ಹೆರಿಗೆ ಭತ್ಯೆ ನೀಡುವುದಾಗಿ ಹೇಳಿ ವಂಚನೆ

Published on

ಕುಷ್ಟಗಿ: ಹೆರಿಗೆ ಭತ್ಯೆ ಹಾಕುವುದಾಗಿ ನಂಬಿಸಿ ಪಟ್ಟಣದ ಗರ್ಭಿಣಿಯ ಬ್ಯಾಂಕ್ ಖಾತೆಯಲ್ಲಿದ್ದ 68 ಸಾವಿರ ರೂ.ಗಳನ್ನು ಅಪರಿಚಿತ ವ್ಯಕ್ತಿಯೊಬ್ಬ ಬುಧವಾರ ದೋಚಿದ್ದಾನೆ.

ಪಟ್ಟಣದ ವಿದ್ಯಾಶ್ರೀ ಪ್ರತಾಪಕುಮಾರ ಹಿರೇಮಠ ಹಣ ಕಳೆದುಕೊಂಡವರು. ಶಿಶು ಅಭಿವೃದ್ಧಿ ಇಲಾಖೆಯಿಂದ ಮಾತನಾಡುತ್ತಿರುವುದಾಗಿ ವಿದ್ಯಾಶ್ರೀಗೆ ಕರೆ ಮಾಡಿದ ವ್ಯಕ್ತಿ, ಹೆರಿಗೆ ಭತ್ಯೆ ಮಂಜೂರಾಗಿದೆ. ಫೋನ್ ಪೇ ಓಪನ್ ಮಾಡಿ ನಾವು ಹೇಳಿದಂತೆ ಆಪರೇಟ್ ಮಾಡಿ 12 ಸಾವಿರ ರೂ. ಜಮಾ ಆಗುತ್ತದೆ ಎಂದು ಹೇಳಿದ್ದಾನೆ.

ಆಗ ಮಹಿಳೆ ಫೋನ್ ಪೇ ತೆರೆದು ವ್ಯಕ್ತಿ ಹೇಳಿದಂತೆ ಆಪರೇಟ್ ಮಾಡುತ್ತಿದ್ದಂತೆ ಖಾತೆಯಲ್ಲಿದ್ದ ಹಣ ಕಡಿತಗೊಂಡಿದೆ. ಪತ್ನಿಗೆ ಈ ರೀತಿ ವಂಚಿಸಿರುವ ವ್ಯಕ್ತಿಯನ್ನು ಪತ್ತೆ ಹಚ್ಚಿ ಹಣ ಹಿಂತಿರುಗಿಸಿಕೊಡಿ ಎಂದು ಪ್ರತಾಪಕುಮಾರ್ ಸೈಬರ್ ಕ್ರೈಂ ವಿಭಾಗಕ್ಕೆ ದೂರು ನೀಡಿದ್ದಾರೆ.

ಇದೇ ರೀತಿ ಕರೆ ಮಾಡಿ ತಾಲೂಕಿನ ಕಡೇಕೊಪ್ಪ ಗ್ರಾಮದ ಯಂಕಪ್ಪ ಹಳೇಮನಿ ಎನ್ನುವವರ ಖಾತೆಯಲ್ಲಿದ್ದ 91 ಸಾವಿರ ರೂ. ಎಗರಿಸಿರುವ ಘಟನೆಯೂ ನಡೆದಿದೆ. ಈ ಸಂಬಂಧ ಪಟ್ಟಣ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net