ಬಡವರ ಸೇವೆಯಲ್ಲಿ ಶಿವನನ್ನು ಕಾಣಿರಿ; ಶಾಸಕ ಅಮರೇಗೌಡ ಪಾಟೀಲ್ ಬಯ್ಯಾಪುರ ಹೇಳಿಕೆ

23082020 Kustagi Amaregowda bayyapur
Published on

ಕುಷ್ಟಗಿ: ಜೀವನದ ಪಾಠ ಕಲಿಸುವ ಶಾಲೆ ಸಮಾಜವೇ ಆಗಿದೆ ಎಂದು ಶಾಸಕ ಅಮರೇಗೌಡ ಪಾಟೀಲ್ ಬಯ್ಯಾಪುರ ಹೇಳಿದರು.

ಪಟ್ಟಣದ ರೇಣುಕಾಚಾರ್ಯ ಮಂಗಲಭವನದಲ್ಲಿ ಹೋಪ್ ಚಾರಿಟೇಬಲ್ ಟ್ರಸ್ಟ್ ಆಯೋಜಿಸಿದ್ದ ಪ್ರತಿಭಾ ಪುರಸ್ಕಾರ ಕಾರ್ಯಕ್ರಮದಲ್ಲಿ ಭಾನುವಾರ ಮಾತನಾಡಿದರು. ಸಮಾಜದಿಂದ ನಿತ್ಯ ಒಂದಿಲ್ಲೊಂದು ಪಾಠ ಕಲಿಯುತ್ತಿರುತ್ತೇವೆ. ಹೀಗಾಗಿ ವ್ಯಕ್ತಿ ಸಮಾಜ ಜೀವಿಯಾಗಿ ಬಾಳಬೇಕು. ಸಮಾಜ ಹಾಗೂ ಸಾರ್ವಜನಿಕರ ಸೇವೆ ಮಾಡುವ ವ್ಯಕ್ತಿಗೆ ಎಲ್ಲೆಡೆ ಗೌರವ ಸನ್ಮಾನಗಳು ಪ್ರಾಪ್ತಿಯಾಗುತ್ತವೆ. ಉನ್ನತ ಅಧಿಕಾರ ಹೊಂದುವ ಪ್ರತಿಯೊಬ್ಬರೂ ಸಮಾಜದ ಕೆಳಸ್ತರದ ಜನರ ಸೇವೆ ಮಾಡಬೇಕಿದೆ. ಉಳ್ಳವರು ಶಿವಾಲಯ ಮಾಡುವ ಬದಲು ಬಡವರಿಗೆ ನೆರವಾಗುವ ಮೂಲಕ ಶಿವನನ್ನು ಕಾಣಬೇಕಿದೆ ಎಂದರು.

ಕಂಟ್ರೋಲರ್ ಆಫ್ ಡಿಫೆನ್ಸ್ ಅಕೌಂಟ್ಸ್‌ನ ಐಡಿಎಎಸ್ ಡಾ.ಜಯರಾಜ್ ನಾಯ್ಕ ಮಾತನಾಡಿ, ವಿದ್ಯಾರ್ಜನೆ ಮಾಡುವುದು ವ್ಯಕ್ತಿತ್ವ ನಿರ್ಮಾಣಕ್ಕೆ. ವಿದ್ಯಾವಂತರು ಎನಿಸಿಕೊಂಡವರು ಜೀವನವನ್ನು ಆದರ್ಶಮಯವನ್ನಾಗಿಸಿಕೊಳ್ಳಬೇಕಿದೆ. ಸಾಧನೆಯ ಮೆಟ್ಟಿಲು ಏರಿದಂತೆ ಸಿಂಹಾವಲಕೋನ ಮಾಡಿಕೊಳ್ಳುತ್ತಿರಬೇಕು ಎಂದರು.

ಮಾಜಿ ಶಾಸಕ ಕೆ.ಶರಣಪ್ಪ, ಕೊಪ್ಪಳ ಜಿಪಂನ ಲೆಕ್ಕಾಧಿಕಾರಿ ಅಮೀನ್ ಅತ್ತಾರ್, ಯುವ ಕಾಂಗ್ರೆಸ್ ಅಧ್ಯಕ್ಷ ಲಾಡ್ಲೇ ಮಷಾಕ್ ದೋಟಿಹಾಳ, ಟ್ರಸ್ಟ್‌ನ ಅಧ್ಯಕ್ಷ ದೇವಿಂದ್ರಗೌಡ ಪಾಟೀಲ್, ಪ್ರಮುಖರಾದ ಬಸವರಾಜ ಪಾಟೀಲ್, ದೊಡ್ಡಬಸನಗೌಡ ಪಾಟೀಲ್ ಬಯ್ಯಾಪುರ, ವೀರೇಶ್ವರ ತಾಳಿಕೋಟಿ, ಸಂತೋಷ ಪಟ್ಟಣಶೆಟ್ಟಿ, ರೋಹಿತ್ ಪಾಟೀಲ್ ಇತರರು ಇದ್ದರು. ಐಎಎಸ್ ಪರೀಕ್ಷೆ ಪಾಸ್ ಮಾಡಿರುವ ತಾಲೂಕಿನ ಕಂದಕೂರು ಗ್ರಾಮದ ರಮೇಶ ಗುಮಗೇರಿ ಅವರನ್ನು ಸನ್ಮಾನಿಸಲಾಯಿತು. ವಿವಿಧ ಕಾಲೇಜಿನ ವಿದ್ಯಾರ್ಥಿಗಳು ಪಾಲ್ಗೊಂಡಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net