ದುಡಿಮೆಯ ಹಾದಿ ಬದಲಿಸಿದ ಕರೊನಾ!

02082020 Kustagi graduate to work NAREGA
Published on

ಖಾತ್ರಿ ಕೆಲಸಕ್ಕೆ ಹೊರಟ ಅತಿಥಿ ಶಿಕ್ಷಕ, ಉಪನ್ಯಾಸಕರು, ಲಾರಿ ಚಾಲನೆಗೂ ಸೈ

ವಿಶ್ವನಾಥ ಸೊಪ್ಪಿಮಠ

ಕುಷ್ಟಗಿ: ಜಗತ್ತಿನ ಜನರ ಜೀವನ ಶೈಲಿಯನ್ನೇ ಬದಲಿಸಿದೆ ಕರೊನಾ. ಅದಕ್ಕಿಂತ ಹೆಚ್ಚಾಗಿ ಹಲವರ ಬದುಕಿನ ದಿಕ್ಕನ್ನೇ ಬದಲಿಸಿದ ಪರಿಣಾಮದಿಂದ ಬಹುತೇಕರು ಕೆಲಸ ಕಳೆದುಕೊಂಡು ಜೀವನ ನಿರ್ವಹಣೆಗೆ ನಾನಾ ಪಡಿಪಾಟಿಲು ಪಡುತ್ತಿದ್ದಾರೆ.

ಕರೊನಾ ಸಂಕಷ್ಟದಿಂದ ಬೀದಿಗೆ ಬಂದ ಹಲವು ಕುಟುಂಬಗಳ ಪೈಕಿ ಖಾಸಗಿ ಶಾಲೆಗಳ ಅರೆಕಾಲಿಕ ಶಿಕ್ಷಕರು ಹಾಗೂ ಸರ್ಕಾರಿ ಶಾಲೆಗಳ ಅತಿಥಿ ಶಿಕ್ಷಕರು ಜೀವನ ನಿರ್ವಹಣೆಗೆ ಕೂಲಿ ಕೆಲಸದ ಮೊರೆ ಹೋಗಿದ್ದಾರೆ. ಕೆಲವರು ವ್ಯಾಪಾರ, ಕೃಷಿಯಲ್ಲಿ ತೊಡಗಿಸಿಕೊಂಡು ದುಡಿಮೆಯ ಹಾದಿ ಕಂಡುಕೊಂಡಿದ್ದಾರೆ.

ಕೈಹಿಡಿದ ಖಾತ್ರಿ ಕೆಲಸ: ತಾಲೂಕಿನ ಗ್ರಾಮೀಣ ಭಾಗದ ಸರ್ಕಾರಿ ಶಾಲೆಗಳ ಬಹುತೇಕ ಅತಿಥಿ ಶಿಕ್ಷಕರು ಉದ್ಯೋಗ ಖಾತ್ರಿ ಯೋಜನೆಯಡಿ ಕೆರೆ ಹೂಳೆತ್ತುವುದು, ಬದು ನಿರ್ಮಾಣದಂಥ ಕಾಮಗಾರಿಗಳಲ್ಲಿ ಕೆಲಸ ಮಾಡುತ್ತಿದ್ದಾರೆ. ಕೆಲವರು ಮೇಟಿ(ಮೇಲ್ವಿಚಾರಕ) ಕೆಲಸ ಮಾಡುತ್ತಿದ್ದಾರೆ. ಖಾತ್ರಿ ಯೋಜನೆಯ ಕಾಮಗಾರಿಗಳಲ್ಲಿ ಕೆಲಸ ಮಾಡುತ್ತಿದ್ದೇವೆಂದು ಹೆಮ್ಮೆಯಿಂದ ಹೇಳಿಕೊಳ್ಳುತ್ತಿರುವ ಅತಿಥಿ ಶಿಕ್ಷಕರು ದುಡಿಮೆಗೆ ಯಾವ ಕೆಲಸವಾದರೇನು? ಹೊಟ್ಟೆಪಾಡು ನಡೀಬೇಕಲ್ಲ ಎನ್ನುತ್ತಿದ್ದಾರೆ. ತಾಲೂಕಿನ ಹೊಮ್ಮಿನಾಳ ಭಾಗದಲ್ಲಿ ಕೂಲಿ ಹಾಗೂ ಮೇಟಿ ಕೆಲಸ ಮಾಡುತ್ತಿರುವ ಈಶಪ್ಪ, ಹನುಮಂತ ಜಿನ್ನಾಪುರ, ಶರಣು ಬೊಮ್ಮನಾಳ, ಕೆ.ಅಮರ್ ಸದ್ಯ ಕೆರೆ ಹೂಳೆತ್ತುವ ಕಾರ್ಯದಲ್ಲಿ ತೊಡಗಿಕೊಂಡಿದ್ದಾರೆ. ಮಾವಿನ ಇಟಗಿ ಶಾಲೆಯ ಅತಿಥಿ ಶಿಕ್ಷಕ ಮಲ್ಲನಗೌಡ ಪೊಲೀಸ್ ಪಾಟೀಲ್, ಅಮರಾಪುರದ ಲಕ್ಷ್ಮಣ ಹೊಸಮನಿ, ಹೀಗೆ ಹಲವು ಭಾವಿ ಶಿಕ್ಷಕರಲ್ಲದೆ, ಅತಿಥಿ ಉಪನ್ಯಾಸಕ (ಯಮನೂರಪ್ಪ)ರೊಬ್ಬರು ಖಾತ್ರಿ ಕೆಲಸದಲ್ಲಿ ತೊಡಗಿದ್ದಾರೆ.

