

ಕುಷ್ಟಗಿ: ಕಾರ್ಮಿಕರ ಮಹತ್ವವವನ್ನು ಅರಿತು ಅವರಿಗೆ ವಿವಿಧ ಸೌಕರ್ಯ ಒದಗಿಸಬೇಕಿದೆ ಎಂದು ಪಟ್ಟಣದ ಜೆಎಂಎಫ್‌ಸಿ ಕೋರ್ಟ್‌ನ ಪ್ರಧಾನ ಸಿವಿಲ್ ನ್ಯಾಯಾಧೀಶ ಎಂ.ಎಲ್.ಪೂಜೇರಿ ಹೇಳಿದರು.
ಅಂತಾರಾಷ್ಟ್ರೀಯ ಕಾರ್ಮಿಕ ದಿನಾಚರಣೆ ನಿಮಿತ್ತ ತಾಲೂಕು ಕಾನೂನು ಸೇವಾ ಸಮಿತಿ, ಕಾರ್ಮಿಕ ಇಲಾಖೆ ಹಾಗೂ ವಕೀಲರ ಸಂಘದ ಸಹಯೋಗದಲ್ಲಿ ಕೋರ್ಟ್ ಸಭಾಂಗಣದಲ್ಲಿ ಏರ್ಪಡಿಸಿದ್ದ ಕಾನೂನು ಅರಿವು-ನೆರವು ಕಾರ್ಯಕ್ರಮ ಉದ್ಘಾಟಿಸಿ ಗುರುವಾರ ಮಾತನಾಡಿದರು.
ಕಾರ್ಮಿಕರು ಇಲ್ಲದ ದೇಶವನ್ನು ಊಹಿಸಿಕೊಳ್ಳಲೂ ಸಾಧ್ಯವಿಲ್ಲ. ಶ್ರಮಕ್ಕೆ ತಕ್ಕ ವೇತನ ನೀಡುವುದು ಮಾತ್ರವಲ್ಲ. ಕಾರ್ಮಿಕರ ಕುಟುಂಬದ ಆರೋಗ್ಯ ಹಾಗೂ ಆರ್ಥಿಕ ಮಟ್ಟ ಸುಧಾರಿಸಲು ಕಲ್ಯಾಣ ಕಾರ್ಯಕ್ರಮ ರೂಪಿಸುವ ಜವಾಬ್ದಾರಿ ಸರ್ಕಾರಗಳ ಮೇಲಿದೆ. ಕಾರ್ಮಿಕರಿಗಾಗಿ ಜಾರಿ ಮಾಡಲಾದ ಯೋಜನೆಗಳ ಕುರಿತು ತಿಳಿ ಹೇಳುವ ಹಾಗೂ ಯೋಜನೆಗಳನ್ನು ಅರ್ಹರಿಗೆ ತಲುಪಿಸುವ ಕಾರ್ಯವಾಗಬೇಕಿದೆ ಎಂದರು.
ಕರ್ನಾಟಕ ಕಟ್ಟಡ ಮತ್ತು ಇತರ ನಿರ್ಮಾಣ ಕಾರ್ಮಿಕ ಕಲ್ಯಾಣ ಮಂಡಳಿಯ ಕಾರ್ಯನಿರ್ವಾಹಕ ಅಧಿಕಾರಿ ಪಿ.ಹೇಮಂತಸಿಂಗ್ ಕಾರ್ಮಿಕರಿಗೆ ಸಿಗುವ ಸರ್ಕಾರಿ ಸೌಲಭ್ಯಗಳ ಕುರಿತು ಮಾಹಿತಿ ನೀಡಿದರು. ವಕೀಲರ ಸಂಘದ ಅಧ್ಯಕ್ಷ ಎಸ್.ಜಿ.ಪಾಟೀಲ್, ಸಹಾಯಕ ಸರ್ಕಾರಿ ಅಭಿಯೋಜಕ ಎಲ್.ರಾಯನಗೌಡ, ಅಪರ ಸರ್ಕಾರಿ ವಕೀಲ ಪರಸಪ್ಪ ಗುಜಮಾಗಡಿ, ಕಾರ್ಮಿಕ ನಿರೀಕ್ಷಕಿ ಡಿ.ನಿವೇದಿತಾ, ಪುರಸಭೆ ಆರೋಗ್ಯ ನಿರೀಕ್ಷಕ ಪ್ರಾಣೇಶ, ವಕೀಲ ಸಿ.ಎನ್.ಉಪ್ಪಿನ್, ಕೋರ್ಟ್ ಸಿಬ್ಬಂದಿ ಸುನೀಲ್ ಮಠ್ ಇತರರು ಇದ್ದರು. ಮದುವೆ, ಹೆರಿಗೆ ಹಾಗೂ ಅಪಘಾತ ಪ್ರಕರಣಗಳಿಗೆ ಸಂಬಂಧಿಸಿದಂತೆ ಅರ್ಹ ಕಾರ್ಮಿಕ ಫಲಾನುಭವಿಗಳಿಗೆ ಸಹಾಯಧನದ ಬಾಂಡ್‌ಗಳನ್ನು ಇದೇ ವೇಳೆ ವಿತರಿಸಲಾಯಿತು.