

ಕುಷ್ಟಗಿ: ಉದ್ಯೋಗ ಖಾತ್ರಿ ಯೋಜನೆಯ ಕೂಲಿ ಮೊತ್ತ ಹೆಚ್ಚಿಸುವುದು ಸೇರಿದಂತೆ ವಿವಿಧ ಬೇಡಿಕೆ ಈಡೇರಿಸುವಂತೆ ಒತ್ತಾಯಿಸಿ ಸಿಐಟಿಯು ನೇತೃತ್ವದಲ್ಲಿ ತಾಲೂಕಿನ ವಿವಿಧ ಗ್ರಾಮಗಳ ಕೂಲಿ ಕಾರ್ಮಿಕರು ಸೋಮವಾರ ತಾಪಂ ಕಚೇರಿ ಎದುರು ಪ್ರತಿಭಟನೆ ನಡೆಸಿದರು.
ದಿನದ ಕೂಲಿ ಮೊತ್ತವನ್ನು 600 ರೂ.ಗೆ ಹೆಚ್ಚಿಸಬೇಕು. ಸಕಾಲಕ್ಕೆ ಹಣ ಪಾವತಿಸಬೇಕು. ಮೊಬೈಲ್ ಹಾಜರಾತಿಯಿಂದ ತೊಂದರೆಯಾಗುತ್ತಿದ್ದು, ರದ್ದುಗೊಳಿಸಬೇಕು. ಕಾಮಗಾರಿ ನಡೆಯುವ ಸ್ಥಳದಲ್ಲಿ ಅಗತ್ಯ ಸೌಕರ್ಯ ಕಲ್ಪಿಸಬೇಕು ಎಂದು ಆಗ್ರಹಿಸಿದರು. ವಿವಿಧ ಗ್ರಾಮಗಳಿಂದ ಟ್ರ್ಯಾಕ್ಟರ್ ಮೂಲಕ ಆಗಮಿಸಿದ್ದ ಕೂಲಿಕಾರರು ತಾಲೂಕು ಆಡಳಿತದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು. ರೈತ ಮುಖಂಡರಾದ ಆರ್.ಕೆ.ದೇಸಾಯಿ, ಸಂಗನಗೌಡ ಪಾಟೀಲ್, ಸಂಗಪ್ಪ ತಳುವಗೇರಾ, ಕವಿತಾ, ಸಣ್ಣಸಿದ್ದನಗೌಡ ಇತರರಿದ್ದರು.