

ಕುಷ್ಟಗಿ: ಪಟ್ಟಣದ ಕರ್ನಾಟಕ ಗ್ರಾಮೀಣ ಬ್ಯಾಂಕ್ ಮುಂದಿನ ಹಾಗೂ ಪೊಲೀಸ್ ಠಾಣೆ ಹಿಂಭಾಗದಿಂದ ರಾಷ್ಟೀಯ ಹೆದ್ದಾರಿಗೆ ಸಂಪರ್ಕಿಸುವ ರಸ್ತೆಗಳ ಸಿಸಿ ಕಾಮಗಾರಿ ನನೆಗುದಿಗೆ ಬಿದ್ದಿದ್ದು, ಕಾಮಗಾರಿಗೆಂದು ರಸ್ತೆ ಅಗೆದು ಕೈಬಿಟ್ಟಿರುದರಿಂದ ವಾಹಗಳ ಓಡಾಟಕ್ಕೂ ತೊಂದರೆಯಾಗಿ, ಪಾದಚಾರಿಗಳೂ ಪರದಾಡುವಂತಾಗಿದೆ.
ಕಲ್ಯಾಣ ಕರ್ನಾಟಕ ಪ್ರದೇಶಾಭಿವೃದ್ಧಿ ಯೋಜನೆಯ 3 ಕೋಟಿ ರೂ. ಅನುದಾನದಲ್ಲಿ ಪಟ್ಟಣದ 1-7ನೇ ವಾರ್ಡ್‌ನ ವಿವಿಧ ರಸ್ತೆಗಳ ಸಿಸಿ ಕಾಮಗಾರಿ ಕೈಗೆತ್ತಿಕೊಳ್ಳಲಾಗಿತ್ತು.
ರಸ್ತೆ ಪಕ್ಕದ ಒತ್ತುವರಿ ತೆರವುಗೊಳಿಸದೇ ಕಾಮಗಾರಿ ಆರಂಭಿಸಿದ್ದರಿಂದ ಕರ್ನಾಟಕ ಗ್ರಾಮೀಣ ಬ್ಯಾಂಕ್ ಮುಂಭಾಗದ ರಸ್ತೆಯ ಕಾಮಗಾರಿಗೆ ಸಾರ್ವಜನಿಕರು ಆಕ್ಷೇಪ ವ್ಯಕ್ತಪಡಿಸಿದ್ದರು. ಅದಾದ ಬಳಿಕ ಕಳೆದ ಜೂ.19ರಂದು ಒತ್ತುವರಿ ತೆರವುಗೊಳಿಸಲು ಮುಂದಾದ ಪುರಸಭೆ ಅಧಿಕಾರಿಗಳು ರಸ್ತೆ ಪಕ್ಕದ ಕಟ್ಟಡಗಳ ಕಟ್ಟೆಗಳನ್ನು ಜೆಸಿಬಿಯಿಂದ ತೆರವುಗೊಳಿಸಿದರು.
ಸಾರ್ವಜನಿಕರ ಅಳಲು
ಕರ್ನಾಟಕ ಗ್ರಾಮೀಣ ಬ್ಯಾಂಕ್ ರಸ್ತೆಯಲ್ಲಿದ್ದ ಕೆಲ ಮನೆಗಳ ಕಾಂಪೌಂಡ್ ಗೋಡೆ ಹಾಗೂ ರಸ್ತೆಗೆ ವ್ಯಾಪಿಸಿರುವ ಗೋಡೆಯ ಭಾಗವನ್ನು ತೆರವುಗೊಳಿಸದೇ ಕಾರ್ಯಾಚರಣೆ ನಿಲ್ಲಿಸಲಾಗಿತ್ತು. ಪ್ರಭಾವಿಗಳ ಒತ್ತಡಕ್ಕೆ ಮಣಿದ ಅಧಿಕಾರಿಗಳು ಕಾರ್ಯಾಚರಣೆ ಸ್ಥಗಿತಗೊಳಿಸಿದ್ದಾರೆ ಎಂಬ ಮಾತುಗಳು ಕೇಳಿಬಂದಿದ್ದು, ಇತ್ತ ಒತ್ತುವರಿ ಕಾರ್ಯ ಸ್ಥಗಿತಗೊಂಡು ಕಾಮಗಾರಿಯೂ ನಡೆಯದಿರುವುದು ಸಂಚಾರಕ್ಕೆ ಅಡ್ಡಿಯನ್ನುಂಟು ಮಾಡಿದೆ ಎಂದು ಸಾರ್ವಜನಿಕರು ಅಲವತ್ತುಕೊಳ್ಳುತ್ತಿದ್ದಾರೆ.
