

ಕುಷ್ಟಗಿ: ಪ್ರೌಢಶಾಲಾ ವಿದ್ಯಾರ್ಥಿಗಳಲ್ಲಿ ಮಾಹಿತಿ ತಂತ್ರಜ್ಞಾನ ಸೇರಿದಂತೆ ವಿವಿಧ ವೃತ್ತಿಪರ ಕೌಶಲಗಳ ಅಭಿವೃದ್ಧಿಗಾಗಿ ಸರ್ಕಾರ ರೂಪಿಸಿರುವ ಯೋಜನೆಗೆ ಆರಂಭಿಕ ಹಿನ್ನಡೆ ಉಂಟಾಗಿದ್ದು, ಕಳೆದ ಶೈಕ್ಷಣಿಕ ವರ್ಷದಲ್ಲಿ 2ತಿಂಗಳು ಅತಿಥಿಗಳಾಗಿ ಬೋಧಿಸಿರುವ ಶಿಕ್ಷಕರು ಸಂಬಳದ ನಿರೀಕ್ಷೆಯಲ್ಲಿ ಈಗಲೂ ಕಾಯುತ್ತ ಕುಳಿತ್ತಿದ್ದಾರೆ. ಇತ್ತ ವೃತ್ತಿಪರ ಕೌಶಲಗಳನ್ನು ಕರಗತ ಮಾಡಿಕೊಳ್ಳುವ ವಿದ್ಯಾರ್ಥಿಗಳ ಉತ್ಸಾಹಕ್ಕೆ ತಣ್ಣೀರೆರಚಿದಂತಾಗಿದೆ.
ಪ್ರೌಢಶಾಲೆಯ 9ನೇ ತರತಿಯ ಮಕ್ಕಳಿಗೆ ತೃತೀಯ ಭಾಷೆ ಹಿಂದಿ ಬದಲು ಮಾಹಿತಿ ತಂತ್ರಜ್ಞಾನ, ಬ್ಯೂಟೀಶಿಯನ್, ಆಟೋ ಮೊಬೈಲ್ ಸೇರಿದಂತೆ ವಿವಿಧ ವೃತ್ತಿಪರ ಕೌಶಲ ಕಲಿಸಲು ಎನ್‌ಎಸ್‌ಕ್ಯೂಎಫ್(ನ್ಯಾಷನಲ್ ಸ್ಕಿಲ್ ಕ್ವಾಲಿಫಿಕೇಷನ್ ಫ್ರೇಮ್‌ವರ್ಕ್) ತರಗತಿಗಳನ್ನು ಆರಂಭಿಸುವ ನೂತನ ಯೋಜನೆ ರೂಪಿಸಲಾಗಿದೆ.
ಬಿಎಸ್‌ಸಿ, ಬಿಸಿಎ, ಡಿಪ್ಲೊಮಾ ಪದವಿ ಜತೆಗೆ ಶಿಕ್ಷಕರ ತರಬೇತಿ ಪೂರ್ಣಗೊಳಿಸಿದ ಹಾಗೂ ಪೂರ್ಣರೂಪದ ತಂತ್ರಜ್ಞಾನ ಆಧಾರಿತ ಕಲಿಕಾ ಕಾರ್ಯಕ್ರಮ (ಟಲ್ಪ್) ತರಬೇತಿ ಪಡೆದ ಶಿಕ್ಷಕರನ್ನು ಬೋಧನೆಗೆ ನೇಮಕ ಮಾಡಿಕೊಳ್ಳಲಾಗುತ್ತಿದೆ. ಆರಂಭದಲ್ಲಿ ಅತಿಥಿಗಳನ್ನಾಗಿ ನೇಮಕ ಮಾಡಿಕೊಳ್ಳಲು ನಿರ್ಧರಿಸಿರುವ ಸರ್ಕಾರ, ಮಾಸಿಕ 10500ರೂ. ವೇತನ ನಿಗದಿಗೊಳಿಸಿದೆ. 9ನೇ ತರಗತಿಗೆ ಆರಂಭವಾಗುವ ತರಗತಿಗಳು ಪೈಲೆಟ್ ರೀತಿಯಲ್ಲಿ ಪಿಯು ಹಂತದ ವರೆಗೂ ಮುಂದುವರಿಯಲಿವೆ. ಇದರಿಂದ ವಿದ್ಯಾರ್ಥಿಗಳು ಭವಿಷ್ಯದಲ್ಲಿ ಸ್ವಾವಲಂಬಿ ಜೀವನ ನಡೆಸಲು ಸಾಧ್ಯವಾಗುತ್ತದೆ ಎಂಬುದು ಯೋಜನೆ ಉದ್ದೇಶವಾಗಿದೆ.
