ಮಾ.31ರೊಳಗೆ ಕಾಮಗಾರಿ ಪೂರ್ಣಗೊಳಿಸಿ; ಅಧಿಕಾರಿಗಳಿಗೆ ಶಾಸಕ ಅಮರೇಗೌಡ ಪಾಟೀಲ್ ಬಯ್ಯಾಪುರ ಸೂಚನೆ

24012021 Kustagi MLA amaregouda bayyapura
Published on

ಕುಷ್ಟಗಿ: ರಸ್ತೆ ಹಾಗೂ ಚರಂಡಿ ಕಾಮಗಾರಿಗೆಂದು ಬಿಡುಗಡೆಯಾಗಿರುವ 4 ಕೋಟಿ ರೂ.ಗಳಿಗೆ ಈಗಾಗಲೇ ಟೆಂಡರ್ ಪ್ರಕ್ರಿಯೆ ಪೂರ್ಣಗೊಂಡಿದ್ದು, ಮಾ.31ರೊಳಗೆ ಕಾಮಗಾರಿ ಪೂರ್ಣಗೊಳಿಸುವಂತೆ ಅಧಿಕಾರಿಗಳಿಗೆ ಶಾಸಕ ಅಮರೇಗೌಡ ಪಾಟೀಲ್ ಬಯ್ಯಾಪುರ ಸೂಚಿಸಿದರು.

ಸಾರ್ವಜನಿಕರ ಚರಂಡಿ ಹಾಗೂ ರಸ್ತೆ ಕಾಮಗಾರಿಗಳ ಬೇಡಿಕೆ ಹಿನ್ನೆಲೆ ಭಾನುವಾರ ಬೆಳಗ್ಗೆ ವಿವಿದ ವಾರ್ಡ್‌ಗಳಿಗೆ ಭೇಟಿ ನೀಡಿ ಅಧಿಕಾರಿಗಳೊಂದಿಗೆ ಸಮಾಲೋಚಿಸಿದರು.

ಕಲ್ಯಾಣ ಕರ್ನಾಟಕ ಪ್ರದೇಶಾಭಿವೃದ್ಧಿ ಯೋಜನೆ ಅಡಿ ಬಿಡುಗಡೆಯಾಗಿರುವ 2ಕೋಟಿ ಅನುದಾನಕ್ಕೆ ಸಂಬಂಧಿಸಿ ಏಪ್ರಿಲ್‌ನಲ್ಲಿ ಕಾಮಗಾರಿ ಆರಂಭಿಸಬೇಕು. ತಮ್ಮ ವಿವೇಚನಾ ನಿಧಿಯಿಂದಲೂ ಹೆಚ್ಚುವರಿ 50 ಲಕ್ಷ ರೂ. ನೀಡಲಾಗುತ್ತಿದ್ದು, ತೀವ್ರ ಸಮಸ್ಯೆ ಇರುವ ವಾರ್ಡ್‌ಗಳಲ್ಲಿನ ಚರಂಡಿ ಕಾಮಗಾರಿಗೆ ಬಳಕೆ ಮಾಡುವಂತೆ ತಿಳಿಸಿದರು. ಪುರಸಭೆ ಅಧ್ಯಕ್ಷ ಜಿ.ಕೆ.ಹಿರೇಮಠ, ಸದಸ್ಯರಾದ ಮೈನುದ್ದೀನ್ ಮುಲ್ಲಾ, ರಾಜೇಶ ಪತ್ತಾರ, ಮುಖ್ಯಾಧಿಕಾರಿ ಅಶೋಕ ಪಾಟೀಲ್, ನೈರ್ಮಲ್ಯ ನಿರೀಕ್ಷಕ ಮಹೇಶ ಅಂಗಡಿ ಇತರರು ಇದ್ದರು.

ತಕ್ಷಣ ಕ್ರಮಕ್ಕೆ ಸೂಚನೆ: ಪುರಸಭೆ ಕಚೇರಿಗೆ ಭೇಟಿ ನೀಡಿದ ಶಾಸಕ ಅಮರೇಗೌಡ ಪಾಟೀಲ್ ಬಯ್ಯಾಪುರ, ಆವರಣದಲ್ಲಿ ಶೌಚಗೃಹದ ತ್ಯಾಜ್ಯ ಮಡುಗಟ್ಟಿ ನಿಂತಿರುವುದಕ್ಕೆ ಕಿಡಿ ಕಾರಿದರು. ಭಾನುವಾರ ರಜೆ ಎಂಬ ನೆಪ ಬೇಡ. ಕೂಡಲೇ ತ್ಯಾಜ್ಯ ನಿಲ್ಲದಂತೆ ಹಾಗೂ ಎಲ್ಲಿಯೂ ಹರಿಯದಂತೆ ಕ್ರಮ ಕೈಗೊಳ್ಳಬೇಕು. ಅಗತ್ಯವಿದ್ದಲ್ಲಿ ಹೊಸ ಪೈಪ್‌ಲೈನ್ ಅಳವಡಿಸಿಯಾದರೂ ನೈರ್ಮಲ್ಯ ಕಾಪಾಡುವಂತೆ ಅಧಿಕಾರಿಗಳಿಗೆ ಸೂಚಿಸಿದರು. ಕಚೇರಿ ಆವರಣದಲ್ಲಿ ತ್ಯಾಜ್ಯ ಮಡುಗಟ್ಟಿ ನಿಲ್ಲುತ್ತಿರುವ ಬಗ್ಗೆ ಜ.24ರಂದು ವಿಜಯವಾಣಿ ವರದಿ ಪ್ರಕಟಿಸಿದ್ದನ್ನು ಇಲ್ಲಿ ಸ್ಮರಿಸಬಹುದು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net