ಪುರಸಭೆ ವಿರುದ್ಧ ಶಾಪ
ಇನ್ನು, ಪೊಲೀಸ್ ಠಾಣೆಯ ಹಿಂಭಾಗದ ಹೆದ್ದಾರಿಗೆ ಸಂಪರ್ಕಿಸುವ ರಸ್ತೆಯಲ್ಲಿ ಕಂಕರ್ ಹಾಕಿ ಅರೆ-ಬರೆ ಕಾಮಗಾರಿ ಕೈಗೊಂಡಿರುವುದರಿಂದ ನಿತ್ಯ ರಸ್ತೆಯಲ್ಲಿ ಓಡಾಡುವ ಸಾರ್ವಜನಿಕರು ಪುರಸಭೆ ವಿರುದ್ಧ ಹಿಡಿ ಶಾಪ ಹಾಕುತ್ತಿದ್ದಾರೆ. ರಸ್ತೆಯ ಹೆದ್ದಾರಿಗೆ ಹೊಂದಿಕೊಂಡು ನಿವೇಶನ ಇರುವುದಾಗಿ ನಿವಾಸಿಯೊಬ್ಬರು ಆಕ್ಷೇಪ ವ್ಯಕ್ತಪಡಿಸಿರುವುದು ಕಾಮಗಾರಿ ಸ್ಥಗಿತಕ್ಕೆ ಕಾರಣವಾಗಿದೆ. ನಿವೇಶನ ಇರುವುದು ಗೊತ್ತಿದ್ದು, ಕ್ರಿಯಾಯೋಜನೆ ರೂಪಿಸಿ ಕಾಮಗಾರಿ ಆರಂಭಿಸಿರುವ ಪುರಸಭೆ ವಿರುದ್ಧ ಸಾರ್ವಜನಿಕರು ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ.
=============
ಕರ್ನಾಟಕ ಗ್ರಾಮೀಣ ಬ್ಯಾಂಕ್ ಮುಂಭಾಗದ ರಸ್ತೆಯಲ್ಲಿ ಒತ್ತುವರಿ ತೆರವು ಕಾರ್ಯ ಬಾಕಿ ಇದೆ. ಕಾರ್ಯಾಚರಣೆ ಕೈಗೊಂಡು ಕಾಮಗಾರಿ ಕೈಗೊಳ್ಳಲಾಗುವುದು. ಹೆದ್ದಾರಿಗೆ ಸಂಪರ್ಕಿಸುವ ಪೊಲೀಸ್ ಠಾಣೆಯ ಹಿಂಭಾಗದ ರಸ್ತೆಯಲ್ಲಿ ನಿವೇಶನ ಇರುವುದಾಗಿ ಆಕ್ಷೇಪ ವ್ಯಕ್ತಪಡಿಸಿದ್ದ ನಿವಾಸಿ ರಸ್ತೆ ನಿರ್ಮಾಣಕ್ಕೆ ಅನುಕೂಲ ಮಾಡಿಕೊಡುವುದಾಗಿ ತಿಳಿಸಿದ್ದು, ಆ ರಸ್ತೆಯ ಕಾಮಗಾರಿಯೂ ಆರಂಭಿಕೊಳ್ಳಲಿದೆ.
> ಮಹಾಂತೇಶ ಕಲಬಾವಿ, ಅಧ್ಯಕ್ಷ, ಪುರಸಭೆ ಕುಷ್ಟಗಿ
====
ಯಾರ ಒತ್ತಡಕ್ಕೂ ಮಣಿಯದೆ ಒತ್ತುವರಿ ತೆರವುಗೊಳಿಸಲಾಗುವುದು. ಯೋಜನೆಯಂತೆ ರಸ್ತೆ ಕಾಮಗಾರಿ ನಡೆಯಲಿದೆ.
> ದೊಡ್ಡನಗೌಡ ಪಾಟೀಲ್, ಶಾಸಕ, ಕುಷ್ಟಗಿ