ಸ್ಟೇರಿಂಗ್ ಹಿಡಿದ ಅತಿಥಿ ಶಿಕ್ಷಕ : ಉದ್ಯೋಗ ಖಾತ್ರಿ ಯೋಜನೆ ಹೊರತುಪಡಿಸಿ ಕೆಲವರು ತಮಗೆ ಅನುಭವವಿರುವ ಕೆಲಸದಲ್ಲಿ ತೊಡಗಿಕೊಂಡಿದ್ದಾರೆ. ತಾಲೂಕಿನ ಹೂಲಗೇರಾದ ಸಹಿಪ್ರಾಶಾಲೆಯ ಅತಿಥಿ ಶಿಕ್ಷಕ ಶಿವಕುಮಾರ ಬಾದವಾಡಗಿ ಲಾರಿ ಚಾಲಕನಾಗಿ ದುಡಿದರೆ, ಮದಲಗಟ್ಟಿ ಶಾಲೆಯ ಮಾನಪ್ಪ ಎನ್ನುವವರು ಹಣ್ಣಿನ ವ್ಯಾಪಾರ ಮಾಡುತ್ತಿದ್ದಾರೆ. ಮುದಿಯಪ್ಪ ಮುಳ್ಳೂರು ಎನ್ನುವವರು ಟೇಲರಿಂಗ್ ಮಾಡುತ್ತಿದ್ದಾರೆ.

ಟೀ ಸ್ಟಾಲ್‌ನನಿಂದ ನೆಮ್ಮದಿ: ಅನುದಾನ ರಹಿತ ಖಾಸಗಿ ಶಾಲೆಗಳ ಶಿಕ್ಷಕರ ಪರಿಸ್ಥಿತಿಯೂ ಇದಕ್ಕೆ ಹೊರತಾಗಿಲ್ಲ. ಬಿ.ಇಡಿ. ಪೂರ್ಣಗೊಳಿಸಿ ಖಾಸಗಿ ಶಾಲೆಯಲ್ಲಿ ವಿಜ್ಞಾನ(ಪಿಸಿಎಂಬಿ) ಶಿಕ್ಷಕರಾಗಿ ಕೆಲಸ ಮಾಡುತ್ತಿದ್ದ ತಾಲೂಕಿನ ಕಂದಕೂರಿನ ಶರಣಪ್ಪ ಮಂಗಳೂರು ಎನ್ನುವವರು ಪಟ್ಟಣದ ರಸ್ತೆ ಬದಿ ಟೀ ಸ್ಟಾಲ್ ಮಾಡಿಕೊಂಡಿದ್ದರೆ, ಬಿ.ಇಡಿ. ಪೂರ್ಣಗೊಳಿಸಿ ಖಾಸಗಿ ಶಾಲೆಯಲ್ಲಿ ಇಂಗ್ಲಿಷ್ ಬೋಧನೆ ಮಾಡುವ ತಾಲೂಕಿನ ಗುಮಗೇರಾದ ಸಹದೇವ ಕಂಬ್ಳಿ ಎನ್ನುವವರು ಕೃಷಿಯಲ್ಲಿ ತೊಡಗಿಸಿಕೊಂಡಿದ್ದಾರೆ. ಹೀಗೆ ದುಡಿಮೆಯ ಮಾರ್ಗ ಬದಲಿಸಿಕೊಂಡಿರುವವವರ ಪಟ್ಟಿ ದಿನದಿಂದ ದಿನಕ್ಕೆ ಬೆಳೆಯುತ್ತ ಸಾಗುತ್ತಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net