ಕಳೆದ ಶೈಕ್ಷಣಿಕ ವರ್ಷದ ಫೆಬ್ರುವರಿ ಹಾಗೂ ಮಾರ್ಚ್ ಈ ಎರಡು ತಿಂಗಳಿಗೆ ಅತಿಥಿ ಶಿಕ್ಷಕರನ್ನು ನೇಮಕ ಮಾಡಿಕೊಂಡು ತರಗತಿ ನಡೆಸಲಾಗಿದೆ. ಕಲಬುರಗಿ ವಿಭಾಗದಲ್ಲಿನ ಒಟ್ಟು 1008 ಆಯ್ದ ಶಾಲೆಗಳು ಸೇರಿ ರಾಜ್ಯದ ವಿವಿಧ ಶಾಲೆಗಳಲ್ಲಿ ಎರಡು ತಿಂಗಳು ತರಗತಿ ನಡೆದಿವೆ. ಪ್ರಸಕ್ತ ವರ್ಷದಲ್ಲಿ ಶಿಕ್ಷಕರನ್ನು ನೇಮಕ ಮಾಡಿಕೊಳ್ಳಲು ರಾಜ್ಯಮಟ್ಟದಲ್ಲಿ ಟೆಂಡರ್ ಪ್ರಕ್ರಿಯೆ ನಡೆದಿದೆಯಾದರೂ ಪ್ರಕ್ರಿಯೆಗೆ ಬ್ರೇಕ್ ಹಾಕಿರುವ ಸರ್ಕಾರ, ಮುಂದಿನ ಆದೇಶದ ವರೆಗೆ ತೃತೀಯ ಭಾಷೆಯಾಗಿ ಹಿಂದಿಯನ್ನೇ ಬೋಧಿಸುವಂತೆ ರಾಜ್ಯದ ಎಲ್ಲ ಡಯಟ್ ಮುಖ್ಯಸ್ಥರಿಗೆ ಮೌಖಿಕ ಆದೇಶ ನೀಡಿದೆ. ಎರಡು ತಿಂಗಳು ಕೆಲಸ ಮಾಡಿದ ಅತಿಥಿ ಶಿಕ್ಷಕರಿಗೆ ಈವರೆಗೆ ವೇತನ ಪಾವತಿಸದಿರುವುದು ಆ ಎಲ್ಲ ಶಿಕ್ಷಕರನ್ನು ಕಳೆದ 5ತಿಂಗಳಿನಿಂದ ಇಲಾಖೆ ಕಚೇರಿಗಳಿಗೆ ತಡಕಾಡುವಂತೆ ಮಾಡಿದೆ.
ಎನ್‌ಎಸ್‌ಕ್ಯೂಎಫ್ ಅಡಿ ಕಲಿಸಲು ಅತಿಥಿ ಶಿಕ್ಷಕರನ್ನು ನೇಮಕ ಮಾಡಿಕೊಳ್ಳಲು ಸರ್ಕಾರ ಆದೇಶಿಸಿತ್ತು. ಅದರಂತೆ ಕಳೆದ ಶೈಕ್ಷಣಿಕ ವರ್ಷದ ಎರಡು ತಿಂಗಳಿಗೆ ಶಿಕ್ಷಕರನ್ನು ನೇಮಕ ಮಾಡಿಕೊಳ್ಳಲಾಗಿತ್ತು. ಮುಂದಿನ ಆದೇಶದ ವರೆಗೆ ಎನ್‌ಎಸ್‌ಕ್ಯೂಎಫ್ ಬದಲಿಗೆ ಹಿಂದಿ ಭಾಷೆಯನ್ನೇ ತೃತೀಯ ಭಾಷೆಯನ್ನಾಗಿ ಕಲಿಸುವಂತೆ ಸರ್ಕಾರ ಮೌಖಿಕ ಆದೇಶ ನೀಡಿದೆ. ಹೊಸತನದ ಚಟುವಟಿಕೆಗಳಿಗೆ ಬಳಕೆ ಮಾಡುವಂತೆ ಸರ್ಕಾರದಿಂದ ಹಣ ಬಿಡುಗಡೆಯಾಗಿದೆ. ಈ ಹಣವನ್ನು ಎರಡು ತಿಂಗಳು ಕೆಲಸ ಮಾಡಿದ ಅತಿಥಿ ಶಿಕ್ಷಕರ ವೇತನಕ್ಕೆ ಬಳಕೆ ಮಾಡುವಂತೆ ಮೌಖಿಕವಾಗಿ ತಿಳಿಸಲಾಗಿತ್ತು. ಇದೀಗ ಬೇರೆ ಲೆಕ್ಕ ಶೀರ್ಷಿಕೆ ಅಡಿ ಅನುದಾನ ನೀಡುವುದಾಗಿ ಲಿಖಿತ ಸೂಚನೆ ನೀಡಿರುವುದರಿಂದ ಶಿಕ್ಷಕರಿಗೆ ವೇತನ ನೀಡಿಲ್ಲ.
ಎಲ್.ಡಿ.ಜೋಶಿ
ಡಯಟ್ ಪ್ರಾಚಾರ್ಯ ಕೊಪ್ಪಳ
ಕೊಪ್ಪಳದ 38 ಸೇರಿ ಕಲಬುರಗಿ ವಿಭಾಗದ ಒಟ್ಟು 1008 ಆಯ್ದ ಪ್ರೌಢಶಾಲೆಗಳಲ್ಲಿ 9ನೇ ತರಗತಿ ವಿದ್ಯಾರ್ಥಿಗಳಿಗೆ ಮಾಹಿತಿ ತಂತ್ರಜ್ಞಾ ನ ಹಾಗೂ ವೃತ್ತಿಪರ ಕೌಶಲ ಕಲಿಸಲಾಗುತ್ತಿದೆ. ಈ ತರಗತಿಗಳು ಪಿಯು ಹಂತದ ವರೆಗೆ ಮುಂದುವರಿಯಲಿವೆ. ಎರಡು ತಿಂಗಳು ಕೆಲಸ ಮಾಡಿದ ಅತಿಥಿ ಶಿಕ್ಷಕರಿಗೆ ಶೀಘ್ರದಲ್ಲಿ ವೇತನ ಪಾವತಿಯಾಗಲಿದೆ.
ಸೋಮಶೇಖರಗೌಡ
ಡಿಡಿಪಿಐ, ಶಾಲಾ ಶಿಕ್ಷಣ ಇಲಾಖೆ, ಕೊಪ್ಪಳ