂ ಸುರಕ್ಷಾ ಯೋಜನೆ ಅಡಿ ಗ್ರಾಮ ಲೆಕ್ಕಾಧಿಕಾರಿಗಳಿಗೆ ಲ್ಯಾಪ್‌ಟಾಪ್ ಹಾಗೂ ರೈತರಿಗೆ ಡಿಜಿ ದಾಖಲೆ ವಿತರಿಸಿ ಮಾತನಾಡಿದರು.

ಡಿಜಿಟಲೀಕರಣಕ್ಕೂ ಮುನ್ನ ಭೂ ದಾಖಲೆಗಳ ಸಂರಕ್ಷಣೆ ಕಷ್ಟಸಾಧ್ಯವಾಗಿತ್ತು. ತೀರಾ ಹಳೆಯ ಕಡತಗಳಲ್ಲಿನ ದಾಖಲೆಗಳು ಮಳೆ ನೀರು ಸೋರಿಕೆ, ಬೆಂಕಿ ಅವಘಡಗಳಲ್ಲಿ ಹಾಳಾಗುವ ಸಂಭವವಿತ್ತು. ಹಳೆಯ ಎಲ್ಲ ದಾಖಲೆಗಳನ್ನು ಸ್ಕಾೃನ್ ಮಾಡಿ ಡಿಜಿಟಲೀಕರಣಗೊಳಿಸಿರುವುದರಿಂದ ರೈತರಿಗೆ ಮಾತ್ರವಲ್ಲದೆ ಕಂದಾಯ ಇಲಾಖೆಯ ಅಧಿಕಾರಿಗಳಿಗೂ ಅನುಕೂಲವಾಗಿದೆ. ಅಭಿಲೇಖಾಲಯ ಸಿಬ್ಬಂದಿ ರೈತರಿಗೆ ಯಾವುದೇ ರೀತಿಯ ತೊಂದರೆಯಾಗದಂತೆ ಸಂಯಮದಿಂದ ವರ್ತಿಸಿ ಅವರಿಗೆ ಬೇಕಾದ ದಾಖಲೆಗಳ ಕಡತ ನೀಡುವ ಕಾರ್ಯ ಮಾಡಬೇಕಿದೆ ಎಂದರು.

ತಹಸೀಲ್ದಾರ್ ಅಶೋಕ ಶಿಗ್ಗಾವಿ ಮಾತನಾಡಿ, ಒಟ್ಟು 76 ಸಾವಿರ ಕಡತಗಳಲ್ಲಿ 40 ಸಾವಿರ ಕಡತಗಳನ್ನು ಡಿಜಿಟಲೀಕರಣಗೊಳಿಸಲಾಗಿದೆ. ತಾಲೂಕಿನಲ್ಲಿ ಕಾರ್ಯನಿರ್ವಹಿಸುತ್ತಿರುವ ಗ್ರಾಮ ಲೆಕ್ಕಾಧಿಕಾರಿಗಳ ಪೈಕಿ 12ಅಧಿಕಾರಿಗಳಿಗೆ ಡಿಜಿ ದಾಖಲೆ ವಿತರಣೆಗಾಗಿ ಲ್ಯಾಪ್‌ಟಾಪ್ ವಿತರಿಸಲಾಗಿದೆ. ಹಂತ ಹಂತವಾಗಿ ಎಲ್ಲ ಗ್ರಾಮ ಲೆಕ್ಕಾಧಿಕಾರಿಗಳಿಗೂ ವಿತರಿಸಲಾಗುವುದು ಎಂದರು.

ಹನುಮಸಾಗರ ಉಪ ತಹಸೀಲ್ದಾರ್ ಶರಣಯ್ಯ ನಿಡಗುಂದಿಮಠ, ಶಿರಸ್ತೇದಾರರಾದ ಅನಂತಕುಮಾರ, ವಿಜಯಾ ಮುಂಡರಗಿ, ರಾಜೇಶ್ವರಿ, ಕಂದಾಯ ನಿರೀಕ್ಷಕರಾದ ಶರಣಪ್ಪ ದಾಸರ್, ಅಬ್ದುಲ್ ರಜಾಕ್, ಉಮೇಶ ಗೌಡ್ರ, ಸುಂದರರಾಜ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net