

ಕುಷ್ಟಗಿ: ರೈತರೊಬ್ಬರು ದಾಳಿಂಬೆ ಬೆಳೆಯಲು ಬ್ಯಾಂಕಿನಿಂದ ಪಡೆದ ಐದು ಲಕ್ಷ ರೂ. ಸಾಲವೀಗ ಬಡ್ಡಿ ಸೇರಿ 30 ಲಕ್ಷ ರೂ. ಆಗಿದೆ ! ಸಾಲ ಮರು ಪಾವತಿಸುವಂತೆ ಲೀಗಲ್ ನೋಟಿಸ್ ಜಾರಿ ಮಾಡಿದ್ದಾರೆ ಬ್ಯಾಂಕ್ ವ್ಯವಸ್ಥಾಪಕರು !
ತಾಲೂಕಿನ ತಾವರಗೇರಾದ ಶಂಕ್ರಮ್ಮ ಉಪ್ಪಳ ಎನ್ನುವವರು 2008ರಲ್ಲಿ ಅಲ್ಲಿನ ಕರ್ನಾಟಕ ಗ್ರಾಮೀಣ ಬ್ಯಾಂಕಿನಿಂದ 5.81 ಲಕ್ಷ ರೂ. ಸಾಲ ಪಡೆದಿದ್ದರು. ದುಂಡಾಣು ಅಂಗಮಾರಿ ರೋಗಕ್ಕೆ ಬೆಳೆನಷ್ಟ ಉಂಟಾಗಿದ್ದರಿಂದ ಸಾಲ ಮರುಪಾವತಿಸಿರಲಿಲ್ಲ. ಅವರು ಪಡೆದ ಸಾಲವೀಗ ಬಡ್ಡಿ ಮೊತ್ತ ಸೇರಿ 30.10 ಲಕ್ಷ ರೂ. ಆಗಿದೆ. ಸಹ ಸಾಲಗಾರರೆಂದು ಪ್ರಾಮಿಸರಿ ನೋಟ್‌ಗೆ ಸಹಿ ಮಾಡಿದ ವಿಠಲಾಪುರ ಗ್ರಾಮದ ನಾದಿರ್ ಪಾಷಾ ಹಾಗೂ ಸಾಲಕ್ಕಾಗಿ ಅಡಮಾನ ಇಟ್ಟ ಜಮೀನು ಖರೀದಿಸಿರುವ ತಾವರಗೇರಾದ ವಿಠಲ್‌ಸಿಂಗ್, ರಾಮ್‌ಸಿಂಗ್‌ಗೂ ನೋಟಿಸ್ ಹೋಗಿದೆ.
ರಾಜ್ಯದ 13 ಜಿಲ್ಲೆಯ ದಾಳಿಂಬೆ ಬೆಳೆಗಾರರು ಕಳೆದ 15 ವರ್ಷಗಳಿಂದ ಸಾಲ ಮನ್ನಾಕ್ಕಾಗಿ ನಿರಂತರ ಹೋರಾಟ ಮಾಡುತ್ತ ಬಂದಿದ್ದಾರೆ. ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ, ತಮ್ಮ ಅಧಿಕಾರಾವಧಿಯಲ್ಲಿ ಬಜೆಟ್‌ನಲ್ಲಿ ದಾಳಿಂಬೆ ಬೆಳೆಗಾರರ ಸಂಕಷ್ಟ ಪರಿಹಾರಕ್ಕೆಂದು ಮೀಸಲಿಟ್ಟರುವ 150 ಕೋಟಿ ರೂ.ಯನ್ನು ಹಾಲಿ ಸಿಎಂ ಬೇರೆ ಇಲಾಖೆಗೆ ವರ್ಗಾವಣೆ ಮಾಡಿರುವುದರಿಂದ ದಾಳಿಂಬೆ ಬೆಳೆಗಾರರು ಸಂಕಷ್ಟ ಎದುರಿಸುವಂತಾಗಿದೆ.
ದಾಳಿಂಬೆ ಬೆಳೆಗಾರರ ಸಮಸ್ಯೆಗೆ ಸ್ಪಂದಿಸುವ ಕಾರ್ಯವನ್ನು ಸರ್ಕಾರ ಮಾಡಬೇಕಿದೆ ಎಂದು ಅಖಿಲ ಕರ್ನಾಟಕ ದಾಳಿಂಬೆ ಬೆಳೆಗಾರ ರೈತರ ಹೋರಾಟ ಸಮಿತಿ ರಾಜ್ಯಾಧ್ಯಕ್ಷ ಅಬ್ದುಲ್ ನಯೀಮ್ ಒತ್ತಾಯಿಸಿದ್ದಾರೆ.