ಶ್ರೀಗಂಧ ಕಳ್ಳತನ ತಡೆಗೆ ಕ್ರಮ, ಡಿಸಿ ಸುರೇಶ ಬಿ. ಇಟ್ನಾಳ ಹೇಳಿಕೆ

visit to the District Collector
ಕುಷ್ಟಗಿಯ ಪ್ರಗತಿಪರ ರೈತ ದೇವೇಂದ್ರಪ್ಪ ಬಳೂಟಗಿ ಅವರನ್ನು ಗುರುವಾರ ತೋಟಕ್ಕೆ ಭೇಟಿ ನೀಡಿದ ಡಿಸಿ ಸುರೇಶ ಇಟ್ನಾಳ ಕೃಷಿಯಲ್ಲಿನ ಸಾಧನೆಗಾಗಿ ಗೌರವಿಸಿದರು. ಕೃಷಿ ಇಲಾಖೆ ಉಪ ನಿರ್ದೇಶಕ ರುದ್ರೇಶಪ್ಪ, ತೋಟಗಾರಿಕೆ ಇಲಾಖೆ ಉಪ ನಿರ್ದೇಶಕ ಕೃಷ್ಣಾ ಉಕ್ಕುಂದ, ಕೊಪ್ಪಳ ಕೃಷಿ ವಿಜ್ಞಾನ ಕೇಂದ್ರ ಮುಖ್ಯಸ್ಥ ರವಿ, ತಹಸೀಲ್ದಾರ್ ಅಶೋಕ ಶಿಗ್ಗಾವಿ ಇತರರಿದ್ದರು.
Published on

ಕುಷ್ಟಗಿ: ಜಿಲ್ಲೆಯಲ್ಲಿ ಅರಣ್ಯ ಕೃಷಿ ಪ್ರದೇಶ ಹೆಚ್ಚಬೇಕಿದೆ ಎಂದು ಜಿಲ್ಲಾಧಿಕಾರಿ ಸುರೇಶ ಬಿ. ಇಟ್ನಾಳ ಹೇಳಿದರು.

ಪಟ್ಟಣದ ಪ್ರಗತಿಪರ ರೈತ ದೇವೇಂದ್ರಪ್ಪ ಬಳೂಟಗಿ ಅವರ ತೋಟಕ್ಕೆ ಗುರುವಾರ ಭೇಟಿ ನೀಡಿ ಅಲ್ಲಿನ ಅರಣ್ಯ ಕೃಷಿ ವೀಕ್ಷಿಸಿ ಮಾತನಾಡಿದರು.

ಗಿಡ-ಮರಗಳ ಸಂಖ್ಯೆ ಹೆಚ್ಚಾಗಬೇಕಿದೆ. ರೈತರು ಆಹಾರಧಾನ್ಯಗಳ ಜತೆಗೆ ಮಾವು, ಶ್ರೀಗಂಧ, ತೇಗ ಇತರ ಬಹುವಾರ್ಷಿಕ ಫಲ ನೀಡುವ ಗಿಡಗಳನ್ನು ಬೆಳೆಸಬೇಕು. ಗಿಡಗಳ ಸಂಖ್ಯೆ ಹೆಚ್ಚುವುದರ ಜತೆಗೆ ರೈತರ ಆದಾಯವೂ ಹೆಚ್ಚುತ್ತದೆ. ಔಷಧ ಮತ್ತು ಸುಗಂಧ ಸಸ್ಯ ಎಂದು ಪರಿಗಣಿಸಿರುವ ಶ್ರೀಗಂಧ ಮರಗಳನ್ನು ಬೆಳೆಸಲು ರೈತರಿಗೆ ಉತ್ತೇಜನ ನೀಡಬೇಕಿದೆ.

ಆ ಮೂಲಕ ಈ ಭಾಗದಲ್ಲಿಯೂ ಮಲೆನಾಡು ಸೃಷ್ಟಿಸಬೇಕಿದೆ. ರೈತ ದೇವೇಂದ್ರಪ್ಪ ಬಳೂಟಗಿ ಅವರ ಅರಣ್ಯ ಕೃಷಿ ಬಹುತೇಕ ರೈತರಿಗೆ ಮಾದರಿಯಾಗಿದೆ. ಬೆಲೆ ಬಾಳುವ ಶ್ರೀಗಂಧ ಮರಗಳನ್ನು ಕತ್ತರಿಸಿ ಕಳ್ಳತನ ಮಾಡಲಾಗುತ್ತಿದ್ದರಿಂದ ರಕ್ಷಣೆ ಸವಾಲಾಗಿ ಪರಿಣಮಿಸಿದೆ. ಕಳ್ಳತನ ತಡೆಗೆ ಕ್ರಮ ಕೈಗೊಳ್ಳುವುದು ಸದ್ಯದ ಅನಿವಾರ್ಯವಾಗಿದೆ. ಅರಣ್ಯ, ತೋಟಗಾರಿಕೆ, ಕೃಷಿ ಹಾಗೂ ಪೊಲೀಸ್ ಇಲಾಖೆ ಅಧಿಕಾರಿಗಳ ಸಭೆ ಸೇರಿಸಿ ಶ್ರೀಗಂಧ ಕಳ್ಳತನ ತಡೆಗೆ ಅಗತ್ಯ ಕ್ರಮ ಕೈಗೊಳ್ಳುವುದಾಗಿ ಹೇಳಿದರು.

ಕೃಷಿ ಇಲಾಖೆ ಉಪ ನಿರ್ದೇಶಕ ರುದ್ರೇಶಪ್ಪ, ತೋಟಗಾರಿಕೆ ಇಲಾಖೆ ಉಪ ನಿರ್ದೇಶಕ ಕೃಷ್ಣಾ ಉಕ್ಕುಂದ, ಕೊಪ್ಪಳ ಕೃಷಿ ವಿಜ್ಞಾನ ಕೇಂದ್ರ ಮುಖ್ಯಸ್ಥ ರವಿ, ತಹಸೀಲ್ದಾರ್ ಅಶೋಕ ಶಿಗ್ಗಾವಿ, ಪ್ರಮುಖರಾದ ಬಸೆಟೆಪ್ಪ ಕುಂಬಳಾವತಿ, ಬಸವರಾಜ ಕುದರಿಮೋತಿ, ಈರಪ್ಪ ಬಳಿಗಾರ, ಹಂಪನಗೌಡ ಬಳೂಟಗಿ, ಎಸ್.ಎಚ್.ಹಿರೇಮಠ, ಅಶೋಕ ಬಳೂಟಗಿ, ಎಸ್.ಪಿ.ಬಿಜಕಲ್, ರಮೇಶ ಬಳೂಟಗಿ, ನಾಗಪ್ಪ ಸೂಡಿ, ಬಸವರಾಜ ಬಳೂಟಗಿ, ಅಪ್ಪಣ್ಣ ನವಲೆ ಇತರರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net