ಬಿಜೆಪಿಯವರು ಸತ್ತರೆ ಒಂದು ಕೋಟಿ ರೂ. ಪರಿಹಾರ; ಶಾಸಕ ಅಮರೇಗೌಡ ಪಾಟೀಲ್ ಬಯ್ಯಾಪುರ ಹೇಳಿಕೆ

06102021 Kustagi Congress Protest
Published on


ರೈತರ ಸಮಸ್ಯೆಗೆ ಸರ್ಕಾರ ಸ್ಪಂದಿಸುತ್ತಿಲ್ಲ ಎಂದು ಆಕ್ರೋಶ

ಕುಷ್ಟಗಿ: ಬಿಜೆಪಿ ಅತ್ಯಂತ ಕೆಟ್ಟ ಪಕ್ಷವಾಗಿದೆ. ಬಿಜೆಪಿ ತೊಲಗುವವರೆಗೆ ದೇಶಕ್ಕೆ ಭವಿಷ್ಯವಿಲ್ಲ ಎಂದು ಶಾಸಕ ಅಮರೇಗೌಡ ಪಾಟೀಲ್ ಬಯ್ಯಾಪುರ ಹೇಳಿದರು.

ಉತ್ತರ ಪ್ರದೇಶದಲ್ಲಿ ರೈತರ ಮೇಲೆ ನಡೆದ ಹಿಂಸಾಚಾರ ಖಂಡಿಸಿ ಕಾಂಗ್ರೆಸ್‌ನಿಂದ ಮಂಗಳವಾರ ಪಟ್ಟಣದಲ್ಲಿ ಹಮ್ಮಿಕೊಂಡಿದ್ದ ಪಂಜಿನ ಮೆರವಣಿಗೆ ಕಾರ್ಯಕ್ರಮದಲ್ಲಿ ಮಾತನಾಡಿದರು.ಉತ್ತರ ಪ್ರದೇಶದಲ್ಲಿ ಪ್ರತಿಭಟನಾ ನಿರತ ರೈತರ ಮೇಲೆ ಕೇಂದ್ರ ಸಚಿವರ ಪುತ್ರ ಉದ್ದೇಶಪೂರ್ವಕವಾಗಿ ಕಾರು ಚಲಾಯಿಸಿ 8 ಜನರ ಸಾವಿಗೆ ಕಾರಣನಾಗಿದ್ದಾನೆ. ಇದನ್ನು ಖಂಡಿಸಿ ದೇಶದ ಎಲ್ಲ ವಿರೋಧ ಪಕ್ಷಗಳು ಹೋರಾಟ ಮಾಡುತ್ತಿವೆ. ರೈತರ ಸಾವಿಗೆ ಕೇಂದ್ರ ಸರ್ಕಾರ 45 ಲಕ್ಷ ರೂ. ಬೆಲೆ ಕಟ್ಟುತ್ತಿದೆ. ಬಿಜೆಪಿಯವರು ಸತ್ತರೆ ಕಾಂಗ್ರೆಸ್ ಒಂದು ಕೋಟಿ ರೂ. ಪರಿಹಾರ ಕೊಡಲು ಸಿದ್ಧವಿದೆ ಎಂದು ಹೇಳಿದರು.

ಉತ್ತರ ಪ್ರದೇಶ, ಹರಿಯಾಣ ಹಾಗೂ ಚಂಡಿಗಢದ ರೈತರು ನ್ಯಾಯಸಮ್ಮತ ಬೇಡಿಕೆಗಳ ಈಡೇರಿಕೆಗೆ ಸುಮಾರು 11 ತಿಂಗಳಿಂದ ಪ್ರತಿಭಟನೆ ನಡೆಸುತ್ತಿದ್ದಾರೆ. ರೈತ ಪರ ಸರ್ಕಾರ ಎಂದು ಹೇಳಿಕೊಳ್ಳುವ ಬಿಜೆಪಿಯ ಯಾವ ನಾಯಕರೂ ಪ್ರತಿಭಟನೆಗೆ ಸ್ಪಂದಿಸುತ್ತಿಲ್ಲ ಎಂದು ದೂರಿದರು. ಯುವ ಕಾಂಗ್ರೆಸ್ ತಾಲೂಕು ಅಧ್ಯಕ್ಷ ಲಾಡ್ಲೇ ಮಷಾಕ್ ದೋಟಿಹಾಳ, ಪ್ರಮುಖರಾದ ದೊಡ್ಡಬಸನಗೌಡ ಪಾಟೀಲ್ ಬಯ್ಯಾಪುರ, ಉಮೇಶ ಮಂಗಳೂರು, ಸೈಯದ್ ಮುರ್ತುಜಾ, ಬ್ಲಾಕ್ ಕಾಂಗ್ರೆಸ್ ಪದಾಧಿಕಾರಿಗಳು ಹಾಗೂ ಕಾರ್ಯಕರ್ತರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net