

ಕುಷ್ಟಗಿ: ಸಾರಿಗೆ ನೌಕರರ ಮುಷ್ಕರದಿಂದಾಗಿ ತಾಲೂಕಿನ ವಿವಿಧ ಗ್ರಾಮಗಳ ಜನರು ಖಾಸಗಿ ವಾಹನಗಳನ್ನು ಅವಲಂಬಿಸಿದ್ದಾರೆ. ಸರಕು ಸಾಗಣೆ ವಾಹನಗಳು ಕೂಡ ಪ್ರಯಾಣಿಕರಿಗೆ ಆಸರೆಯಾಗಿವೆ. ಆದರೆ, ದೂರದ ಊರುಗಳಿಗೆ ತೆರಳುವವರು ಖಾಸಗಿ ವಾಹನಗಳು ಕೂಡ ಇಲ್ಲದೆ ಪರದಾಡುತ್ತಿದ್ದಾರೆ.
ಭಾನುವಾರ ಪಟ್ಟಣದಲ್ಲಿ ವಾರದ ಸಂತೆ ಇದ್ದು, ಗ್ರಾಮಸ್ಥರು ಅಗತ್ಯ ವಸ್ತುಗಳ ಖರೀದಿಗೆ ಬಂದು ಹೋಗಲು ತೀವ್ರ ತೊಂದರೆ ಅನುಭವಿಸಿದರು. ಖಾಸಗಿ ವಾಹನದವರು ಸಾಮರ್ಥ್ಯಕ್ಕಿಂತ ಹೆಚ್ಚಿನ ಪ್ರಯಾಣಿಕರನ್ನು ಕರೆದುಕೊಂಡು ಹೋಗುತ್ತಿದ್ದಾರೆ. ಬೇಸಿಗೆ ಸೆಖೆಯ ನಡುವೆಯೂ ಜನರು ಅನಿವಾರ್ಯವಾಗಿ ಪ್ರಯಾಣಿಸುತ್ತಿದ್ದಾರೆ. ಬಸ್ ನಿಲ್ದಾಣಗಳಲ್ಲಿ ಖಾಸಗಿ ವಾಹನಗಳ ಚಾಲಕರು ಪ್ರಯಾಣಿಕರನ್ನು ಕರೆದೊಯ್ಯಲು ಪರಸ್ಪರ ಪೈಪೋಟಿಗಿಳಿದು ಜಗಳವಾಡುವ ಪರಿಸ್ಥಿತಿ ಕಂಡುಬರುತ್ತಿದೆ.
ಪಟ್ಟಣದ ಸಾರಿಗೆ ಘಟಕ ವ್ಯವಸ್ಥಾಪಕ ಸಂತೋಷ ಕುಮಾರ್ ಶೆಟ್ಟಿ ಹಾಗೂ ಸಂಚಾರಿ ನಿರೀಕ್ಷಕರ ತಂಡ ವಿವಿಧ ಗ್ರಾಮಗಳಿಗೆ ತೆರಳಿ ಸಾರಿಗೆ ನೌಕರರನ್ನು ಕರ್ತವ್ಯಕ್ಕೆ ಹಾಜರಾಗುವಂತೆ ಮನವೊಲಿಸುತ್ತಿದ್ದಾರೆ. ಮನವೊಲಿಕೆಯಿಂದಾಗಿ ಕೆಲವು ಸಿಬ್ಬಂದಿ ಕೆಲಸಕ್ಕೆ ಹಾಜರಾಗಲು ಸಮ್ಮತಿಸಿದ್ದು ಹೆಚ್ಚಿನ ಮಾರ್ಗಗಳಲ್ಲಿ ಬಸ್ ಸಂಚಾರ ಆರಂಭಿಸಲಾಗುವುದು ಎಂದು ಸಂತೋಷ ಕುಮಾರ್ ಶೆಟ್ಟಿ ತಿಳಿಸಿದರು.